BBKS11: ಟಾರ್ಗೆಟ್ ಮಾಡಿದ್ರೆ ಎರಡೇ ನಿಮಿಷ ಸಾಕು!

bbks11
Published on

ಬೆಂಗಳೂರು: ವೀಕ್ಷಕರು ನಿರೀಕ್ಷಿಸಿದಂತೆ ಸಾಗುತ್ತಿಲ್ಲ ಬಿಗ್​ ಬಾಸ್​ ಸೀಸನ್ 11 (BBKS11) ಎಂಬುದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ. ಕಳೆದ ವಾರ 16 ಘಟಾನುಘಟಿ ಸ್ಪರ್ಧಿಗಳಿದ್ದ ಮನೆಯಲ್ಲಿ ಸುದೀಪ್ ಅವರ ಎಂಟ್ರಿಗೂ ಮುನ್ನವೇ ಇಬ್ಬರು ದಿಢೀರ್​ ಎಲಿಮಿನೇಟ್​ ಆಗಿ ಮನೆಯಿಂದ ಹೊರಬಂದರು. 15 ಮಂದಿ ವಿರುದ್ಧ ಏಕಾಂಗಿಯಾಗಿ ವಾಗ್ದಾಳಿ ನಡೆಸಿದ ಲಾಯರ್​ ಜಗದೀಶ್​, ಹೆಣ್ಣು ನಿಂದನೆ ವಿಚಾರವಾಗಿ ಬಿಗ್​ ಮನೆಯಿಂದ ನೇರವಾಗಿ ಹೊರಬಿದ್ದರೆ, ದೈಹಿಕ ಹಲ್ಲೆ ಮಾಡಿದ ಕಾರಣ ರಂಜಿತ್​​ ಹೊರ ಬಂದಿದ್ದಾರೆ. ಸದ್ಯ ಇದು ಮುಗಿದು ಹೋದ ಅಧ್ಯಾಯವಾದ ಹಿನ್ನಲೆ ಇದೀಗ ಉತ್ತರ ಕರ್ನಾಟಕದ ಗಾಯಕ ಹನುಮಂತು ಮನೆಯೊಳಗೆ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.

ಮೊದಲ ದಿನವೇ ಮನೆಯಿಂದ ಹೊರಹೋಗ್ತೀನಿ, ನನ್ನನ್ನು ಕಳಿಸಿಬಿಡಿ ಎಂದು ಬಿಗ್ ಬಾಸ್​ಗೆ ಮನವಿ ಮಾಡಿದ ಹನುಮಂತು, ಕ್ಯಾಪ್ಟನ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಆ ಜವಾಬ್ದಾರಿ ಹೊರಲು ತೀರ ಪರದಾಡಿದರು. ಸದ್ಯ ಮನೆಯವರ ಜತೆಗೆ ಹೊಂದಾಣಿಕೆಯಲ್ಲಿ ತೊಡಗಿರುವ ಹನುಮಂತುಗೆ ಕ್ಯಾಪ್ಟನ್ ಎಂಬ ದೊಡ್ಡ ಜವಾಬ್ದಾರಿ ಕೂಡ ಭಾರೀ ತೊಂದರೆ ಕೊಟ್ಟಂತಾಗಿದೆ. ಇಂದು ಬಿಗ್ ಬಾಸ್​ ಹೊಸ ಟಾಸ್ಕ್​​ ನೀಡಿದ್ದು, ಇದು ದೈಹಿಕ ಸಾಮರ್ಥ್ಯ ಪ್ರದರ್ಶಿಸುವ ಆಟವಾಗಿದೆ.

ಈಗ ಹೊರಬಿದ್ದಿರುವ ಹೊಸ ಪ್ರೋಮೋದಲ್ಲಿ ಕಾಣುವಂತೆ, ಹಲಗೆ ಮೇಲೆ ನಿಂತಿರುವ ಎದುರಾಳಿಗಳನ್ನು ಕೆಳಗೆ ಬೀಳಿಸುವುದು ಮತ್ತೊಂದು ತಂಡಕ್ಕೆ ಸವಾಲಾಗಿದೆ. ಈ ವೇಳೆ ತಮ್ಮ ಎದುರು ತಂಡದ ಸದಸ್ಯರನ್ನು ಕೆಳಗೆ ಬೀಳಿಸುವ ಪ್ರಯತ್ನದಲ್ಲಿ ತೊಡಗಿದ್ದ ತ್ರಿವಿಕ್ರಮ್​ ತಮಗೆ ಕೊಟ್ಟಿರುವ ವಸ್ತುವಿನಿಂದ ಪ್ರತಿಸ್ಪರ್ಧಿಯನ್ನು ನೆಲಕ್ಕೆ ಬೀಳಿಸುವುದು ದೃಶ್ಯದಲ್ಲಿ ಕಂಡುಬಂದಿದೆ. ಈ ವಿಚಾರಕ್ಕೆ ಅವರೊಂದಿಗೆ ವಾಗ್ವಾದಕ್ಕಿಳಿದ ಭವ್ಯ, ದಯವಿಟ್ಟು ಒಬ್ಬರನ್ನೇ ಟಾರ್ಗೆಟ್ ಮಾಡ್ಬೇಡಿ ಎಂದು ಕೂಗಿ ಹೇಳಿದ್ದಾರೆ.

ಇದಕ್ಕೆ ಉತ್ತರಿಸಿದ ತ್ರಿವಿಕ್ರಮ್, ನಮಗೂ ಹೇಗೆ ಆಡಬೇಕು ಎಂಬ ಕಾಮನ್​ಸೆನ್ಸ್​ ಇದೆ. ಇಲ್ಲಿ ಯಾರು ಯಾರನ್ನು ಟಾರ್ಗೆಟ್​ ಮಾಡುತ್ತಿಲ್ಲ. ಆ ರೀತಿ ಟಾರ್ಗೆಟ್​ ಮಾಡೋದೆ ಆದ್ರೆ, ಕೆಳಗೆ ಬೀಳಿಸಲು ನಮಗೆ ಕೇವಲ ಎರಡು ನಿಮಿಷ ಸಾಕು ಎಂದು ಖಡಕ್ ಆಗಿ ತಿಳಿಸಿದ್ದಾರೆ. ಈ ಪ್ರೋಮೋ ಇದೀಗ ಹೊರಬಿದ್ದಿದ್ದು, ಮುಂದೇನಾಯ್ತು? ಅಸಲಿಗೆ ನಡೆದಿದ್ದೇನು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net