

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss Kannada season 11) ಮನರಂಜನಾ ಕಾರ್ಯಕ್ರಮ ಇದೀಗ ಹೊಸ ರೂಪ ಪಡೆದುಕೊಂಡಿದ್ದು, ಸೀಸನ್ 10ರ ಯಶಸ್ಸಿನ ಬೆನ್ನಲ್ಲೇ ಸೀಸನ್ 11ರ ಭರ್ಜರಿ ಯಶಸ್ಸಿಗೆ ಬಿಗ್ ತಂಡ ದೊಡ್ಡ ಹೆಜ್ಜೆಯನ್ನೇ ಇಟ್ಟಿರುವುದು ಇದೀಗ ಮತ್ತಷ್ಟು ಸ್ಪಷ್ಟವಾಗಿದೆ. ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿರುವ ಕಿಚ್ಚ ಸುದೀಪ್, ಎಂದಿನಂತೆ ತಮ್ಮ ಖಡಕ್ ಮಾತಿನ ಶೈಲಿಯಲ್ಲೇ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದು, 17 ಘಟಾನುಘಟಿ ಸ್ಪರ್ಧಿಗಳು ಬಿಗ್ ಮನೆಗೆ ಸ್ವಾಗತಿಸಿದ್ದಾರೆ. ಸೀಸನ್ 11ರ (BBKS11) ಮನೆಯೊಳಗೆ ಅದ್ಧೂರಿಯಾಗಿ ಎಂಟ್ರಿಕೊಟ್ಟ ಸ್ಪರ್ಧಿಗಳ ಪೈಕಿ ಕೆಲವರ ಮುಖದಲ್ಲಿ ಮಂದಹಾಸ ಮೂಡಿದರೆ, ಇನ್ನು ಕೆಲವರಲ್ಲಿ ಬೇಸರ ಕಾಡಲಾರಂಭಿಸಿದೆ. ಅದಕ್ಕೆ ಕಾರಣ ಲಾಯರ್ ಜಗದೀಶ್ ಮಾತಿನ ಆರ್ಭಟ.
ಬಿಗ್ ಮನೆಗೆ ಎಂಟ್ರಿಕೊಟ್ಟ ಮೊದಲ ದಿನದಿಂದಲೂ 16 ಸ್ಪರ್ಧಿಗಳ ಜತೆ ತೀರ ವಾಗ್ವಾದಕ್ಕಿಳಿದ ಲಾಯರ್ ಜಗದೀಶ್, ಆಟದ ಮೂಲ ನಿಯಮಗಳನ್ನೇ ಮರೆತು ಮಾತನಾಡಿದ್ದಾರೆ. ಈ ವಿಷಯ ವೀಕ್ಷಕರಲ್ಲಿ ಭಾರೀ ಬೇಸರ ಮೂಡಿಸಿದೆ. ಇರಲಿ ಪರವಾಗಿಲ್ಲ ಬಿಗ್ಬಾಸ್ ಮನೆ ಅಂದಮೇಲೆ ಅಲ್ಲಿ ಇಂತಹ ಜಟಾಪಟಿ, ವಿರೋಧ, ವ್ಯಂಗ್ಯಗಳು ಇರುತ್ತವೆ ಎಂದು ವೀಕ್ಷಕರು ಪ್ರಾರಂಭದಲ್ಲಿ ಸುಮ್ಮನಾಗಿದ್ದರು. ಆದ್ರೆ, ಯಾವಾಗ ಜಗದೀಶ್ ಬಿಗ್ ಬಾಸ್ಗೆ ನೇರ ಸವಾಲು ಎಸೆದರೋ ಅಲ್ಲಿಗೆ ಎಲ್ಲಾ ಲೆಕ್ಕಾಚಾರಗಳು ಇಲ್ಲಿಗೆ ಮುಗಿಯಿತು ಎಂದೇ ನೋಡುಗರು ಭಾವಿಸಿದರು. ಬಿಗ್ಬಾಸ್ ಶೋ ಏನು ಎಂಬುದನ್ನು ಇಡೀ ರಾಜ್ಯದ ಮುಂದೆ ಬಿಚ್ಚಿಡುತ್ತೇನೆ ಎಂದು ಸವಾಲಿನ ಮಾತುಗಳನ್ನಾಡಿದ್ದ ವಕೀಲ ಜಗದೀಶ್ಗೆ ಇದೀಗ ಮೊದಲ ವಾರದ ಕಥೆ ಕಿಚ್ಚ ಜತೆ ಪಂಚಾಯಿತಿಯಲ್ಲಿ ನಟ, ನಿರೂಪಕ ಸುದೀಪ್ ಬೆವರಿಳಿಸಿದ್ದಾರೆ.
ಬಿಗ್ ಬಾಸ್ ಎಂತಹ ಕಾರ್ಯಕ್ರಮ? ಇದನ್ನು ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ಬಿಗ್ಬಾಸ್ಗೆ ನೇರ ಸವಾಲು ಹಾಕಿದ್ದ ಲಾಯರ್ ಜಗದೀಶ್, ಹೇಳಿಕೆ ನೀಡಿದ ಮರುದಿನವೇ ತಮ್ಮ ಸೊಕ್ಕಿನ ಮಾತುಗಳಿಗೆ ಬೇಸರ ಹೊರಹಾಕಿದ್ದರು. ಆದ್ರೆ, ಈ ವಿಷಯ ತೀವ್ರ ಗಂಭೀರವಾದ ಹಿನ್ನೆಲೆ ಇದೀಗ ಸುದೀಪ್ ಮೊದಲ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ತಮ್ಮ ಖಡಕ್ ಮಾತಿನಿಂದಲೇ ಜಗದೀಶ್ ತುಟಿಬಿಚ್ಚದಂತೆ ಮಾಡಿದ್ದಾರೆ. ಈ ಸಂಚಿಕೆಯ ಪ್ರೋಮೋ ಸದ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.