

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಟಾಪ್ ಆರು ಫಿನಾಲೆ ಸ್ಪರ್ಧಿಗಳು ಇದೀಗ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದ್ದು, ಗೆಲುವಿನ ಕಿರೀಟ ನನಗೆ ಸೇರಬೇಕು ಎಂದು ದೊಡ್ಡ ಆಸೆಯನ್ನು ಈಗಾಗಲೇ ತಮಗೆ ಸಿಕ್ಕಿರುವ ವೇದಿಕೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಒಂದೆಡೆ ಜನರ ಅಭಿಪ್ರಾಯಗಳು ಏನಿದೆ ಎಂಬುದು ಸದ್ಯ ನಮಗೆಲ್ಲಾ ತಿಳಿದಿದೆ. ಆದ್ರೆ, ಈ ಸಲ ಕಪ್ ಯಾರಿಗೆ ಸೇರುತ್ತೆ ಎಂಬುದನ್ನು ಎಲಿಮಿನೇಟ್ ಆದ ಸ್ಪರ್ಧಿಗಳು ಯಾವ ರೀತಿ ಊಹಿಸಿದ್ದಾರೆ ಗೊತ್ತೇ? ಅವರ ಪ್ರಕಾರ ಯಾರು ವಿನ್ನರ್? ಇಲ್ಲಿದೆ ನೋಡಿ ಉತ್ತರ.
ಈ ಫಿನಾಲೆ ವಾರದಲ್ಲಿ ಬಿಗ್ಬಾಸ್ ಮನೆಯೊಳಗೆ ಸಂಗೀತಾ, ವಿನಯ್, ಕಾರ್ತಿಕ್, ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹೀಗೆ ಒಟ್ಟು ಆರು ಸದಸ್ಯರು ಇದ್ದಾರೆ. ಅಷ್ಟೇ ಅಲ್ಲ, ಮಿಡ್ ವೀಕ್ ಎಲಿಮಿನೇಷನ್ ಇರುವುದಿಲ್ಲ ಎಂದು ನಿನ್ನೆಯ ಎಪಿಸೋಡಿನಲ್ಲಿ ಬಿಗ್ಬಾಸ್ ಅಧಿಕೃತವಾಗಿ ಘೋಷಿಸಿದರು. ಹಾಗಾಗಿ ಕುತೂಹಲ ಇನ್ನಷ್ಟು ಗರಿಗೆದರಿದೆ.
ಈ ಸಲ ಯಾರು ಬಿಗ್ಬಾಸ್ ಗೆಲ್ಲುತ್ತಾರೆ ಎಂಬ ಬಗೆಗಿನ ಚರ್ಚೆಗಳು ಬಲು ಜೋರಾಗಿದೆ. ಪ್ರತಿಯೊಬ್ಬ ಸದಸ್ಯರ ಅಭಿಮಾನಿಗಳೂ ತಮ್ಮ ನೆಚ್ಚಿನ ಸ್ಪರ್ಧಿಯ ಪರವಾಗಿ ಬಿರುಸಿನ ಪ್ರಚಾರ ಮಾಡುವ ಮೂಲಕ ವೋಟ್ ಮಾಡಿ ಎಂದು ಮನವಿ ಮಾಡಿದ್ದಾರೆ. ಪ್ರತಿವಾರ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಸ್ಪರ್ಧಿಗಳು ಹೊರಗೆ ಬರುತ್ತಿದ್ದಂತೆ ಜಿಯೋ ಸಿನಿಮಾ ಅವರೊಂದಿಗೆ ನೇರ ಸಂದರ್ಶನ ಮಾಡುತ್ತಿತ್ತು. ಆ ಎಲ್ಲ ಸಂದರ್ಶನಗಳಲ್ಲಿ ಕೇಳಿಬಂದ ಹೆಸರುಗಳು ಇವರದ್ದೇ ಆಗಿದೆ.
ಈ ಸಲದ ಬಿಗ್ಬಾಸ್ ಸೀಸನ್ನ ಟಾಪ್ 5ನಲ್ಲಿ ಯಾರು ಇರುತ್ತಾರೆ ಎಂದು ಹೊರಬಂದ ಕಂಟೆಸ್ಟೆಂಟ್ಸ್ಗೆ ಕೇಳಲಾದ ಪ್ರಶ್ನೆಗೆ ದೊರೆತ ಉತ್ತರದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖಿತರಾದವರು ಸಂಗೀತಾ ಶೃಂಗೇರಿ. ಒಟ್ಟು ಒಂಬತ್ತು ಜನ ಎಲಿಮಿನೇಟೆಡ್ ಸ್ಪರ್ಧಿಗಳು ಸಂದರ್ಶನದಲ್ಲಿ ಸಂಗೀತಾ ಅವರ ಹೆಸರನ್ನು ಪರಿಗಣಿಸಿದ್ದಾರೆ. ಕಾರ್ತಿಕ್ ಹೆಸರು ಆರು ಬಾರಿ ಕೇಳಿಬಂದರೆ, ತುಕಾಲಿ ಸಂತೋಷ್ ಹೆಸರು ಕೂಡ ಆರು ಸಲ ಬಂದಿದೆ. ಪದೇ ಪದೇ ಉಲ್ಲೇಖಿತಗೊಂಡಿರುವ ಸ್ಪರ್ಧಿಗಳಲ್ಲಿ ವಿನಯ್ ಕೂಡ ಇದ್ದಾರೆ. ನಮ್ರತಾ, ಮೈಕಲ್, ಪವಿ, ಸ್ನೇಹಿತ್ ಇವರೆಲ್ಲರೂ ವಿನಯ್ ಹೆಸರನ್ನು ಉಲ್ಲೇಖಿಸಿದ್ದಾರೆ.
1.ಸಂಗೀತಾ ಶೃಂಗೇರಿ: ಟಾಪ್ 5ನಲ್ಲಿ ಇರುತ್ತಾರೆ ಎಂದು ಭಾಗ್ಯಶ್ರೀ, ನೀತು, ಸ್ನೇಹಿತ್, ಪವಿ ಪೂವಪ್ಪ, ಅವಿನಾಶ್, ಸಿರಿ, ತನಿಷಾ, ನಮೃತಾ ಊಹಿಸಿದ್ದರು. ಅದರಲ್ಲಿ ತನಿಷಾ ಮತ್ತು ನಮೃತಾ ಮಾತ್ರ ಈ ಸಲದ ಬಿಗ್ಬಾಸ್ ಟ್ರೋಫಿ ಸಂಗೀತಾಗೆ ಎಂದು ತಿಳಿಸಿದ್ದಾರೆ.
2.ತುಕಾಲಿ ಸಂತೋಷ್: ನಮೃತಾ, ಮೈಕಲ್, ಸಿರಿ, ಸ್ನೇಹಿತ್, ಭಾಗ್ಯಶ್ರೀ ಮತ್ತು ನೀತು ತುಕಾಲಿ ಸಂತೋಷ್ ಟಾಪ್ 5ರಲ್ಲಿ ಇರುತ್ತಾರೆ ಎಂದು ಊಹಿಸಿದ್ದರು.
3. ಕಾರ್ತಿಕ್ ಮಹೇಶ್: ತನಿಷಾ, ಮೈಕಲ್, ಪವಿ, ಸಿರಿ, ಸ್ನೇಹಿತ್, ಭಾಗ್ಯಶ್ರೀ, ನೀತು ಅವರು ಕಾರ್ತಿಕ್ ಟಾಪ್ 5ನಲ್ಲಿ ಇರುವುದು ಪಕ್ಕಾ ಎಂದು ಊಹಿಸಿದ್ದರು. ಕಾರ್ತಿಕ್ ಗೆಲ್ಲಬೇಕು ಎಂಬ ಆಸೆಯಿದೆ ಎಂದ ತನಿಷಾ, ಸಂಗೀತಾ ಗೆಲ್ಲಬಹುದು ಅನಿಸುತ್ತಿದೆ ಎಂದು ಹೇಳಿದ್ದರು. ಸಿರಿ ಕೂಡ ಕಾರ್ತಿಕ್ ಗೆಲ್ಲಬೇಕು ಎಂದು ಹೇಳಿದ್ದರು.
4. ವಿನಯ್ ಗೌಡ: ನಮ್ರತಾ, ಮೈಕಲ್, ಪವಿ, ಸ್ನೇಹಿತ್ ಎಲ್ಲರೂ ವಿನಯ್ ಹೆಸರನ್ನು ಟಾಪ್ 5ಕ್ಕೆ ಉಲ್ಲೇಖಿಸಿದ್ದರು. ವಿನಯ್ ಗೆಲ್ಲಬೇಕು ಎಂಬುದು ನನ್ನ ಆಸೆ ಎಂದು ಮೈಕಲ್, ನಮೃತಾ ಮತ್ತು ಸ್ನೇಹಿತ್ ತಿಳಿಸಿದ್ದರು.
ಮನೆಯಿಂದ ಹೊರಬಂದ ಸ್ಪರ್ಧಿಗಳ ಊಹೆ ಏನೇ ಇದ್ದರೂ ಅದು ಊಹೆ ಮಾತ್ರವೇ. ಅದು ನಿರ್ಧಾರಾತ್ಮಕ ಅಲ್ಲವೇ ಅಲ್ಲ. ಯಾಕೆಂದರೆ ಕೊನೆಗೆ ಒಬ್ಬ ಸ್ಪರ್ಧಿ ಬಿಗ್ಬಾಸ್ ಗೆಲ್ಲಲು ಸಾಧ್ಯ. ಮನೆಯಿಂದಾಚೆಗೆ ಜನರ ಕಣ್ಣಿಗೆ ಅವರ ವ್ಯಕ್ತಿತ್ವ ಹೇಗೆ ಕಾಣಿಸುತ್ತಿದೆ, ಅದನ್ನು ಅವರು ಎಷ್ಟು ಮೆಚ್ಚಿಕೊಳ್ಳುತ್ತಿದ್ದಾರೆ.
ಆ ಮೆಚ್ಚುಗೆ ಎಷ್ಟರಮಟ್ಟಿಗೆ ಮತಗಳಾಗಿ ಬದಲಾಗುತ್ತಿವೆ ಎನ್ನುವುದೇ ಗೆಲುವಿನ ನಿರ್ಣಾಯಕ ಸಂಗತಿ. ಹಾಗೆ ನೋಡಿದಾಗ, ಮನೆಯೊಳಗೆ ಉಳಿದಿರುವ ಪ್ರತಾಪ್, ವರ್ತೂರು ಸಂತೋಷ್ ಅವರ ಜನಪ್ರಿಯತೆ ಏನೂ ಕಮ್ಮಿಯದಲ್ಲ. ಹಾಗಾಗಿ ಎಲಿಮಿನೇಟೆಡ್ ಸ್ಪರ್ಧಿಗಳ ಊಹೆಯನ್ನು ಸುಳ್ಳಾಗಿಸಿ ಇವರಿಬ್ಬರಲ್ಲಿ ಒಬ್ಬರು ‘ಈ ಸಲ ಕಪ್ ನಮ್ದೆ’ ಎಂದು ಗೆಲುವಿನ ನಗು ಬೀರಿದರೂ ಅಚ್ಚರಿಯಿಲ್ಲ.
ಈ ಎಲ್ಲ ಊಹೆ, ನಿರೀಕ್ಷೆ, ಆತಂಕಗಳಿಗೆ ಉತ್ತರ ಸಿಗಲು ಹೆಚ್ಚು ಕಾಯಬೇಕಾಗಿಲ್ಲ. ಈ ಭಾನುವಾರ ನಡೆಯಲಿರುವ ಫಿನಾಲೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಫಿನಾಲೆಯ ನೇರಪ್ರಸಾರ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.