ಕಡೆಗೂ ಪೊಲೀಸರ ಬಲೆಗೆ ಬಿದ್ದ ಖತರ್​ನಾಕ್​ ಕಳ್ಳರ ಗ್ಯಾಂಗ್! ಲಪಟಾಯಿಸಿದ್ದು 120 ಫೋನ್​, ಇದರ ಒಟ್ಟು ಮೌಲ್ಯ ಎಷ್ಟು ಗೊತ್ತೇ?

Untitled design - 2024-02-18T163515.512
Published on

ಬೆಂಗಳೂರು: ಈ ಹಿಂದಿನಿಂದಲೂ ರಾಜ್ಯ ರಾಜಧಾನಿಯಲ್ಲಿ ಕಳ್ಳರ ಗ್ಯಾಂಗ್ ತಮ್ಮ ಕೈಚಳಕವನ್ನು ತೋರುತ್ತಲೆ ಇತ್ತು. ಈ ಬಗ್ಗೆ ಪೊಲೀಸರು ಜನಸಾಮಾನ್ಯರಿಗೆ ನಿಮ್ಮ ಸಾಮಾನು, ಇತರೆ ಬೆಲೆ ಬಾಳುವ ವಸ್ತುಗಳ ಮೇಲೆ ಜಾಗರೂಕರಾಗಿರಿ, ಎಚ್ಚರಿಕೆ ವಹಿಸಿ ಎಂದು ಬಿತ್ತಿ ಪತ್ರಗಳ ಮೂಲಕ ಸಂದೇಶ ರವಾನಿಸುತ್ತಿದ್ದರು. ಆದರೂ ಸಹ ಜನರು ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುವಾಗ ಮೊಬೈಲ್, ಪರ್ಸ್​ಗಳನ್ನು ಕಳೆದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದರು. ಇದೀಗ ನಗರ ಪೊಲೀಸರು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಐಟಿ-ಬಿಟಿ ಪ್ರದೇಶಗಳಲ್ಲಿ ಮಹಿಳಾ ಜೇಬುಗಳ್ಳರ ತಂಡವನ್ನು ಪತ್ತೆಹಚ್ಚಿದ್ದು, ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಖತರ್​ನಾಕ್ ಗ್ಯಾಂಗ್​ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರನ್ನು ಟಾರ್ಗೆಟ್ ಮಾಡಿ, ಅವರ ಮೊಬೈಲ್ ಫೋನ್‌ಗಳನ್ನು ಕದಿಯುವುದನ್ನೇ ವೃತ್ತಿ ಮಾಡಿಕೊಂಡಿತ್ತು. ನಗರ ಪೊಲೀಸರು ಮಹತ್ವದ ಪ್ರಗತಿಯಲ್ಲಿ ಈ ಅಂತರರಾಜ್ಯ ಮೊಬೈಲ್ ಕಳ್ಳರ ಖತರ್​ನಾಕ್​ ಗ್ಯಾಂಗ್​ ಅನ್ನು ತಮ್ಮ ಖೆಡ್ಡಾಗೆ ಬೀಳಿಸಿದ್ದು, ಬರೋಬ್ಬರಿ 30 ಲಕ್ಷ ರೂಪಾಯಿ ಮೌಲ್ಯದ 120 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಧಾ, ನಂದಿನಿ, ಸುಜಾತ ಮತ್ತು ಶಂಕರಮ್ಮ ಎಂಬ ಸದಸ್ಯರನ್ನು ಒಳಗೊಂಡಿರುವ ಗ್ಯಾಂಗ್ ಆಂಧ್ರಪ್ರದೇಶದ ಅನಂತಪುರದಿಂದ ಬೆಂಗಳೂರಿಗೆ ಬಂದಿತ್ತು. ಆದರೆ, ಬೆಂಗಳೂರಿಗೆ ಬಂದ ಮೇಲೆ ನಗರದ ಹೊರವಲಯದಲ್ಲಿರುವ ಹೊಸಕೋಟೆ ಬಳಿಯ ಚೊಕ್ಕನಹಳ್ಳಿಯಲ್ಲಿ ಉಳಿದುಕೊಂಡಿದ್ದರು. ಅಲ್ಲಿಂದ, ಅವರು ತಮ್ಮ ಅಪರಾಧ ಚಟುವಟಿಕೆಗಳನ್ನು ಮಾಡುತ್ತಿದ್ದರು. ಪ್ರಯಾಣಿಕರು, ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ಓಡಾಡುತ್ತಿದ್ದ ಬಿಎಂಟಿಸಿ ಬಸ್‌ಗಳನ್ನೇ ಟಾರ್ಗೆಟ್​ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಹದೇವಪುರ ಠಾಣೆ ಪೊಲೀಸರು ಗುಪ್ತಚರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹತ್ವದ ವಶದಲ್ಲಿ, ಅಧಿಕಾರಿಗಳು ಆರೋಪಿ ಮಹಿಳೆಯರಿಂದ ಅಂದಾಜು 30 ಲಕ್ಷ ರೂ. ಮೌಲ್ಯದ 120 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net