

ಜೈಪುರ: ನೀನು ಮಾಡುವ ಕೆಲಸವನ್ನು ಪ್ರೀತಿಸು ಮತ್ತು ಶ್ರಮ ವಹಿಸು ಪ್ರತಿಫಲ ತಾನಾಗಿಯೇ ನಿನ್ನ ಮುಂದೆ ಬರುತ್ತದೆ ಎಂಬ ಹಿರಿಯರ ಅನುಭವದ ಮಾತಿಗೆ ತಾಜಾ ನಿದರ್ಶನವೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಬರ್ಮರ್ ಜಿಲ್ಲೆಯ ಕುಗ್ರಾಮವೊಂದರ ನಿವಾಸಿ ಮಹಿಪಾಲ್ ಸೆಜು ಎಂಬುವರು ಜಪಾನ್ನ ಪ್ರತಿಷ್ಠಿತ ಕಂಪನಿಯಲ್ಲಿ ವಾರ್ಷಿಕ 1 ಕೋಟಿ ರೂ. ಸಂಬಳದ ಉದ್ಯೋಗ ಗಿಟ್ಟಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಬರ್ಮರ್ ಜಿಲ್ಲೆ ಇಂಡೋ-ಪಾಕ್ ಗಡಿಯಲ್ಲಿ ಬರುತ್ತದೆ. ಬರ್ಮರ್ನಲ್ಲಿ ಆರಂಭಿಕ ಶಿಕ್ಷಣ ಪಡೆದ ಮಹಿಪಾಲ್, ದೆಹಲಿಯಲ್ಲಿ ಬಿಟೆಕ್ ಶಿಕ್ಷಣ ಮುಗಿಸಿ, ಜಪಾನ್ನ ನಗೋಯಾ ನಗರದಲ್ಲಿ ಆರಂಭದಲ್ಲಿ ವಾರ್ಷಿಕ 30 ಲಕ್ಷ ರೂ. ಸಂಬಳದ ಉದ್ಯೋಗವನ್ನು ಸೇರಿದರು. ಕೆಲಸದ ಮೇಲಿನ ಅವರ ಶ್ರದ್ಧೆ ಹಾಗೂ ಕೌಶಲ ಇಂದು ವೃತ್ತಿ ಜೀವನದ ಯಶಸ್ಸಿನ ಶಿಖರಕ್ಕೇರುವಂತೆ ಮಾಡಿದೆ. ಜಪಾನ್ ರಾಜಧಾನಿ ಟೋಕಿಯೋದಲ್ಲಿರುವ ಕಂಪನಿಯೊಂದು ಮಹಿಪಾಲ್ಗೆ ವಾರ್ಷಿಕ 1 ಕೋಟಿ ರೂ. ಸಂಬಳದ ಆಫರ್ ನೀಡಿ ಅವರನ್ನು ತಮ್ಮ ಕಂಪನಿಗೆ ಸೇರಿಸಿಕೊಂಡಿದೆ.
ಜೋಧ್ಪುರದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಮಹಿಪಾಲ್, ಕೋಟಾದಲ್ಲಿ ಐಐಟಿ ತಯಾರಿಯನ್ನು ಮುಂದುವರಿಸಿದರು. ನಂತರ ದೆಹಲಿಯಿಂದ 4 ವರ್ಷಗಳ ಬಿಟೆಕ್ ಪೂರ್ಣಗೊಳಿಸಿದರು. 2019ರಲ್ಲಿ ಜಾಬ್ ಏಜೆನ್ಸಿ ಮೂಲಕ ನಗೋಯಾ ನಗರದಲ್ಲಿ 30 ಲಕ್ಷ ರೂ. ಸಂಬಳದ ಉದ್ಯೋಗಕ್ಕೆ ಸೇರಿಕೊಂಡರು. ಪ್ರಸ್ತುತ ಟೋಕಿಯೋದಲ್ಲಿ ಮೆಕ್ಯಾನಿಕಲ್ ಕಾರ್ಪೊರೇಷನ್ ಕಂಪನಿಗೆ ಐಟಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಮಹಿಪಾಲ್ ಸೆಜು ಅವರ ತಂದೆ ಗಂಭೀರಂ ಅವರು ಈ ಹಿಂದೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿ ಈಗ ನಿವೃತ್ತರಾಗಿದ್ದಾರೆ. ಅವರ ತಾಯಿ ಮಾತಾ ಕಮಲಾ ದೇವಿ ಅನಕ್ಷರಸ್ಥರು. ಮಹಿಪಾಲ್ ತನ್ನ ನಾಲ್ಕು ಸಹೋದರರಲ್ಲಿ ಕಿರಿಯವರು. ಮಹಿಪಾಲ್ ಅವರ ಈ ಯಶಸ್ಸು ಕುಗ್ರಾಮಗಳಲ್ಲಿ ಜನಿಸಿದ ವ್ಯಕ್ತಿಗಳು ಸಹ ಕಠಿಣ ಪರಿಶ್ರಮ ಮತ್ತು ಕೌಶಲ್ಯದ ಮೂಲಕ ಜಾಗತಿಕ ಮನ್ನಣೆಯನ್ನು ಸಾಧಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. (ಏಜೆನ್ಸೀಸ್)