More

  ರಾಜಸ್ಥಾನಕ್ಕೆ ಯಾರು ರಾಯಲ್ಸ್?; ರಾಜಕೀಯ ಪಕ್ಷಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

  ಜೈಪುರ: ಕುತೂಹಲ ಕೆರಳಿಸಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತದಾನ ಶನಿವಾರ ಬಹುತೇಕ ಶಾಂತಿಯುತವಾಗಿ ನಡೆಯಿತು. ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು 199 ಕ್ಷೇತ್ರಗಳ ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ರಾಜ್ಯದ ಜನರು ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಭದ್ರಪಡಿಸಿದ್ದಾರೆ. ಕಾಂಗ್ರೆಸ್ ತನ್ನ ಸರ್ಕಾರವನ್ನು ಉಳಿಸಿಕೊಂಡು ಪುನಃ ಅಧಿಕಾರಕ್ಕೆ ಬರುವ ಹವಣಿಕೆಯಲ್ಲಿದ್ದರೆ ಹೊಸ ಸರ್ಕಾರ ರಚಿಸುವುದು ಬಿಜೆಪಿ ಬಯಕೆಯಾಗಿದೆ.

  ಸಂಜೆವರೆಗೆ ಶೇ. 68.24 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ರಾಜ್ಯದಾದ್ಯಂತ 51,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಕೆಲವು ಸಣ್ಣಪುಟ್ಟ ಅನಪೇಕ್ಷಿತ ಘಟನೆಗಳನ್ನು ಬಿಟ್ಟರೆ ಉಳಿದಂತೆ ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿತ್ತು. 1,862 ಆಕಾಂಕ್ಷಿಗಳ ಭವಿಷ್ಯವನ್ನು ನಿರ್ಣಯಿಸಲು ಮರುಭೂಮಿ ರಾಜ್ಯದ ಸುಮಾರು 5.25 ಕೋಟಿಗೂ ಅಧಿಕ ಮತದಾರರು ಅವಕಾಶ ಹೊಂದಿದ್ದರು. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಐದು ರಾಜ್ಯಗಳ ಪ್ರಸಕ್ತ ಅಸೆಂಬ್ಲಿ ಚುನಾವಣೆ ಬಹಳ ಮಹತ್ವದ್ದಾಗಿದೆ.

  ಮತದಾರರ ಉತ್ಸಾಹ: ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು, ರಾಜ್ಯದಾದ್ಯಂತ ಯುವನಜರು ಮತ್ತು ವೃದ್ಧರ ಸಹಿತ ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತು ಮತ ಚಲಾವಣೆಗೆ ಉತ್ಸಾಹ ತೋರುತ್ತಿದ್ದ ದೃಶ್ಯಗಳು ಕಂಡು ಬಂದವು. ದೊಡ್ಡ ಪ್ರಮಾಣದಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೊದ ಲಾದ ನಾಯಕರು ಬೆಳಗ್ಗೆ ಕರೆ ನೀಡಿದ್ದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಹಾಗೂ ಕೈಲಾಶ್ ಚೌಧರಿ, ಮಾಜಿ ಸಿಎಂ ವಸುಂಧರಾ ರಾಜೇ, ಮಾಜಿ ಡಿಸಿಎಂ ಸಚಿನ್ ಪೈಲಟ್ ಮೊದಲಾದವರು ವೋಟಿಂಗ್ ಪ್ರಕ್ರಿಯೆಯ ಆರಂಭದಲ್ಲೇ ಮತ ಚಲಾಯಿಸಿದ ಪ್ರಮುಖರಲ್ಲಿ ಸೇರಿದ್ದರು.

