

ಕೋಲ್ಕತ್ತ: ಕರೊನಾ ತಡೆಗೆ ಲಾಕ್ಡೌನ್ ಪರಿಹಾರವಲ್ಲ ಕರ್ನಾಟಕ ಘೋಷಿಸಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಆದರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇನ್ನೂ ಒಂದು ತಿಂಗಳು ರಾಜ್ಯದ ಎಲ್ಲ ಕಂಟೇನ್ಮೆಂಟ್ ಝೋನ್ಗಳಲ್ಲಿ ಲಾಕ್ಡೌನ್ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಲಾಕ್ಡೌನ್ ಜಾರಿಯಲ್ಲಿದೆ. ಇದು ಆಗಸ್ಟ್ 31ರವರೆಗೆ ಮುಂದುವರಿಯಲಿದೆ ಎಂದು ಸಿಎಂ ಪ್ರಕಟಿಸಿದ್ದಾರೆ. ಇದಲ್ಲದೇ ಎರಡು ವಾರಕ್ಕೊಮ್ಮೆ ಸಂಪೂರ್ಣ ಬಂದ್ ಜಾರಿಯಲ್ಲಿರಲಿದೆ.
ಜೀವನಾವಶ್ಯಕ ವಸ್ತುಗಳು, ತುರ್ತ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿರಲಿವೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಬ್ಯಾಂಕ್ಗಳು, ಇತರ ವಾಣಿಜ್ಯ ಸಂಸ್ಥೆಗಳು, ಸಾರ್ವಜನಿಕ ಸಾರಿಗೆಯನ್ನು ಬಂದ್ ಮಾಡಲಾಗಿದೆ.
ಆದರೆ, ಆಯಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ವಿವಿಧ ಕಾಲಾವಧಿ, ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಅಂಗಡಿಗಳನ್ನು ತೆರೆಯಲು ಹಾಗೂ ಅಗತ್ಯ ಸೇವೆಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ. ಪೆಟ್ರೋಲ್ ಬಂಕ್ಗಳಿಗೂ ಕೂಡ ಸಮಯ ಮಿತಿ ವಿಧಿಸಲಾಗಿದೆ.
ಮಾಸ್ಕ್ ಧರಿಸದೇ ಯಾರೇ ಹೊರ ಬಂದರೂ ದಂಡ ವಿಧಿಸಲಾಗುತ್ತಿದೆ. ನೆರೆಯ ರಾಜ್ಯಗಳಿಂದ ಬರುವವರಿಗೆ ಹಾಗೂ ಹೋಗುವವರಿಗೆ ಇ-ಪಾಸ್ ನೀಡಲಾಗುತ್ತಿದೆ. ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ಪಶ್ಚಿಮ ಬಂಗಾಳದಲ್ಲಿ 62,964 ಸೋಂಕಿತರಿದ್ದು, ಇದರಲ್ಲಿ 19,493 ಸಕ್ರಿಯ ಪ್ರಕರಣಗಳಿವೆ. ಈವರೆಗೆ 1,449 ಜನರು ಮೃತಪಟ್ಟಿದ್ದಾರೆ.