

ಬೆಂಗಳೂರು: ಗಡಿಭಾಗದ ಕಳ್ಳಮಾರ್ಗಗಳ ಮೂಲಕ ರಾಜ್ಯದೊಳಗೆ ಪ್ರವೇಶ ಮಾಡುತ್ತಿರುವ ಪ್ರಕರಣ ಹೆಚ್ಚುತ್ತಿರುವುದರಿಂದ ಗಡಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಬರುತ್ತಿರುವ ಜನರಿಂದಲೇ ಕರೊನಾ ಸೋಂಕು ಹೆಚ್ಚಾದ್ದರಿಂದ ಗಡಿ ಜಿಲ್ಲೆಯ ಜಿಲ್ಲಾಡಳಿತಗಳಿಗೆ ಮಾತನಾಡಿರುವ ಸಿಎಂ, ಅನಿವಾರ್ಯವಾದರೆ ಮುಲಾಜಿಲ್ಲದೆ ಕ್ರಮ ಜರುಗಿಸು ವಂತೆಯೂ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರಿಗೆ ಜೂ. 1ರವರೆಗೆ ಪ್ರವೇಶ ನಿಷೇಧಿಸಲಾಗಿದೆ. ರಾಜ್ಯದಲ್ಲಿ ಸೋಂಕು ನಿಯಂತ್ರಣದಲ್ಲಿದೆ. ಆದರೆ, ಕರೊನಾ ಹಾಟ್ಸ್ಪಾಟ್ ಮಹಾರಾಷ್ಟ್ರ ಸೇರಿ ವಿವಿಧ ಭಾಗಗಳಿಂದ ಜನರು ಬರುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಲಸಿಗರು ಇಲ್ಲದಿದ್ದಲ್ಲಿ ರಾಜ್ಯದಲ್ಲಿ 300 ಸಕ್ರಿಯ ಪ್ರಕರಣಗಳಷ್ಟೇ ಇರುತ್ತಿದ್ದವು. ಹಾಗಾಗಿ ತಕ್ಷಣದಿಂದಲೇ ವಲಸಿಗರ ಪ್ರವೇಶಕ್ಕೆ ತಡೆ ನೀಡಲಾಗಿದೆ | ಡಾ. ಕೆ. ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ
ರಾಜ್ಯವನ್ನು ಸಂರ್ಪಸುವ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಲ್ಲಿ ಚೆಕ್ಪೋಸ್ಟ್ಗಳಿರುವ ಕಾರಣ ಅಲ್ಲಿ ಪೊಲೀಸ್ ಕಾವಲು ಪಡೆಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದೊಳಗೆ ಬರುವವರಿಗೆ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಪಾಸ್ಗಳಿಲ್ಲದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಚೆಕ್ಪೋಸ್ಟ್ಗಳ ಬಿಗಿ ಹೆಚ್ಚಾದ ಕಾರಣ, ರಾಜ್ಯದೊಳಗೆ ಬರಲು ಕಳ್ಳಮಾರ್ಗಗಳನ್ನು ಕಂಡುಕೊಂಡಿರುವ ಜನ, ಅಲ್ಲಿಂದ ಒಳಬರುತ್ತಿದ್ದಾರೆ. ಮಹಾರಾಷ್ಟ್ರ ಮತ್ತಿತರ ಭಾಗದಿಂದ ಗಡಿ ಭಾಗದ ತನಕ ವಾಹನಗಳಲ್ಲಿ ಬರುತ್ತಿರುವ ಜನ, ಬಳಿಕ ರಾಜ್ಯದ ಗಡಿ ನುಸುಳಿ ಒಳ ಬಂದು ವಾಹನಗಳ ಮೂಲಕ ತಮ್ಮ ನೆಲೆಯತ್ತ ತೆರಳುತ್ತಿದ್ದಾರೆ. ಇನ್ನು ಎಷ್ಟೋ ಜನರು ನಡೆದೇ ತಮ್ಮ ಗ್ರಾಮಗಳಿಗೆ ಬರುತ್ತಿರುವುದು ರಾಜ್ಯಕ್ಕೆ ತಲೆನೋವು ತಂದಿದೆ.
ಹಳ್ಳಿಗಳಲ್ಲಿ ನಿಗಾ ಇಡಿ: ಗಡಿಭಾಗದ ಎಲ್ಲ ಗ್ರಾಮಗಳಲ್ಲೂ ಕಟ್ಟುನಿಟ್ಟಿನ ನಿಗಾ ಇರಿಸಿ ಮೇಲುಸ್ತುವಾರಿ ಮಾಡುವಂತೆಯೂ ಸೂಚನೆ ನೀಡಲಾಗಿದೆ. ಪ್ರತಿ ಹಳ್ಳಿಯಲ್ಲೂ ಯಾರಾದರೂ ಅಕ್ರಮವಾಗಿ ರಾಜ್ಯದ ಗಡಿಯೊಳಗೆ ಬಂದರೆ ತಕ್ಷಣ ಮಾಹಿತಿ ನೀಡುವಂತೆ, ಬಂದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಂತೆ ತಿಳಿಸಲಾಗಿದೆ.
ಎಲ್ಲಿ ಹೆಚ್ಚು ನಿಗಾ?: ಮಹಾರಾಷ್ಟ್ರದಿಂದ ಬರುವವರು ಬೆಳಗಾವಿ ಜಿಲ್ಲೆ ದಾಟಿಯೇ ಬರಬೇಕಾದ್ದರಿಂದ ಅಲ್ಲಿನ ಚೆಕ್ಪೋಸ್ಟ್ ಜತೆಗೆ ಹಳ್ಳಿಗಳಲ್ಲಿ ನಿಗಾ ವಹಿಸಲಾಗಿದೆ. ಯಾದಗಿರಿ, ರಾಯಚೂರು, ಕಲಬುರಗಿ, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚು ನಿಗಾ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.