  ಬಿಜೆಪಿಯಿಂದಲೇ ಬದಲಾವಣೆ: ತೆಲಂಗಾಣದಲ್ಲಿ ಬದಲಾವಣೆ ತರಲು ಬಿಜೆಪಿಗೆ ಮಾತ್ರ ಸಾಧ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಪ್ರತಿಪಾದಿಸಿದರು. ಕಾಂಗ್ರೆಸ್ ಅಥವಾ ಎಐಎಂಐಎಂಗೆ ನೀಡುವ ಒಂದೊಂದು ಮತವೂ ಬಿಆರ್​ಎಸ್​ಗೆ ನೀಡುವ ಮತ ವಾಗುತ್ತದೆ. ಯಾಕೆಂದರೆ, ಹಿಂದೆ ಈ ಎರಡೂ ಪಕ್ಷಗಳು ಬಿಆರ್​ಎಸ್​ಗೆ ಬೆಂಬಲ ನೀಡಿದ ದಾಖಲೆಯಿದೆ ಎಂದವರು ಹೇಳಿದರು.

  ರಾಹುಲ್ ವಿರುದ್ಧ ಬಿಜೆಪಿ ಆರೋಪ: ರಾಜಸ್ಥಾನ ಅಸೆಂಬ್ಲಿ ಚುನಾವಣೆ ದಿನವಾದ ಶನಿವಾರವೇ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿ ಸಿದೆ. ‘ರಾಜಸ್ಥಾನ ಉಚಿತ ಚಿಕಿತ್ಸೆಯನ್ನು ಆಯ್ಕೆ ಮಾಡುತ್ತದೆ. ಅಗ್ಗದ ಅನಿಲ ಸಿಲಿಂಡರ್​ಅನ್ನು ಆಯ್ಕೆ ಮಾಡಲಿದೆ. ಬಡ್ಡಿ-ರಹಿತ ಕೃಷಿ ಸಾಲವನ್ನು ಆಯ್ಕೆ ಮಾಡಲಿದೆ. ರಾಜಸ್ಥಾನ ಇಂಗ್ಲಿಷ್ ಶಿಕ್ಷಣವನ್ನು ಆಯ್ಕೆ ಮಾಡುತ್ತದೆ. ಒಪಿಎಸ್​ಅನ್ನು ಚುನಾಯಿಸುತ್ತದೆ. ಜಾತಿ ಗಣತಿಯನ್ನು ಆಯ್ಕೆ ಮಾಡು ತ್ತದೆ’ ಎಂದು ಕಾಂಗ್ರೆಸ್​ಅನ್ನು ಚುನಾಯಿಸುವಂತೆ ಎಕ್ಸ್ ಪೋಸ್ಟ್ ನಲ್ಲಿ ಜನರಿಗೆ ಮನವಿ ಮಾಡಿದ್ದ ಗಾಂಧಿ ಬರೆದಿದ್ದರು. ಇವೆಲ್ಲ ಕಾಂಗ್ರೆಸ್ ನೀಡಿದ ಚುನಾವಣಾ ಗ್ಯಾರಂಟಿಗಳಾಗಿವೆ.

  Rajasthan

  ಹೆಸರು ಬದಲಾದರೂ ಭ್ರಷ್ಟಾಚಾರ ಬದಲಾಗದು: ತೆಲಂಗಾಣದ ಕಾಮರೆಡ್ಡಿಯಲ್ಲಿ ಶನಿವಾರ ಅಸೆಂಬ್ಲಿ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ಮಾಡಿದರು. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್) ಎಂದು ಬದಲಾಗಿದೆ. ಯುಪಿಎ ತನ್ನನ್ನು ಇಂಡಿಯಾ ಮೈತ್ರಿಕೂಟ ಎಂದು ಮರುನಾಮಕರಣ ಮಾಡಿಕೊಂಡಿದೆ. ಹೆಸರು ಬದಲಾದರೂ ಅವುಗಳ ಭ್ರಷ್ಟಾಚಾರ ಮತ್ತು ದುರಾಡಳಿತ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಮೋದಿ ಹೇಳಿದರು. ಜನರಿಗೆ ದ್ರೋಹ ಬಗೆಯುವುದು ಬಿಆರ್​ಎಸ್ ಮತ್ತು ಕಾಂಗ್ರೆಸ್ ನಡುವಣ ಸಾಮಾನ್ಯ ಅಂಶವಾಗಿದೆ ಎಂದು ಟೀಕಿಸಿದರು.ನವೆಂಬರ್ 30ರಂದು ತೆಲಂಗಾಣ ಅಸೆಂಬ್ಲಿ ಚುನಾವಣೆ ನಡೆಯಲಿದೆ.

