ಸಾರಿಗೆ ಮುಷ್ಕರ ಹೆಸರಲ್ಲಿ ಚೇಷ್ಟೆ ಮಾಡಿದರೆ ಸುಮ್ನೆ ಬಿಡಲ್ಲ: ಕಮಲ್ ಪಂತ್

kamal panth
Published on

ಬೆಂಗಳೂರು: ಮುಷ್ಕರದ ಹೆಸರಿನಲ್ಲಿ ಚೇಷ್ಟೆ ಮಾಡಿದರೆ ಅಂತಹವರನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ವಾಹನ ಸವಾರರಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಅವರು, ಏ.21ರ ವರೆಗೆ ಕರೊನಾ ಹಿನ್ನೆಲೆಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿದೆ. ಕೋವಿಡ್ ಪ್ರೋಟೋಕಾಲ್ ಇರುವ ಕಾರಣಯಾವ ಪ್ರತಿಭಟನೆಗೂ ಅಕಾಶಗಳಿಲ್ಲ. ಪ್ರತಿಭಟನೆ ನಡೆಸಿದರೆ ಅಂತಹವರನ್ನು ಬಂಧಿಸಲಾಗುವುದು. ಎಲ್ಲ ರೀತಿಯ ಬಂದೋಬಸ್ತ್‌ಗೂ ಪೊಲೀಸರು ತಯಾರಾಗಿದ್ದೇವೆ. ಸರ್ಕಾರಿ ಸೊತ್ತನ್ನು ಹಾನಿ ಮಾಡುವುದು ಅಥವಾ ಇತರ ವಾಹನ ಸವಾರರಿಗೆ ತೊಂದರೆ ಕೊಟ್ಟರೆ ಅಂತಹವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಯಾರಿಗೂ ಅಡ್ಡಿಪಡಿಸುವಂತಿಲ್ಲ: ಪರ್ಮಿಟ್ ತೆಗೆದುಕೊಂಡು ಸಾರ್ವಜನಿಕರಿಗೆ ಸೇವೆ ಮಾಡಲು ಬರುವ ವಾಹನ ಸವಾರರಿಗೆ ಸೂಕ್ತ ಭದ್ರತೆ ಕಲ್ಪಿಸಲಾಗುವುದು. ಮುಷ್ಕರದ ನೆಪದಲ್ಲಿ ರಸ್ತೆಯ ಮೇಲೆ ಬಂದು ಯಾರಿಗಾದರೂ ಅಡ್ಡಿ ಪಡಿಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ರಸ್ತೆಗಿಳಿದು ಕಲ್ಲು ತೂರಾಟ ರಸ್ತೆ ತಡೆ ಮಾಡಿದರೆ ಅಥವಾ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಯಾರಾದರೂ ಚೇಷ್ಟೆ ಮಾಡಿದರೆ ಅಂತಹವರನ್ನು ಬಂಧಿಸುತ್ತೇವೆ. ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್‌ನಲ್ಲಿ ಭದ್ರತೆ ಕೊಡುತ್ತೇವೆ. ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಭದ್ರತೆ ಕುರಿತು ಚರ್ಚಿಸಲಾಗಿದೆ. ನಾಳೆ ಸರ್ಕಾರಿ ಬಸ್ ಇಲ್ಲದಿದ್ದರೆ ಖಾಸಗಿಯವರು ಸಹಕಾರ ನೀಡಿದರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕಮಲ್ ಪಂತ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net