ಮಗನ ಜತೆ ಮಗಳ ಮದುವೆ! ಕಳೆದು ಹೋಗಿದ್ದ ಮಗಳನ್ನೇ ಸೊಸೆಯಾಗಿ ತಂದುಕೊಂಡ ತಾಯಿ!

china
Published on

ಬೀಜಿಂಗ್​: ಒಂದೇ ತಾಯಿಯ ಮಕ್ಕಳನ್ನು ಗಂಡ ಹೆಂಡತಿಯನ್ನಾಗಿ ಕಲ್ಪಿಸಿಕೊಳ್ಳುವುದೂ ಕಷ್ಟ. ಅಣ್ಣ ತಂಗಿಯಾಗಿ ಜತೆ ಬೆಳೆಯುವ ಮಕ್ಕಳಿಗೆ ದಾಂಪತ್ಯ ಜೀವನ ಕೊಡುವುದು ಭಾರತ ಸೇರಿ ಅನೇಕ ರಾಷ್ಟ್ರಗಳಲ್ಲಿ ಒಪ್ಪಿಗೆಯಾಗದ ಮಾತು. ಸುಮಾರು ವರ್ಷಗಳ ಹಿಂದೆಯೇ ಮಗಳನ್ನು ಕಳೆದುಕೊಂಡಿದ್ದ ತಾಯಿಯೊಬ್ಬಳಿಗೆ ಮಗನ ಮದುವೆಯಲ್ಲಿ ಮಗಳು ವಾಪಾಸು ಸಿಕ್ಕಿರುವ ಘಟನೆ ಚೀನಾದಲ್ಲಿ ನಡೆದಿದೆ. ಆದರೆ ಮಗಳೇ ವಧುವಾಗಿದ್ದು, ತೀರಾ ಸಂಕಷ್ಟದ ಪರಿಸ್ಥಿತಿಗೆ ತಾಯಿ ಸಿಕ್ಕಿದ್ದಾಗಿ ವರದಿಯಾಗಿದೆ.

ಮಾರ್ಚ್​ 31ರಂದು ಮದುವೆ ಸಂಭ್ರಮ ಶುರುವಾಗಿತ್ತು. ಮದುವೆ ಮಂಟಪವೇರಿದ ಮಗನಿಗೆ ಎದುರಾಗಿ ವಧು ಬಂದು ನಿಂತಿದ್ದಳು. ಆಗ ಅವಳಲ್ಲಿ ಬರ್ತ್​ಮಾರ್ಕ್​ ಒಂದನ್ನು ವರನ ತಾಯಿ ಗಮನಿಸಿದ್ದಾಳೆ. ತಕ್ಷಣ ವಧುವಿನ ತಾಯಿ ತಂದೆ ಎಂದು ಕರೆದುಕೊಂಡಿದ್ದವರ ಬಳಿ ಹೋಗಿ ವಿಚಾರಿಸಿದ್ದಾಳೆ. ಆಗ ಅವರು ನಿಜಾಂಶವನ್ನು ಹೊರಗಿಟ್ಟಿದ್ದಾರೆ. 20 ವರ್ಷಗಳ ಹಿಂದೆ ಹೆಣ್ಣು ಮಗು ರಸ್ತೆ ಬದಿಯಲ್ಲಿ ಸಿಕ್ಕಿದ್ದಾಗಿ ತಿಳಿಸಿದ್ದಾರೆ. ಆಗ ಅದು ತಾನು ಕಳೆದುಕೊಂಡಿದ್ದ ಹೆಣ್ಣು ಮಗುವೇ ಎನ್ನುವುದು ವರನ ತಾಯಿಗೆ ತಿಳಿದುಬಂದಿದೆ.

20 ವರ್ಷವಾದರೂ ತನ್ನ ನಿಜವಾದ ತಂದೆ ತಾಯಿಯ ಬಗ್ಗೆ ಅರಿವೇ ಇಲ್ಲದ ಬೆಳೆದಿದ್ದ ವಧುವಿಗೆ ಆಗ ವಿಚಾರ ತಿಳಿದು ಸಂತೋಷ ನೂರ್ಮಡಿಯಾಗಿದೆ. ಆದರೆ ತನ್ನ ಅಣ್ಣನೊಂದಿಗೇ ಮದುವೆಯಾಗಲು ಹೊರಟಿದ್ದ ಬಗ್ಗೆ ನೋವುಂಟಾಗಿದೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಆ ವಿಚಾರಕ್ಕೂ ಬ್ರೇಕ್​ ಬಿದ್ದಿದೆ.

ಮಗಳು ಕಳೆದುಕೊಂಡ ನೋವಿನಲ್ಲಿದ್ದ ಕುಟುಂಬ ಎಲ್ಲೆಡೆ ಮಗಳಿಗಾಗಿ ಹುಡುಕಾಡಿತ್ತಂತೆ. ಆದರೆ ಎಲ್ಲಿಯೂ ಆಕೆ ಸಿಗದಿದ್ದಾಗ ಬೇರೊಬ್ಬ ಗಂಡು ಮಗುವನ್ನು ದತ್ತು ತೆಗೆದುಕೊಂಡು ತಮ್ಮ ಮಗನಂತೆ ಸಾಕಲಾರಂಭಿಸಿತ್ತಂತೆ. ಇದೀಗ ಅದೇ ಮಗ ಮದುವೆ ಮಂಟಪದಲ್ಲಿದ್ದ. ಹಾಗಾಗಿ ವಧು ವರರಿಬ್ಬರು ಒಂದೇ ತಾಯಿಯ ಮಕ್ಕಳಲ್ಲ ಎನ್ನುವುದು ಅಲ್ಲಿ ಸ್ಪಷ್ಟವಾಗಿದೆ. ಅದಾದ ನಂತರ ವಿಶೇಷ ಖುಷಿಯಲ್ಲಿ ಮದುವೆ ಮಾಡಲಾಗಿದೆ. ತನ್ನ ಮಗಳನ್ನು ತಾಯಿ ಸೊಸೆ ರೂಪದಲ್ಲಿ ಮನೆ ತುಂಬಿಸಿಕೊಂಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net