

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ (BBKS11) ಅದ್ಧೂರಿ ಮನೆಯೊಳಗೆ 17 ಘಟಾನುಘಟಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ಮೊದಲ ವಾರವೇ ಬಿಗ್ ಮನೆಯನ್ನು ರಣರಂಗವನ್ನಾಗಿಸಿದ್ದು ಇತಿಹಾಸ. ನರಕ ಮತ್ತು ಸ್ವರ್ಗ ಎಂಬ ಎರಡು ಗುಂಪಾಗಿ ಒಂದೇ ಸೂರಿನಡಿ ಬದುಕುತ್ತಿರುವ 17 ಸ್ಪರ್ಧಿಗಳ ಪೈಕಿ ಲಾಯರ್ ಜಗದೀಶ್ (Lawyer Jagdish) ಮಾತ್ರ ತಮ್ಮದೇ ನಿಯಮ ಹಾಕಿಕೊಂಡಿರುವುದು ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ಶನಿವಾರ ನಡೆದ ಮೊದಲ 'ವಾರದ ಕಥೆ ಕಿಚ್ಚನ ಜತೆ' ಸಂಚಿಕೆಯಲ್ಲಿ ನಟ ಸುದೀಪ್, ತಮ್ಮದೇ ಶೈಲಿಯಲ್ಲಿ ಜಗದೀಶ್ಗೆ ಕ್ಲಾಸ್ ತೆಗೆದುಕೊಂಡಿದ್ದು ನೋಡುಗರಲ್ಲಿ ಕುತೂಹಲ ಹೆಚ್ಚಿಸಿತು. ತಪ್ಪುಗಳು ಆಗುವುದು ಸಹಜ, ಹೀಗೆ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದ ಕಿಚ್ಚನಿಗೆ ಕ್ಷಮೆಯಾಚಿಸಿದ್ದ ಲಾಯರ್ ಜಗದೀಶ್, ಇದೀಗ ಎರಡನೇ ವಾರದಲ್ಲಿ ತಮ್ಮ ಆರ್ಭಟವನ್ನು ಎಂದಿನಂತೆ ಮುಂದುವರೆಸಿದ್ದಾರೆ.
ಮನೆಯ ಮೊದಲ ಕ್ಯಾಪ್ಟನ್ ಆಗಿ ಹಂಸಾ ಜವಾಬ್ದಾರಿ ತೆಗೆದುಕೊಂಡರು. ಇದೇ ಸಮಯದಲ್ಲಿ ಸುದೀಪ್ ಕೊಟ್ಟ ವಿಶೇಷ ಅಧಿಕಾರದ ಮೇರೆಗೆ ಸ್ವರ್ಗದಲ್ಲಿದ್ದ ಜಗದೀಶ್ರನ್ನು ನರಕಕ್ಕೆ ಅದಲು-ಬದಲು ಮಾಡಿದ ಹಂಸಾ, ಅವರು ನರಕದಲ್ಲಿದ್ದು ತಮ್ಮ ಸಾಮರ್ಥ್ಯವೇನು ಎಂಬುದನ್ನು ಸಾಬೀತುಪಡಿಸಲಿ ಎಂದು ಖಾರವಾಗಿ ಹೇಳಿದ್ದರು. ಇದೀಗ ಅದಕ್ಕೆ ತಕ್ಕಂತೆ ಹಂಸಾರನ್ನು ಟಾರ್ಗೆಟ್ ಮಾಡಿಕೊಂಡಿರುವ ಜಗದೀಶ್, ಪದೇ ಪದೇ ಕ್ಯಾಪ್ಟನ್ ಹೆಸರು ಕರೆದು ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಬ್ಬರ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದ್ದು, ಪರಸ್ಪರ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಈ ಸಂಚಿಕೆಯ ಪ್ರೋಮೋ ಇದೀಗ ಹೊರಬಿದ್ದಿದ್ದು, ವೀಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಿದೆ.