

ಬೆಂಗಳೂರು: ‘ಬ್ಯಾಕ್ ಬೆಂಚರ್ಸ್’ ಖ್ಯಾತಿಯ ನಟಿ ಕುಂಕುಮ್ ಹರಿಹರ ಸದ್ಯ ಬೆಳ್ಳಿತೆರೆಯ ಜತೆಗೆ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಹೀಗೆ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಬಿಜಿಯಾಗಿರುವ ಅವರಿಗೆ ಈ ಬಾರಿಯ ನವರಾತ್ರಿ ತುಂಬ ಸ್ಪೆಷಲ್ ಅಂತೆ. ‘ನಮ್ಮದು ಮರಾಠಿ ಸಂಪ್ರದಾಯ. ಹಾಗಾಗಿ ನಮ್ಮ ಮನೆಯಲ್ಲಿ ನವರಾತ್ರಿ ಆಚರಣೆ ಸ್ವಲ್ಪ ವಿಭಿನ್ನ. ದೇವಿಗೆ ಪೂಜೆ-ಪುನಸ್ಕಾರ, ವ್ರತ ಹಾಗೂ ಆರಾಧನೆ ಸಾಮಾನ್ಯವಾದರೂ ಆಚರಣೆಯಲ್ಲಿ ವಿಭಿನ್ನತೆ ಕಾಣಬಹುದು. ಮನೆಯಲ್ಲಿ ನಾವು ರಾಮಾಯಾಣ, ಮಹಾಭಾರತಗಳ ಕಥೆಗಳು ಸಾರುವ ಗೊಂಬೆಗಳನ್ನು ಕೂರಿಸುತ್ತೇವೆ. ಅಲ್ಲದೇ ಗೊಂಬೆಗಳಿಗೆ ಮದುವೆ ಮಾಡಿಸುವುದು ನಮ್ಮಲ್ಲಿ ವಿಶೇಷ ಎನ್ನಬಹುದು. ಒಂಬತ್ತು ದಿನಗಳ ಕಾಲ ಅಂಬಾ ಭವಾನಿಯ ಪೂಜೆ, ವ್ರತ ಬಳಿಕ ದಾಂಡ್ಯಾ, ಗರ್ಬಾ ಆಡುತ್ತೇವೆ. ಈ ಬಾರಿ ಮೈಸೂರಿಗೆ ತೆರಳಿ ದಸರಾ ವೀಕ್ಷಿಸುವ ಪ್ಲ್ಯಾನ್ ಮಾಡಿದ್ದೇವೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಒಳ್ಳೆಯ ಆಲೋಚನೆ ಮೂಡಲಿ: ವಿಜಯದಶಮಿ ಬದುಕಿಗೆ ಸಂದೇಶ ನೀಡುವ ಹಬ್ಬ. ಈ ಬಗ್ಗೆ ಕುಂಕುಮ್, ‘ಯುದ್ಧದಲ್ಲಿ ರಾಮ, ರಾವಣನನ್ನ ಸಂಹರಿಸಿದ ದಿನವನ್ನ ವಿಜಯ ದಶಮಿಯನ್ನಾಗಿ ಆಚರಿಸಲಾಗುತ್ತದೆ. ಈ ಪೌರಾಣಿಕ ಕಥೆಯು ನಮ್ಮ ಬದುಕಿಗೂ ಹತ್ತಿರವೆನಿಸುತ್ತದೆ. ನಮ್ಮ ಜೀವನದಲ್ಲಿ ಕೆಡುಕುಗಳನ್ನು ಕಳೆದು ಒಳ್ಳೆಯ ಆಲೋಚನೆಗಳನ್ನು ರೂಢಿಸಿಕೊಳ್ಳುವ ಸಂದೇಶ ನೀಡುವ ಹಬ್ಬವಿದು. ಈ ಕಾರಣಕ್ಕೆ ವಿಜಯದಶಮಿ ನನ್ನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ’ ಎನ್ನುತ್ತಾರೆ.
ಹಿರಿತೆರೆ, ಕಿರುತೆರೆಯಲ್ಲಿ ಬಿಜಿ:‘ಬ್ಯಾಕ್ ಬೆಂಚರ್ಸ್’ ಬಳಿಕ ಕುಂಕುಮ್ ಹರಿಹರ್, ಬಹುತಾರಾಗಣದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರಂತೆ. ‘ಚಿತ್ರೀಕರಣ ಮುಗಿಯುವ ಹಂತದಲ್ಲಿದೆ. ಟೈಟಲ್ ಸೇರಿ ಉಳಿದ ಮಾಹಿತಿ ಶೀಘ್ರವೇ ಹಂಚಿಕೊಳ್ಳುತ್ತೇನೆ. ಜತೆಗೆ ‘ಗಂಗೆ ಗೌರಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಅಲ್ಲದೇ ತೆಲುಗಿನ ಕೆಲವು ಧಾರಾವಾಹಿಗಳಿಗೆ ಆರ್ ಬಂದಿವೆ. ಆದರೆ, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಒಪ್ಪಿಕೊಂಡಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.