

ಮಹಾರಾಷ್ಟ್ರ: ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಧಾವಿಸುವ ರೋಗಿಗಳು, ನಾನಾ ಖಾಯಿಲೆಯಿಂದ ಗುಣಮುಖರಾಗಲು ವೈದ್ಯರನ್ನು ಹುಡುಕಿಕೊಂಡು ಬರುತ್ತಾರೆ. ರೋಗಕ್ಕೆ ಮದ್ದು ಕೊಡುವುದರ ಜತೆಗೆ ಬುದ್ಧಿ ಮಾತುಗಳನ್ನು ತಿಳಿ ಹೇಳಿಬೇಕಾದ ವೈದ್ಯರೇ, ತಮ್ಮ ಕರ್ತವ್ಯ ಮರೆತು ಮನಬಂದಂತೆ ವರ್ತಿಸಿದರೆ ಮುಂದೇನು? ಇಂತಹದ್ದೊಂದು ಘಟನೆ ಈ ಹಿಂದೆ ಔರಂಗಾಬಾದ್ ಎಂದು ಕರೆಯಲ್ಪಡುತ್ತಿದ್ದ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಿಡ್ಕಿನ್ ಗ್ರಾಮಾಂತರ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಆಸ್ಪತ್ರೆಯ ಆವರಣದಲ್ಲಿ ಬೆತ್ತಲೆಯಾಗಿ ಓಡಾಡುತ್ತಿರುವುದು ಕಟ್ಟಡದೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಘಟನೆ ನಡೆದ ಬೆನ್ನಲ್ಲೇ ವಿಡಿಯೋ ಪರಿಶೀಲಿಸಿದ ಬಳಿಕ ತಿಳಿದುಬಂದದ್ದು, 45 ವರ್ಷದ ವೈದ್ಯ ವ್ಯಸನದಿಂದ ಬಳಲುತ್ತಿದ್ದ ಕಾರಣ ಆತ ಆಸ್ಪತ್ರೆಯಲ್ಲಿ ಬೆತ್ತಲೆಯಾಗಿ ತಿರುಗಾಡಿದ್ದಾನೆ ಎಂದು ವರದಿಯಾಗಿದೆ. ಹರಿದಾಡುತ್ತಿರುವ ವೀಡಿಯೊದಲ್ಲಿ, ವೈದ್ಯ ಆಸ್ಪತ್ರೆಯ ಲಾಬಿಯಲ್ಲಿ ಬೆತ್ತಲೆಯಾಗಿ ತಿರುಗುತ್ತಿರುವುದು ಕಂಡುಬಂದಿದೆ. ಕೈಯಲ್ಲಿ ಬಟ್ಟೆಯ ತುಂಡನ್ನು ಹಿಡಿದು, ಮುಗ್ಗರಿಸುತ್ತಾ ಆವರಣದಲ್ಲಿ ಓಡಾಡಿದ್ದಾನೆ.
ತನಿಖೆ ಕೈಗೊಂಡ ಪೊಲೀಸರು: ಆರೋಗ್ಯ ಸೇವೆಗಳ ಮೇಲ್ವಿಚಾರಣೆಯ ಜಿಲ್ಲಾ ಸಿವಿಲ್ ಸರ್ಜನ್ ಡಾ. ದಯಾನಂದ ಮೋತಿಪಾವ್ಲೆ ಪರಿಸ್ಥಿತಿಯನ್ನು ತಿಳಿಸಿದ್ದು, ತನಿಖೆ ನಡೆಯುತ್ತಿದೆ ಎಂದು ದೃಢಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ. ಆದರೆ, ವೈದ್ಯ ಯಾವ ವಸ್ತುವಿನಿಂದ ಅಮಲಿನಲ್ಲಿದ್ದರು ಎಂಬುದರ ಮಾಹಿತಿ ಇಲ್ಲಿಯವರೆಗೆ ವರದಿಯಾಗಿಲ್ಲ ಹಾಗೂ ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಅವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ,(ಏಜೆನ್ಸೀಸ್).