ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನು ಬಾರ್​ಕೋಡ್ ವ್ಯವಸ್ಥೆ; ಈ ಮುಂಗಾರು ಹಂಗಾಮಿನಿಂದಲೇ ಎಲ್ಲೆಡೆ ಜಾರಿ

Computer
Published on

| ರಮೇಶ ಜಹಗೀರದಾರ್ ದಾವಣಗೆರೆ

ಪ್ರಸ್ತುತ ಮುಂಗಾರು ಹಂಗಾಮಿನಿಂದ ರಾಜ್ಯದ ರೈತ ಸಂಪರ್ಕ ಕೇಂದ್ರಗಳಲ್ಲಿ ಬಾರ್​ಕೋಡ್ ವ್ಯವಸ್ಥೆ ಜಾರಿಗೆ ಬಂದಿದ್ದು, ಇನ್ನು ಮುಂದೆ ಅಲ್ಲಿನ ವ್ಯವಹಾರಗಳು ಕಾಗದರಹಿತವಾಗಲಿವೆ. ರಾಜ್ಯದಲ್ಲಿ 748 ರೈತ ಸಂಪರ್ಕ ಕೇಂದ್ರಗಳಿದ್ದು ಅವುಗಳ ಮೂಲಕ ಬಿತ್ತನೆ ಬೀಜ, ಕೀಟನಾಶಕ, ಲಘು ಪೋಷಕಾಂಶ ಗಳು, ತಾಡಪಾಲು, ಕೃಷಿ ಯಂತ್ರೋಪಕರಣ ಇತ್ಯಾದಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತದೆ. ಇದೆ ಲ್ಲದಕ್ಕೂ ಈಗ ಬಾರ್​ಕೋಡ್/ಕ್ಯೂಆರ್ ಕೋಡ್ ಬಳಕೆಯಾಗಲಿದೆ. ಕೆ-ಕಿಸಾನ್ ತಂತ್ರಾಂಶದ ನೆರವಿನಿಂದ ಈ ನೂತನ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪರಿಕರಗಳನ್ನು ದಾಸ್ತಾನಿಗೆ ಸ್ವೀಕರಿಸುವ, ಫಲಾನುಭವಿಗಳಿಗೆ ವಿತರಿಸುವ ಪ್ರಕ್ರಿಯೆ ಇದರಡಿ ನಡೆಯಲಿದೆ. ಏ. 1ರಿಂದಲೇ ಅನುಷ್ಠಾನಗೊಳಿಸುವಂತೆ ಕೃಷಿ ಆಯುಕ್ತರ ಆದೇಶದಲ್ಲಿ ಸೂಚನೆ ನೀಡಲಾಗಿದ್ದು, ಈಗಾಗಲೇ ಮೈಸೂರು, ಮಂಡ್ಯ ಸೇರಿ 6 ಜಿಲ್ಲೆಗಳಲ್ಲಿ ಆರಂಭವಾಗಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಬಾರ್​ಕೋಡ್ ಯಂತ್ರಗಳನ್ನು ಅಳವಡಿಸಿ ಜಾರಿಗೆ ತರಲಾಗುತ್ತಿದೆ. ಸರಬರಾಜು ದಾರರಿಂದ ರೈತ ಸಂಪರ್ಕ ಕೇಂದ್ರಗಳಿಗೆ ಬರುವ ಕೃಷಿ ಪರಿಕರಗಳನ್ನು ಬಾರ್​ಕೋಡ್ ವ್ಯವಸ್ಥೆಯಡಿ ಸ್ವೀಕರಿಸಲಾಗುತ್ತದೆ.

ಅವುಗಳ ಉತ್ಪಾದನೆಯಾಗಿರುವುದು ಎಲ್ಲಿ, ಎಷ್ಟು ಪ್ರಮಾಣದಲ್ಲಿ ಬಂದಿದೆ, ಅವುಗಳ ಗುಣಮಟ್ಟ ಇತ್ಯಾದಿ ಎಲ್ಲ ಅಂಶಗಳ ಮಾಹಿತಿಯೂ ಅದರಲ್ಲಿ ಅಡಕವಾಗಿರುತ್ತದೆ. ಬಿತ್ತನೆ ಬೀಜ ಇತ್ಯಾದಿ ಪರಿಕರಗಳನ್ನು ಪಡೆಯಲು ಫಲಾನುಭವಿಗಳು ರೈತ ಸಂಪರ್ಕ ಕೇಂದ್ರಕ್ಕೆ ಬಂದಾಗಲೂ ಬಾರ್​ಕೋಡ್ ಮೂಲಕವೇ ವ್ಯವಹರಿಸಲಾಗುವುದು.

ಬಾರ್​ಕೋಡ್ ತಂತ್ರಜ್ಞಾನ ಬಳಕೆಯಿಂದ ಕೃಷಿ ಪರಿಕರಗಳ ವಿತರಣೆಯಲ್ಲಿ ಪಾರದರ್ಶಕತೆ ಬರಲಿದೆ. ಈ ವ್ಯವಸ್ಥೆಯ ನಿರ್ವಹಣೆ, ಉಪಯೋಗದ ಬಗ್ಗೆ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. | ಡಿ.ಎಂ. ಶ್ರೀಧರಮೂರ್ತಿ, ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ

ಅನುಕೂಲ ಹೇಗೆ?

ಈಗ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್ ನೋಡಿ ರೈತರಿಗೆ ಪರಿಕರಗಳನ್ನು ನೀಡುವ ವ್ಯವಸ್ಥೆ ಇದೆ. ಇನ್ನುಮುಂದೆ ಆ ದಾಖಲಾತಿಗಳನ್ನು ತರುವ ಅಗತ್ಯ ಇರುವುದಿಲ್ಲ. ಪ್ರತಿಯೊಬ್ಬ ರೈತನಿಗೂ ಇಲಾಖೆಯಿಂದ ನೀಡಿರುವ ಗುರುತಿನ ಸಂಖ್ಯೆಯನ್ನು (ಎಫ್​ಐಡಿ) ತಂದರೆ ಸಾಕು. ಅದರ ಮೂಲಕವೇ ಆತನ ಎಲ್ಲ ವಿವರಗಳೂ ಲಭ್ಯವಾಗುತ್ತವೆ. ಬಾರ್​ಕೋಡ್ ವ್ಯವಸ್ಥೆಯಿಂದಾಗಿ ಎಲ್ಲ ಮಾಹಿತಿ ಬೆರಳ ತುದಿಯಲ್ಲೇ ಸಿಗುವುದರಿಂದ ಅನುಷ್ಠಾನ ಹಂತದಲ್ಲಿ ಅನುಕೂಲವಾಗಲಿದೆ. ಯಾವ ಜಿಲ್ಲೆಯಲ್ಲಿ ಯಾವ ಪರಿಕರಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿಯಲಿದೆ. ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಒಂದೇ ಕಡೆ ಕಂಡುಬಂದರೆ ಅವುಗಳನ್ನು ಬೇರೆ ಜಿಲ್ಲೆಗಳಿಗೆ ಕಳಿಸಿಕೊಡಲು ಸಹಾಯಕವಾಗುತ್ತದೆ. ರಾಜ್ಯಮಟ್ಟದಲ್ಲಿ ಅಧಿಕಾರಿಗಳು ಈ ವ್ಯವಸ್ಥೆಯನ್ನು ಅವಲೋಕಿಸಿ ಕಾಲಕಾಲಕ್ಕೆ ಅಧೀನ ಸಿಬ್ಬಂದಿಗೆ ಸೂಚನೆ ನೀಡಲು ಸಾಧ್ಯವಾಗುತ್ತದೆ. ಕೃಷಿ ಪರಿಕರಗಳ ಲಭ್ಯತೆಯ ಬಗ್ಗೆ ನಿಖರ ಮಾಹಿತಿ ದೊರೆಯುವ ಜತೆಗೆ ಎಲ್ಲೆಲ್ಲಿ ಏನು ಸಮಸ್ಯೆಯಿದೆ ಎನ್ನುವುದೂ ತಿಳಿಯಲಿದೆ. ಸಮಯದ ಉಳಿತಾಯವೂ ಆಗಲಿದೆ. ಇದುವರೆಗೆ ಇದ್ದ ವ್ಯವಸ್ಥೆಯಲ್ಲಿ ರೈತರ ಯಾದಿ, ಲೆಕ್ಕಪತ್ರ, ಹಣಕಾಸು ವಿವರಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಆ ಹಳೆಯ ಪದ್ಧತಿ ಇನ್ನುಮುಂದೆ ಕೊನೆಯಾಗಲಿದ್ದು ತಂತ್ರಜ್ಞಾನದ ನೆರವಿನಿಂದ ನಿರ್ವಹಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net