  ಹಲವೆಡೆ ಕಲ್ಲು ತೂರಾಟ: ಚುನಾವಣೆಗಾಗಿ ಭಾರಿ ಬಂದೋಬಸ್ತ್ ಏರ್ಪಡಿಸಿದ್ದರೂ ರಾಜ್ಯದ ಕೆಲವೆಡೆ ಕಲ್ಲು ತೂರಾಟ ಹಾಗೂ ಚಿಕ್ಕಪುಟ್ಟ ಘರ್ಷಣೆಗಳು ನಡೆದಿವೆ. ಸಿಕಾರ್ ಜಿಲ್ಲೆಯ ಬೋಚಿವಾಲ್ ಭವನ್​ನಲ್ಲಿ ಎರಡು ಗುಂಪುಗಳ ನಡುವೆ ಜಗಳವಾಗಿದ್ದು ಕಲ್ಲು ತೂರಾಟವೂ ನಡೆದಿದೆ. ಘರ್ಷಣೆಗಳಲ್ಲಿ ಒಬ್ಬ ಪೊಲೀಸ್ ಕಾನ್​ಸ್ಟೇಬಲ್ ತಲೆಗೆ ಗಾಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಹಕಂ ಅಲಿ ಖಾನ್ ಮತ್ತು ಪಕ್ಷೇತರ ಮಧುಸೂದನ್ ಭಿಂಡಾ ಬೆಂಬಲಿಗರು ಹೊಡೆದಾಡಿಕೊಂಡಿದ್ದು ಪರಿಸ್ಥಿತಿ ಉದ್ವಿಗ್ನವಾಗಿತ್ತು.

  ಗೆಹ್ಲೋಟ್ ವಿಶ್ವಾಸ: ರಾಜ್ಯದಲ್ಲಿ ಆಡಳಿತ-ವಿರೋಧಿ ಅಲೆ ಇದ್ದಂತೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಪುನರಾ ವರ್ತನೆಯಾಗಲಿದೆ ಎಂದು ಮುಖ್ಯಮಂತ್ರಿ ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಆಯೋಗ ವಿರುದ್ಧ ಯೆಚುರಿ ಟೀಕೆ: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ‘ಜೈ ಬಜರಂಗ ಬಲಿ’ ಎಂಬ ಘೋಷಣೆ ಕೂಗಿ ಮತ ಕೋರಿದಾಗ ಕೇಂದ್ರ ಚುನಾವಣಾ ಆಯೋಗ ಮೌನವಾಗಿತ್ತು. ಆದರೆ, ಪ್ರತಿಪಕ್ಷ ನಾಯಕರ ಹೇಳಿಕೆಗಳಿಗೆ ಆಯೋಗ ಪ್ರತಿಕ್ರಿಯಿಸುತ್ತದೆ. ನೋಟಿಸ್​ಗಳನ್ನು ಕಳಿಸುತ್ತದೆ. ನಿಯಮಾವಳಿ ಬಗ್ಗೆ ಮಾತನಾಡು ತ್ತದೆ ಎಂದು ಮಾರ್ಕ್ಸ್​ವಾದಿ ಕಮ್ಯೂನಿಸ್ಟ್ ಪಕ್ಷದ (ಸಿಪಿಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಶನಿವಾರ ಟೀಕಿಸಿದ್ದಾರೆ. ದೇಶದಲ್ಲಿ ಸಂವಿ ಧಾನ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿಯನ್ನು ಅಧಿಕಾರ ದಿಂದ ಹೊರಗಿಡಬೇಕು ಎಂದು ಸಿಪಿಎಂ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ತೆಲಂಗಾಣಕ್ಕೆ ಆಗಮಿಸಿರುವ ಯೆಚುರಿ ಸುದ್ದಿಗೋಷ್ಠಿ ಯಲ್ಲಿ ಹೇಳಿದರು. ಇಲ್ಲದಿದ್ದರೆ ದೇಶದ ಜಾತ್ಯತೀತ ಪ್ರಜಾಪ್ರಭುತ್ವವನ್ನು ಉಳಿಸಲಾಗದು ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts