ಶಿವಮೊಗ್ಗ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನವನ್ನುಂಟು ಮಾಡಿದೆ.
ಶಿವಮೊಗ್ಗದ ಬೆಕ್ಕಿನ ಕಲ್ಮಟದಲ್ಲಿ ಆಯೋಜಿಸಿರುವ ಗುರು ಬಸವಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಭಾವೈಕ್ಯತ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಅಭಿವೃದ್ಧಿ ಕೆಲಸಗಳು ಶಿವಮೊಗ್ಗ ಜಿಲ್ಲೆಯಲ್ಲಿ ಆಗಿರುವುದನ್ನು ಗಮನಿಸಿದ್ದೇನೆ. ಉತ್ತಮ ಸಂಸದರನ್ನು ಆಯ್ಕೆ ಮಾಡಿದ್ದೀರಿ. ಮುಂದೆಯೂ ಇವರನ್ನು ಆಯ್ಕೆ ಮಾಡಬೇಕಿರುವುದು ಸಾರ್ವಜನಿಕರ ಕರ್ತವ್ಯವಾಗಿದೆ.
ಇದನ್ನೂ ಓದಿ: ಕ್ರಿಕೆಟ್ ಆಡಿದ ಮರುಕ್ಷಣವೇ ಕುಸಿದು ಬಿದ್ದು ಯುವಕ ಸಾವು; ವೈದ್ಯರು ಹೇಳಿದ್ದಿಷ್ಟು
ಬಿವೈ ರಾಘವೇಂದ್ರ ಅವರಂಥ ಲೋಕಸಭಾ ಸದಸ್ಯರನ್ನು ಪಡೆದಿರುವ ನೀವೇ ಧನ್ಯರು. ಜಿಲ್ಲೆಯಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಪೂರ್ಣ ಮಾಡಿ ಮುನ್ನಡೆಯುತ್ತಿದ್ದಾರೆ. ಜನರಿಗೆ ಅಭಿವೃದ್ಧಿ ಕೆಲಸ ಆಗಬೇಕಿರುವುದು ಮೊದಲ ಆದ್ಯತೆಯಾಗಬೇಕು. ಜನರ ಅಭಿಲಾಷೆಯಂತೆ ಕೆಲಸ ಮಾಡಿರುವ ಲೋಕಸಭಾ ಸದಸ್ಯರನ್ನು ಮುಂಬರುವ ಚುನಾವಣೆಯಲ್ಲೂ ಗೆಲ್ಲಿಸಬೇಕು.
ವೀರಶೈವ ಲಿಂಗಾಯತರಲ್ಲಿ ಅನೇಕ ಒಳ ಪಂಗಡಗಳಿವೆ. ಅವುಗಳೆಲ್ಲವೂ ದೂರವಾಗಿ ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು ಆಗ ಮಾತ್ರ ಐಕ್ಯತೆ ಮೂಡುತ್ತದೆ. ಶಿವಮೊಗ್ಗ ಜಿಲ್ಲೆ ಇನ್ನಷ್ಟು ಅಭಿವೃದ್ಧಿಗೊಳ್ಳಬೇಕಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸುವಂತೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದ್ದಾರೆ.