More

    ಮಂದಿರದ ಮೇಲೆಯೇ ಜ್ಞಾನವಾಪಿ ಮಸೀದಿ; ಎಎಸ್​ಐ ಸಮೀಕ್ಷಾ ವರದಿಯಲ್ಲಿ ಉಲ್ಲೇಖ

    ವಾರಾಣಸಿ: ಉತ್ತರಪ್ರದೇಶದ ವಾರಾಣಸಿ ಯಲ್ಲಿರುವ ವಿವಾದಿತ ಜ್ಞಾನವಾಪಿ ಮಸೀದಿಯ ಪಶ್ಚಿಮದ ಗೋಡೆಯು ಹಿಂದು ದೇವಾಲಯವೊಂದರ ಉಳಿದ ಭಾಗವಾಗಿದೆ ಎಂದು ಕಟ್ಟಡದ ಬಗ್ಗೆ ಭಾರತೀಯ ಪುರಾತತ್ವ ಸರ್ವೆಕ್ಷಣಾಲಯ (ಎಎಸ್​ಐ) ನಡೆಸಿದ ಭೂಭೇದಕ ರೇಡಾರ್ (ಜಿಪಿಆರ್) ಸಮೀಕ್ಷೆ ವರದಿ ಹೇಳಿದೆ. ಈಗಿರುವ ಕಟ್ಟಡದ, ಅಂದರೆ ಮಸೀದಿಯ ನಿರ್ವಣಕ್ಕೂ ಮುನ್ನ ಅಲ್ಲಿ ಹಿಂದು ದೇವಾಲಯವಿತ್ತು ಎಂದು ಎಎಸ್​ಐ ವರದಿ ಸ್ಪಷ್ಟಪಡಿಸಿದೆ. ಪ್ರಕರಣದ ಹಿಂದು ಮತ್ತು ಮುಸ್ಲಿಂ ಕಡೆಯ ಅರ್ಜಿದಾರರಿಗೆ ಎಎಸ್​ಐ ವರದಿಯನ್ನು ನೀಡಲು ಜಿಲ್ಲಾ ಕೋರ್ಟ್ ಅನುಮತಿ ನೀಡಿದೆ. ಎಎಸ್​ಐ ಕಂಡುಕೊಂಡ ವಿಚಾರಗಳು ನಿರ್ಣಾಯಕವಾಗಿವೆ ಎಂದು ಹಿಂದುಪರ ವಕೀಲ ವಿಷ್ಣು ಶಂಕರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ. ಮಸೀದಿ ನಿರ್ವಣಕ್ಕೂ ಮುನ್ನ ಅಲ್ಲಿ ಹಿಂದು ದೇವಸ್ಥಾನ ಇದ್ದುದನ್ನು ಸಮೀಕ್ಷೆ ದೃಢಪಡಿಸಿದೆ ಎಂದು ಜೈನ್ ಹೇಳಿದ್ದಾರೆ.

    ಬಹಿರಂಗಪಡಿಸದಂತೆ ತಾಕೀತು: ಕಾಶಿ ವಿಶ್ವನಾಥ ಮಂದಿರ ಸಮೀಪದ ಜ್ಞಾನವಾಪಿ ಮಸೀದಿ ಕುರಿತ ಎಎಸ್​ಐ ಸಮೀಕ್ಷಾ ವರದಿಯನ್ನು ಉಭಯ ಅರ್ಜಿದಾರರು ಪಡೆದುಕೊಂಡರೂ, ಅದನ್ನು ಬಹಿರಂಗಪಡಿಸಬಾರದು ಎಂದು ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್ ಆದೇಶ ಹೊರಡಿಸಿದ್ದರು.

    ವರದಿ ಪ್ರತಿಗೆ 11 ಅರ್ಜಿ: ಎಎಸ್​ಐ ವರದಿಯ ಪ್ರತಿಯನ್ನು ಒದಗಿಸುವಂತೆ ಹಿಂದು ಮತ್ತು ಮುಸ್ಲಿಂ ಸಮುದಾಯದ ಒಟ್ಟು 11 ಜನರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ಪರಿಶೀಲನೆ ನಂತರ, ಮುಂದಿನ ಸೋಮವಾರ ಅಥವಾ ಗುರುವಾರ ಅರ್ಜಿದಾರರಿಗೆ ವರದಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಹಿಂದು ಪರ ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ.

    ವೈಜ್ಞಾನಿಕ ಸಮೀಕ್ಷೆ: ಹಿಂದು ದೇವಾಲಯದ ಮೇಲೆ ಮಸೀದಿಯನ್ನು ಕಟ್ಟಲಾಗಿದೆಯೇ ಎನ್ನುವುದನ್ನು ನಿರ್ಧರಿಸಲು ಜ್ಞಾನವಾಪಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಜಿಲ್ಲಾ ನ್ಯಾಯಾಲಯ ಕಳೆದ ವರ್ಷ ಜು.21ರಂದು ಆದೇಶಿಸಿತ್ತು. ಅದರನ್ವಯ ಸಮೀಕ್ಷೆ ನಡೆಸಿ ಕೋರ್ಟ್​ಗೆ ವರದಿ ಸಲ್ಲಿಸಲಾಗಿತ್ತು.

    ಸಮೀಕ್ಷೆಯಲ್ಲಿ ಕನ್ನಡ ಶಾಸನ ಪತ್ತೆ!: ಜ್ಞಾನವಾಪಿ ಪ್ರಕರಣದಲ್ಲಿ ಕನ್ನಡ ಶಾಸನವೊಂದು ಪತ್ತೆಯಾಗಿರುವ ವಿಷಯವನ್ನು ಈ ಕೇಸ್​ನಲ್ಲಿನ ಹಿಂದುಪರ ವಕೀಲ ವಿಷ್ಣುಶಂಕರ್ ಜೈನ್ ಪ್ರಸ್ತಾಪಿಸಿದ್ದಾರೆ. ಈಗ ಅಸ್ತಿತ್ವದಲ್ಲಿರುವ ಹಾಗೂ ಇದಕ್ಕೂ ಹಿಂದಿನ ರಚನೆಯಲ್ಲಿ ಹಲವಾರು ಶಾಸನಗಳು ಇರುವುದು ಕಂಡುಬಂದಿದೆ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ತಿಳಿಸಿದೆ ಎಂದಿದ್ದಾರೆ. ಒಟ್ಟು 34 ಶಾಸನಗಳನ್ನು ದಾಖಲಿಸಲಾಗಿದ್ದು, ಇವು ಈ ಹಿಂದೆ ಅಸ್ತಿತ್ವದಲ್ಲಿದ್ದ ಹಿಂದು ದೇವಾಲಯದಲ್ಲಿನ ಕಲ್ಲಿನ ಶಾಸನಗಳಾಗಿವೆ. ಆ ಕಲ್ಲುಗಳನ್ನು ಈಗಿನ ರಚನೆಯ ನಿರ್ಮಾಣ ಮತ್ತು ದುರಸ್ತಿಯಲ್ಲಿ ಬಳಸಲಾಗಿದೆ. ಕನ್ನಡ, ದೇವನಾಗರಿ, ತೆಲುಗು ಮತ್ತು ಗ್ರಂಥ ಶಾಸನಗಳು ಪತ್ತೆಯಾಗಿದ್ದು, ಇವುಗಳಲ್ಲಿ ಜನಾರ್ದನ, ರುದ್ರ ಮತ್ತು ಉಮೇಶ್ವರ ದೇವರ ಹೆಸರುಗಳೂ ಕಂಡುಬಂದಿವೆ ಎಂದು ಜೈನ್ ಹೇಳಿದ್ದಾರೆ.

    ಔರಂಗಜೇಬನ ಕಾಲದಲ್ಲಿ ಧ್ವಂಸ: ಮಸೀದಿಯನ್ನು ಔರಂಗಜೇಬನ ಆಡಳಿತದ 20ನೇ ವರ್ಷದಲ್ಲಿ (1676-77) ಕಟ್ಟಲಾಗಿದೆ ಎಂದು ಕಟ್ಟಡದ ಕೋಣೆಯೊಂದರಲ್ಲಿ ದೊರೆತ ಅರೇಬಿಕ್-ಪರ್ಷಿಯನ್ ಶಾಸನ ಬರಹಗಳು ಉಲ್ಲೇಖಿಸಿವೆ. ಆದ್ದರಿಂದ ಮೊದಲೇ ಇದ್ದ ದೇವಸ್ಥಾನವನ್ನು ಔರಂಗಜೇಬನ ಆಡಳಿತ ಕಾಲದ 17ನೇ ಶತಮಾನದಲ್ಲಿ ನಾಶಪಡಿಸಿದಂತೆ ಹಾಗೂ ಅದರ ಒಂದು ಭಾಗವನ್ನು ಬದಲಾಯಿಸಿ ಹಾಲಿ ಸಂರಚನೆಯಲ್ಲಿ ಮರುಬಳಸಿರುವಂತೆ ಕಂಡುಬರುತ್ತದೆ ಎಂದು ಎಎಸ್​ಐ ವರದಿ ಹೇಳಿದೆ.

    ಕೇಂದ್ರೀಯ ಕೊಠಡಿ ಅಬಾಧಿತ: ಪಶ್ಚಿಮ ಕೊಠಡಿ, ಕೇಂದ್ರೀಯ ಚೇಂಬರ್​ನ ಪಶ್ಚಿಮ ಮುಂಚಾಚುಗಳು (ಪ್ರೊಜೆಕ್ಷನ್) ಮತ್ತು ಅದರ ಉತ್ತರ ಮತ್ತು ದಕ್ಷಿಣದ ಎರಡು ಕೋಣೆಗಳ ಉಳಿದ ಭಾಗಗಳಿಂದ ಈ ಕಲ್ಲಿನ ಗೋಡೆಯನ್ನು ಕಟ್ಟಲಾಗಿದೆ. ಅಡ್ಡ ಎರಕಗಳಿಂದ (ಮೌಲ್ಡಿಂಗ್) ಅಲಂಕರಿಸಲಾಗಿದೆ ಎಂದು ವರದಿ ವಿವರಿಸಿದೆ. ಗೋಡೆಗೆ ತಾಗಿಕೊಂಡಿರುವ ಕೇಂದ್ರೀಯ ಕೊಠಡಿ ಇನ್ನೂ ಬದಲಾಗದೆ ಉಳಿದಿದೆ. ಪಕ್ಕದ ಎರಡೂ ಕೋಣೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದಿದೆ.

    ಹೂತು ಹೋದ ಶಿಲ್ಪಗಳು: ಹಿಂದು ದೇವತೆಗಳ ಶಿಲ್ಪಗಳು ಮತ್ತು ಕೆತ್ತನೆಗಳು ಮಣ್ಣಿನಲ್ಲಿ ಹೂತು ಹೋಗಿರುವುದು ಕಂಡು ಬಂದಿದೆ ಎಂದು ಎಎಸ್​ಐ ವರದಿ ವಿವರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts