BBKS10: ಹೆಚ್ಚಾಗ್ತಿದೆ ಕನ್ನಡ ಪದಗಳ ಬಳಕೆ; ಮೈಕಲ್​ ಪ್ರಯತ್ನಕ್ಕೆ ಸಿಕ್ತು ಕಿಚ್ಚನ ಚಪ್ಪಾಳೆ!

Untitled design (45)
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ ಏಳನೇ ವಾರದ ಅಂತಿಮ ಘಟಕ್ಕೆ ತಲುಪಿದ್ದು, ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಸುದೀಪ್​ ಅವರಿಂದ ಪ್ರತಿವಾರದಂತೆ ಈ ವಾರವೂ ಕೂಡ ಹೆಚ್ಚಿನ ಕ್ಲಾಸ್​ ಪಡೆದುಕೊಂಡಿದ್ದಾರೆ.

ವೀಕ್ಷಕರ ಪ್ರಕಾರ ಯಾರು ಹೇಗೆಲ್ಲಾ ಕಾಣಿಸುತ್ತಿದ್ದಾರೆ ಹೊರಗಡೆ ಎಂಬುದನ್ನು ಆಯಾ ಸ್ಪರ್ಧಿಗಳಿಗೆ ಸುದೀಪ್​ ಸರಳವಾಗಿ ತಿಳಿ ಹೇಳಿದ್ದಾರೆ. ಈ ಮಧ್ಯೆ ಮೈಕಲ್​ಗೆ ಕಿಚ್ಚನ ಚಪ್ಪಾಳೆ ಕೊಟ್ಟ ಕಿಚ್ಚ, ಅವರ ಪ್ರಯತ್ನವನ್ನು ಮೆಚ್ಚಿ ಮಾತನಾಡಿದ್ದಾರೆ.

ಶನಿವಾರದ ಕಿಚ್ಚನ ಪಂಚಾಯಿತಿಗಾಗಿ ಈ ಬಾರಿ ಹೆಚ್ಚಿನ ಕಾತರದಿಂದ ಕಾದಿದ್ದು ಮನೆಯ ಸದಸ್ಯರಿಗಿಂತ ವೀಕ್ಷಕರು ಎಂಬುದರಲ್ಲಿ ಅನುಮಾನವೇ ಇಲ್ಲ. ಕಾರಣ ಈ ವಾರದ ಆರಂಭದಿಂದಲೂ ಸ್ಪರ್ಧಿಗಳ ಮಧ್ಯೆ ಭಾರೀ ಜಟಾಪಟಿ, ಮಾತಿನ ಚಕಮಕಿ, ಹೊಡೆದಾಟ ಮಾಡಿಕೊಳ್ಳುವಷ್ಟು ಮಿತಿ ಮೀರಿದ ವರ್ತನೆ ವೀಕ್ಷಕರಲ್ಲಿ ಭಾರೀ ಗೊಂದಲ ಮೂಡಿಸಿತ್ತು. ಈ ವಿಚಾರಗಳ ಕುರಿತು ಯಾರದು ತಪ್ಪು? ಯಾರದು ಸರಿ? ಎಂಬ ಸಂಗತಿಗಳನ್ನು ಸುದೀಪ್ ಹೇಗೆ ತಿಳಿಸಲಿದ್ದಾರೆ ಎಂಬ ಕುತೂಹಲ ತೀವ್ರವಾಗಿತ್ತು.

ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್​ ಎಂದಿನಂತೆ ಈ ವಾರವೂ ಖಡಕ್​ ಆಗಿಯೇ ಇತ್ತು. ಸ್ಪರ್ಧಿಗಳಿಗೆ ಕೆಲವು ಸಂಗತಿಗಳನ್ನು ಸಂದರ್ಭಗಳ ಸಹಿತ ವಿವರಿಸಿದ ಸುದೀಪ್,​ ಅವರವರ ತಪ್ಪನ್ನು ಸೂಕ್ತ ಕಾರಣಗಳ ಮೂಲಕ ತಿಳಿ ಹೇಳಿದರು.

ಇದೆಲ್ಲದರ ಮಧ್ಯೆಯೇ ಪ್ರತಿವಾರ ಒಬ್ಬ ಸ್ಪರ್ಧಿಗೆ ತಮ್ಮ ಕಿಚ್ಚನ ಚಪ್ಪಾಳೆ ಕೊಡುವಂತೆ ಈ ವಾರ ಮೈಕಲ್​ಗೆ ತಮ್ಮ ಚಪ್ಪಾಳೆಯನ್ನು ಸುದೀಪ್ ಕೊಟ್ಟರು. ಇದಕ್ಕೆ ಕಾರಣ ತಿಳಿಸಿದ ಕಿಚ್ಚ, ಟಾಸ್ಕ್​ ವೇಳೆ ತೆಗೆದುಕೊಂಡ ನಿರ್ಧಾರ, ಆಟವಾಡಿದ ವೈಖರಿ ಮತ್ತು ಹೆಚ್ಚಾಗಿ ಮನೆಯೊಳಗೆ ಇಂಗ್ಲಿಷ್ ಬದಲು ಕನ್ನಡ ಪದಗಳ ಬಳಕೆಗೆ ಕೊಡುತ್ತಿರುವ ಆದ್ಯತೆ ನನಗೆ ಇಷ್ಟವಾಯಿತು ಎಂದರು.

'ಆಪರ್ಚುನಿಸ್ಟ್'​ ಎಂಬ ಆಂಗ್ಲ ಪದಕ್ಕೆ 'ಅವಕಾಶವಾದಿ' ಎಂಬ ಕನ್ನಡ ಪದವನ್ನೇ ಹುಡುಕಿ ಹೇಳಿದ್ದು, ನನಗೆ ಹೆಚ್ಚು ಖುಷಿ ತಂದಿತು. ಕನ್ನಡ ಮಾತನಾಡುವ ನಿಮ್ಮ ಈ ಪ್ರಯತ್ನಕ್ಕೆ ನನ್ನ ಮೆಚ್ಚುಗೆ ಇದೆ ಎಂದು ಸುದೀಪ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net