More

    ದಾವಣಗೆರೆಯಲ್ಲಿ ಮೋಹಕ ಥೀಮ್ ಪಾರ್ಕ್  -ಉದ್ಘಾಟನೆಗೆ ಕಾದಿದೆ ಬಯಲು ರಂಗಮಂದಿರ 

    ಡಿ.ಎಂ.ಮಹೇಶ್, ದಾವಣಗೆರೆ
    ವೃತ್ತಿ ರಂಗದ ತವರೂರು ದಾವಣಗೆರೆಯಲ್ಲಿ ಬಯಲು ರಂಗಮಂದಿರ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಜಿಲ್ಲಾ ಕೇಂದ್ರದಲ್ಲಿ ರಂಗ ಪ್ರಯೋಗಗಳಿಗಿದ್ದ ಥಿಯೇಟರ್ ಕೊರತೆ ನೀಗಿದೆ.
    ಇದರ ಸುತ್ತಲೆಲ್ಲ ಮನಮೋಹಕ ಶಿಲ್ಪ ಕಲಾಕೃತಿಗಳನ್ನು ಒಳಗೊಂಡ ಥೀಮ್ ಪಾರ್ಕ್ ಕೂಡ ಕಳೆಗಟ್ಟಿದೆ. ದಾವಣಗೆರೆ ಸಂಸ್ಕೃತಿ ಮತ್ತು ಗ್ರಾಮೀಣ ಕ್ರೀಡೆಗಳ ಪರಂಪರೆ ಬಿಂಬಿಸುವ ವೈವಿಧ್ಯಮಯ ಶಿಲ್ಪಕಲಾ ಮಾದರಿಗಳು ಕಣ್ಮನ ಸೆಳೆಯುತ್ತಿವೆ.
    ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ 5.23 ಕೋಟಿ ರೂ. ಅನುದಾನದಲ್ಲಿ, ನಗರದ ದೃಶ್ಯಕಲಾ ಕಾಲೇಜು ಆವರಣದ ಒಂದೂವರೆ ಎಕರೆ ಜಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇದೆಲ್ಲದರ ಹಿಂದೆ ಶಿಗ್ಗಾಂವ್‌ನ ರಾಜಹರ್ಷ ಸೊಲಬಕ್ಕನವರ್ ತಂಡದ ಶಿಲ್ಪಕಲಾ ಕಲಾವಿದರ ಕೈಚಳಕವಿದೆ.
    ದಾವಣಗೆರೆ ವಿವಿ ಹಿಂದಿನ ಕುಲಪತಿ ಪ್ರೊ.ಎಸ್.ವಿ. ಹಲಸೆ, ರಂಗಕರ್ಮಿ ಬಾ.ಮ. ಬಸವರಾಜಯ್ಯ, ಆಗಿನ ಸಿಂಡಿಕೇಟ್ ಸದಸ್ಯ ಕೊಂಡಜ್ಜಿ ಜಯಪ್ರಕಾಶ್, ವಿವಿಧ ಕ್ಷೇತ್ರಗಳ ಪರಿಣತರು, ಪ್ರಾಧ್ಯಾಪಕರು ಸೇರಿ ಅನೇಕ ಕಡೆಗಳ ಕಟ್ಟಡ ವೀಕ್ಷಣೆ ಮಾಡಿದ್ದರು. ನಂತರ ಸೊಲಬಕ್ಕನವರ್ ಅಂತಿಮ ರೂಪರೇಷೆ ನೀಡಿದ್ದರು.
    ಕಾಮಗಾರಿ ಪೂರ್ಣಗೊಂಡು ಕೆಲವು ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯವಿಲ್ಲವಾಗಿದೆ. ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಇದು ಹಸ್ತಾಂತರವಾದ ನಂತರ ಇದರ ನಿರ್ವಹಣೆಗೆ ಸಿಬ್ಬಂದಿ ನೇಮಕ, ರಂಗ ಪ್ರಯೋಗ ಹಾಗೂ ಇತರೆ ಕಾರ್ಯಕ್ರಮಗಳಿಗೆ ಶುಲ್ಕ ನಿಗದಿ ಆಗಬೇಕಿದೆ. ಅಂದುಕೊಂಡಲ್ಲಿ ಆದಲ್ಲಿ ರಂಗ ಚಟುವಟಿಕೆಗಳಿಗೆ ಜೀವ ಬರಲಿದೆ. ಇದೊಂದು ಜನಾಕರ್ಷಣೆಯ ಕೇಂದ್ರವೂ ಆಗಲಿದೆ.
    ಏನಿವೆ ವಿಶೇಷತೆಗಳು?
    ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಕಟ್ಟಡದಿಂದ ಸ್ಫೂರ್ತಿಗೊಂಡು ಇಲ್ಲಿ ಬಯಲು ರಂಗಮಂದಿರ ನಿರ್ಮಿತವಾಗಿದೆ. 600 ಜನರು ಕೂರಲು ಆಸನ, ವಿಕಲಾಂಗರಿಗೆ ವಿಶೇಷ ಮಾರ್ಗ, ವಿಶಿಷ್ಟ ವೇದಿಕೆ, ಮೇಕಪ್ ಕೊಠಡಿ, ವಿಐಪಿ ಲಾಂಜ್, ದಾಸ್ತಾನು ಕೊಠಡಿ, ವಿಶ್ರಾಂತಿ ಸ್ಥಳ, ಪಾದಚಾರಿ ರಸ್ತೆ, ಪ್ರತ್ಯೇಕ ಶೌಚಗೃಹ, ಟಿಕೆಟ್ ಕೌಂಟರ್ ಸಿದ್ಧವಾಗಿವೆ. 25 ಸಾವಿರ ಲೀ. ಸಾಮರ್ಥ್ಯದ ನೀರಿನ ತೊಟ್ಟಿ ನಿರ್ಮಿಸಲಾಗಿದೆ.
    ಯಾವುದಯ್ಯ ದಾರಿ ಥಿಯೇಟರ್‌ಗೆ?
    ಕಟ್ಟಡದ ನೀಲಿನಕ್ಷೆಯಲ್ಲಿ ನೂತನ ಕಾಲೇಜು ಸಂಪರ್ಕಿಸುವ ರಸ್ತೆಗೆ ಮುಖ್ಯದ್ವಾರ ಮಾಡುವ ಉದ್ದೇಶವಿತ್ತು. ಆದರೆ ಕಾಲೇಜಿನವರು ಆಕ್ಷೇಪಿಸಿದ್ದರಿಂದ ಅದನ್ನು ಬದಲಾವಣೆ ಮಾಡಲಾಯಿತು. ರಸ್ತೆ ಸಂಪರ್ಕಕ್ಕೆ ಯೋಜನೆಯಲ್ಲಿ ಅವಕಾಶ ಇರಲಿಲ್ಲ ಎನ್ನುತ್ತವೆ ಸ್ಮಾರ್ಟ್‌ಸಿಟಿ ಕಚೇರಿ ಮೂಲಗಳು.
    ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಕ್ಕದ ಕಾಂಪೌಂಡ್ ಚಿಕ್ಕದಿದ್ದು, ಅನೇಕರು ಒಳ ನುಗ್ಗಿ ಕೆಲವು ಶಿಲ್ಪಕಲಾಕೃತಿಗಳಿಗೆ ಅಳವಡಿಸಿದ್ದ ವಸ್ತುಗಳನ್ನು ದೋಚಿದ ನಿದರ್ಶನಗಳಿವೆ. ಹೀಗಾಗಿ ಕಾಂಪೌಂಡ್ ಎತ್ತರ ಆಗಬೇಕಿದೆ. ಸುತ್ತಮುತ್ತಲ ಜಂಗಲ್ ತೆರವು ಕೂಡ ಆದರೆ ಇನ್ನಷ್ಟು ಆಕರ್ಷಣೀಯ ಆಗಲಿದೆ.
    ಇನ್ನು ರಂಗ ಚಟುವಟಿಕೆಗಳಿಗಾಗಿ ಪ್ರತ್ಯೇಕ ಲೈಟಿಂಗ್ ವ್ಯವಸ್ಥೆ ಆಗಬೇಕಿದೆ. ಇದನ್ನು ಬಾಡಿಗೆ ತಂದು ಅಳವಡಿಸಿಕೊಳ್ಳಲು ಸಹ ಕಂಬಗಳ ಆಸರೆ ಇಲ್ಲ. ಸ್ಮಾರ್ಟ್‌ಸಿಟಿ ಲಿಮಿಟೆಡ್ ಇದರತ್ತ ಗಮನ ಹರಿಸಬೇಕೆನ್ನುತ್ತಾರೆ ರಂಗಕರ್ಮಿ ಎಸ್.ಎಸ್.ಸಿದ್ದರಾಜು.
    ಬರಸೆಳೆವ ಸಿಮೆಂಟ್ ಮಾದರಿಗಳು
    ಥೀಮ್ ಪಾರ್ಕ್‌ನ ಸುತ್ತ ಆವರಿಸಿದ ಸಿಮೆಂಟ್ ಶಿಲ್ಪಕಲಾಕೃತಿಗಳು ನೋಡುಗರನ್ನು ಸೆಳೆಯಲಿದೆ. ಮೊದಲಿದ್ದ ಮರಗಳನ್ನು ಉಳಿಸಿಕೊಂಡೇ ಯೋಜನೆ ರೂಪಿಸಲಾಗಿದೆ. ಆಧುನಿಕತೆ ಯುಗದಲ್ಲಿ ಮರೆಯಾಗುತ್ತಿರುವ ಸ್ಥಳೀಯ ಕಲೆಗಳು, ಸಂಸ್ಕೃತಿ ಮತ್ತು ಗ್ರಾಮೀಣ ಕ್ರೀಡೆಗಳ ಸೊಗಡು ಬಿಂಬಿಸುವ ಅಚ್ಚುಕಟ್ಟಾದ ಪ್ರಯತ್ನ ಇಲ್ಲಿ ನಡೆದಿದೆ.
    ಗೋಲಿ, ಚಿನ್ನಿ-ದಾಂಡು, ಕುಂಟಪಿಲ್ಲೆ, ಹಗ್ಗ ಜಿಗಿದಾಟ, ಕುಸ್ತಿ, ಕಬಡ್ಡಿ, ಟಗರು ಹಾಗೂ ಕೋಳಿ ಕಾಳಗಗಳ ವೈಭವ ಸಿಮೆಂಟ್ ಕಲಾಕೃತಿಗಳಲ್ಲಿ ಅರಳಿವೆ. ಯಕ್ಷಗಾನ, ಬಯಲಾಟದ ಮಾದರಿಗಳು ಇಲ್ಲಿವೆ. ಜಾನುವಾರು ಸಂತೆಯಲ್ಲಿ ಎತ್ತು- ಕುರಿಗಳ ಮಾರಾಟದ ಚಿತ್ರಣ, ಸರಳ ಯೋಗಗಳ ವಿಧಾನ, ನವರಸಗಳ ಮುಖಭಾವಗಳು, ಮರಗಳನ್ನು ಉಳಿಸುವ ಅಪ್ಪಿಕೋ ಚಳವಳಿ,ಮ ಪಾಲಕರು-ಮಕ್ಕಳ ಬಾಂಧವ್ಯ ಇನ್ನಿತರೆ ಶಿಲ್ಪ ದೃಶ್ಯಾವಳಿ ಇಲ್ಲಿಗೆ ಕಣ್ಣಿಗೆ ಹಬ್ಬ ನೀಡಲಿವೆ.
    ಕನ್ನಡ ಭುವನೇಶ್ವರಿ, ದುರ್ಗಾಂಬಿಕಾ ಜಾತ್ರೆಯ ವೈಭವ, ಇರುವೆ ಗೂಡು, ಯಕ್ಷಗಾನ, ಸೂತ್ರದ ಬೊಂಬೆಯಾಟ, ಹುಲಿಕುಣಿತ, ತಮಟೆ ವಾದನ, ಬುಡಬುಡಕೆ, ಗೀಗೀಪದ, ಗೊರವರು, ಜೋಗತಿಯರು, ಲಂಬಾಣಿ ನೃತ್ಯ ಮೊದಲಾದ ಜಾನಪದೀಯ ಸಂಸ್ಕೃತಿ ಅನಾವರಣ ಮಾಡಲಾಗಿದೆ. ಸುತ್ತಲಿನ ಗಿಡ-ಮರಗಳಿಗೆ ನೀರುಣಿಸಲು ತುಂತುರು ನೀರಾವರಿ ವ್ಯವಸ್ಥೆಯೂ ಇದೆ.

    ಬಯಲುರಂಗಮಂದಿರ, ಥೀಮ್ ಪಾರ್ಕ್ ವಿನ್ಯಾಸ ಉತ್ತಮವಾಗಿ ಮೂಡಿಬಂದಿವೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ವೀಕ್ಷಣೆ ಮಾಡಿದ ಬಳಿಕ ರಸ್ತೆ ಸಂಪರ್ಕ, ಕಾಂಪೌಂಡ್ ಎತ್ತರ ಸೇರಿ ಉಳಿದೆಲ್ಲ ಸಣ್ಣಪುಟ್ಟ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
    ಬಾ.ಮ.ಬಸವರಾಜಯ್ಯ
    ರಂಗಕರ್ಮಿ ಹಾಗೂ ಸಾಹಿತಿ.

    ಬಯಲು ರಂಗಮಂದಿರ ಕಟ್ಟಡದ ಬಹುತೇಕ ಕೆಲಸ ಪೂರ್ಣಗೊಂಡಿವೆ. ರಸ್ತೆ ಸಂಪರ್ಕಕ್ಕೆ ನಮ್ಮಲ್ಲಿ ಅನುದಾನವಿಲ್ಲ. ದಾವಣಗೆರೆ ಸಾರ್ವಜನಿಕರು, ರಂಗಾಸಕ್ತರು ಇದನ್ನು ಬಳಸಿಕೊಂಡಲ್ಲಿ ಆರ್ಥಿಕತೆಗೆ ಅವಕಾಶವಾಗಲಿದೆ.
    ವೀರೇಶ್‌ಕುಮಾರ್,
    ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್ ಎಂ.ಡಿ.

    ಒಂದೆರಡು ದಿನದಲ್ಲಿ ಜಿಲ್ಲಾ ಸಚಿವರನ್ನು ಸಂಪರ್ಕಿಸಿ, ಚುನಾವಣೆ ನೀತಿ ಸಂಹಿತೆಯೊಳಗಾಗಿ ಥೀಮ್‌ಪಾರ್ಕ್ ಆರಂಭಿಸಲು ಗಮನ ಹರಿಸಲಾಗುವುದು. ನಂತರದಲ್ಲಿ ದೃಶ್ಯಕಲಾ ಕಾಲೇಜಿನ ಸಲಹಾ ಸಮಿತಿಯನ್ನೇ ಥೀಮ್ ಪಾರ್ಕ್ ನಿರ್ವಹಣೆ ಜವಾಬ್ದಾರಿ ವಹಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
    ಪ್ರೊ.ಬಿ.ಡಿ.ಕುಂಬಾರ
    ದಾವಣಗೆರೆ ವಿವಿ ಕುಲಪತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts