

ಬೆಂಗಳೂರು: ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ನಗರ ಬಂದ್ಗೆ ಕರೆ ನೀಡಿದ ಪರಿಣಾಮ ನಿರೀಕ್ಷೆಯಂತೆ ಖಾಸಗಿ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಪರಿಣಾಮ ನಮ್ಮ ಮೆಟ್ರೋ ರೈಲಿನಲ್ಲಿ ಬೆಳಗ್ಗಿನಂದಲೇ ಜನ ದಟ್ಟಣೆ ಕಂಡು ಬಂತು. ಪ್ರಯಾಣಿಕರು ಸರತಿ ಸಾಲಿನಲ್ಲಿ ರೈಲು ಹತ್ತುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಬೆಳಗ್ಗಿನ ಹೊತ್ತಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 8 ರಿಂದ 11.30ರ ವರೆಗೆ ಪ್ರತಿ 5 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲುಗಳು ಸಂಚರಿಸಿದವು. ಸಂಜೆ 5 ರಿಂದ 8 ಗಂಟೆ ವರೆಗೆ ಪೀಕ್ ಅವರ್ನ್ನು ವಿಸ್ತರಿಸಲಾಗಿತ್ತು. ಉಳಿದ ಸಮಯದಲ್ಲಿ 10 ನಿಮಿಷಗಳ ಬದಲಾಗಿ 6 ನಿಮಿಷಗಳಿಗೆ ಒಂದರಂತೆ ರೈಲುಗಳು ಸಂಚರಿಸಿದವು.
ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಮುಂಜಾನೆಯಿಂದಲೇ ಪ್ರಯಾಣಿಕರ ದಟ್ಟಣೆ ಕಂಡು ಬಂತು. ಉಳಿದಂತೆ ಮಹಾತ್ಮ ಗಾಂಧಿ ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ರಾಜರಾಜೇಶ್ವರಿ ನಗರ, ಕೆ.ಆರ್. ಮಾರುಕಟ್ಟೆ, ಚಿಕ್ಕಪೇಟೆ, ಬನಶಂಕರಿ, ರಾಜಾಜಿನಗರ ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಯಾಣಿಕರಿದ್ದರು.