

ಬಡಜನರ ಸಂಕಷ್ಟಕ್ಕೆ ಮಿಡಿಯುವ ಹೃದಯ ಶ್ರೀಮಂತಿಕೆಯುಳ್ಳ ಶಾಂತ ಕೃಷ್ಣಮೂರ್ತಿ, ರಾಮಮೂರ್ತಿನಗರದ ಭಾಗದಲ್ಲಿ ಬಡವರ ಬಂಧು ಆಗಿ ಗಮನಸೆಳೆದಿದ್ದಾರೆ. ಕೆ.ಆರ್. ಪುರ ಮತಕ್ಷೇತ್ರದ ಕಲ್ಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭರಪೂರ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ಇವರು, ಬಡ ಮಹಿಳೆಯರ ಪಾಲಿಗೆ ಆಪ್ತಸಖಿ ಎನಿಸಿದ್ದಾರೆ. 2016ರಲ್ಲಿ ಸ್ಥಾಪಿಸಿದ ಶಾಂತ ಕೃಷ್ಣಮೂರ್ತಿ ಫೌಂಡೇಷನ್ (ಎಸ್ಕೆಎಫ್) ಮೂಲಕ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತ ಬಂದಿದ್ದಾರೆ. ವರ್ಷದುದ್ದಕ್ಕೂ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ವಿವಿಧ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಎಲ್ಲ ವರ್ಗಗಳ ಜನರ ಏಳಿಗೆಗೆ ಟೊಂಕ ಕಟ್ಟಿದ್ದಾರೆ. ಕೋವಿಡ್ ಸಾಂಕ್ರಾಮಿಕದ ವೇಳೆ ಎಸ್ಕೆಎಫ್ ಮೂಲಕ ಕೈಗೊಂಡ ಸೇವಾ ಕಾರ್ಯದಿಂದ ಇವರಿಗೆ ಕರೊನಾ ವಾರಿಯರ್ ಪ್ರಶಸ್ತಿ ಸಂದಿದೆ. ಇದೀಗ ಇವರ ಸಮಾಜಸೇವೆಯನ್ನು ಗುರುತಿಸಿ ‘ವಿಜಯವಾಣಿ’ 2024ನೇ ಸಾಲಿನ ‘ಬೆಂಗಳೂರು ರತ್ನ ಪ್ರಶಸ್ತಿ’ ನೀಡಿ ಗೌರವಿಸಿದೆ.
ಬೆಂಗಳೂರು: ಮಾತು ಬೆಳ್ಳಿ ಮೌನ ಬಂಗಾರ- ಈ ಪ್ರಸಿದ್ಧ ನಾಣ್ನುಡಿಯಂತೆ ಸದ್ದಿಲ್ಲದೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಶಾಂತ ಕೃಷ್ಣಮೂರ್ತಿ ಅವರು, ಬಡಜನರ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸದಾ ಹಸನ್ಮುಖಿಯಾಗಿದ್ದುಕೊಂಡೇ ಜನರ ಕಷ್ಟಕ್ಕೆ ಸ್ಪಂದಿಸುವ ವಿಶಾಲ ಗುಣದಿಂದಾಗಿ ರಾಮಮೂರ್ತಿನಗರ ವ್ಯಾಪ್ತಿಯಲ್ಲಿ ಜನಾನುರಾಗಿ ಮಹಿಳಾ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ‘ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಬೇಕು. ಸಮಾಜಕ್ಕೆ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಬೇಕು’ ಎಂಬ ತಮ್ಮ ಮನೆತನದ ಹಿರಿಯರ ಧ್ಯೇಯವನ್ನೇ ಸಮಾಜಸೇವೆಯಲ್ಲಿ ಅಕ್ಷರಶಃ ಪಾಲಿಸುತ್ತ ಬಂದಿರುವ ಇವರು, ಬಡವರ ಬಂಧುವೂ ಹೌದು. ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಬಡ ಹೆಣ್ಣುಮಕ್ಕಳ ಸ್ವಾವಲಂಬಿ ಜೀವನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ತನ್ನ ಮನೆಯ ಸದಸ್ಯರಂತೆ ಇತರ ಸ್ತ್ರೀಯರನ್ನು ಕಾಣುವ ಇವರ ವಿಶಾಲ ಮನೋಭಾವವು ಸಮಾಜಸೇವೆಯಲ್ಲಿ ಮುಂಚೂಣಿಗೆ ಬರಲು ಕಾರಣವಾಗಿದೆ. ನೆರವು ಪಡೆದವರ ಬಾಯಲ್ಲಿ ಶಾಂತಕ್ಕ ಎಂದೇ ಚಿರಪರಿಚಿತರಾಗಿರುವ ಇವರು, ಕಲ್ಕೆರೆಯ ಎನ್ಆರ್ಐ ಬಡಾವಣೆಯಲ್ಲಿ ‘ಶಾಂತ ಕೃಷ್ಣಮೂರ್ತಿ ಫೌಂಡೇಶನ್’ (ಎಸ್ಕೆಎಫ್) ಮೂಲಕ ದೊಡ್ಡ ಮಟ್ಟದಲ್ಲಿ ಸಮಾಜಮುಖಿ ಕೆಲಸಗಳಲ್ಲಿ ನಿರತರಾಗಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು: ಎಸ್ಕೆಎಫ್ ಮೂಲಕ ಶಾಂತ ಕೃಷ್ಣಮೂರ್ತಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಒಬ್ಬ ಮಹಿಳೆಯ ನೋವು ಇನ್ನೊಬ್ಬ ಮಹಿಳೆಗೆ ಮಾತ್ರ ಅರ್ಥವಾಗುತ್ತದೆ ಎಂಬ ಮಾತಿನಂತೆ ಸ್ತ್ರೀಯರ ಸಮಸ್ಯೆಗಳಿಗೆ ಕಿವಿಯಾಗಿ ಅವುಗಳನ್ನು ಪರಿಹರಿಸಲು ಸದಾ ಮುಂದಿರುತ್ತಾರೆ. ಕಲ್ಕೆರೆ, ರಾಮಮೂರ್ತಿನಗರ ಭಾಗದಲ್ಲಿರುವ ಹೆಚ್ಚಿನ ಮಹಿಳೆಯರು ಬಡ ವರ್ಗಕ್ಕೆ ಸೇರಿದ್ದಾರೆ. ಇವರಿಗೆ ಸರ್ಕಾರದಿಂದ ಸಿಗಬೇಕಿರುವ ಸವಲತ್ತುಗಳನ್ನು ಕೊಡಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಈ ಮಾಹಿತಿಯನ್ನು ಕಲೆಹಾಕಿದ ಶಾಂತ ಕೃಷ್ಣಮೂರ್ತಿ ತಮ್ಮ ಪ್ರತಿಷ್ಠಾನದಿಂದಲೇ ಏಕೆ ಮಹಿಳೆಯರ ನೆರವಿಗೆ ನಿಲ್ಲಬಾರದು ಎಂದು ಯೋಚಿಸಿ, ಅದರಂತೆ ನೆರವು ನೀಡಲು ಮುಂದಡಿ ಇಟ್ಟರು. ಇದರ ಪರಿಣಾಮ ಆ ಭಾಗದಲ್ಲಿ ನೆರವು ಪಡೆದ ಬಡ ವರ್ಗದ ಸ್ತ್ರೀಯರಲ್ಲಿ ಜಾಗೃತಿ ಉಂಟಾಗಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕಲು ಸಾಧ್ಯವಾಯಿತು.
ಮೊದಲಿಗೆ ಮಹಿಳಾ ಸಹಕಾರ ಸಂಘ ಸ್ಥಾಪಿಸಿ 1,000 ಮಂದಿಯನ್ನು ಸದಸ್ಯರನ್ನಾಗಿ ಮಾಡಲಾಯಿತು. ಇವರಲ್ಲಿ ಅಗತ್ಯವಿರುವ 500 ಮಹಿಳೆಯರಿಗೆ ಸಾಲಸೌಲಭ್ಯ ಒದಗಿಸಿದರು. ಇದರಿಂದ ಆ ಮಹಿಳೆಯರಲ್ಲಿ ಶಾಂತ ಕೃಷ್ಣಮೂರ್ತಿ ಅವರ ಬಗ್ಗೆ ನಂಬಿಕೆ ಮೂಡಲಾರಂಭಿಸಿತು. ಆ ಮಹಿಳೆಯರೇ ಸ್ವತಃ ಧಾವಿಸಿಬಂದು ತಮಗೆ ಕೆಲ ಕಲಿಕಾ ಕೋರ್ಸ್ ಆರಂಭಿಸಲು ಮನವಿ ಸಲ್ಲಿಸಿದರು. ಇದರನ್ವಯ ಟೇಲರಿಂಗ್ ಕೋರ್ಸ್, ಬ್ಯೂಟಿಷಿಯನ್ ಕೋರ್ಸ್ ಆರಂಭಿಸಿದರು. ಕೆಲವೇ ತಿಂಗಳಲ್ಲಿ ನುರಿತ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಕೊಡಿಸಿದರು. ಅಶಕ್ತ ಅಬಲೆಯರಿಗೆ ಕಾನೂನು ನೆರವು ಹಾಗೂ ಸುರಕ್ಷತೆಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ತರುವಾಯ ವಿದ್ಯಾವಂತ ಹೆಣ್ಣುಮಕ್ಕಳಿಗೆ ಟ್ಯಾಲಿ ತರಬೇತಿ ಕೋರ್ಸ್ ಹಾಗೂ ಕಂಪ್ಯೂಟರ್ ತರಗತಿಗಳನ್ನು ಉಚಿತವಾಗಿ ಆರಂಭಿಸಿದರು. ಇದು ಕೂಡ ಫಲ ನೀಡಿದ್ದರಿಂದ ಇಡೀ ರಾಮಮೂರ್ತಿನಗರ ವಾರ್ಡ್ ಎಲ್ಲೆಡೆ ಶಾಂತ ಕೃಷ್ಣಮೂರ್ತಿ ಅವರ ಸಾಧನೆ ಸದ್ದಿಲ್ಲದೆ ಮನೆಮಾತಾಯಿತು.
ಕೋವಿಡ್ ವೇಳೆ ವ್ಯಾಪಕ ಸೇವಾ ಕಾರ್ಯ: ಕೋವಿಡ್ ಸಾಂಕ್ರಾಮಿಕದ ವೇಳೆ ಶಾಂತ ಕೃಷ್ಣಮೂರ್ತಿ ಅವರು ಎಸ್ಕೆಎಫ್ ಪ್ರತಿಷ್ಠಾನದಿಂದ ದೊಡ್ಡ ಮಟ್ಟದಲ್ಲಿ ಸೇವಾ ಕಾರ್ಯ ನಡೆಸಿ ಜನರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಅವರೇ ತಿಳಿಸುವಂತೆ ಸೋಂಕು ಎದುರಿಸಲು ಜನ ಈ ಪರಿ ಕಷ್ಟ ಪಟ್ಟಿದ್ದನ್ನು ನನ್ನ ಜೀವಮಾನದಲ್ಲೇ ನೋಡಿರಲಿಲ್ಲ. ಮೊದಲ ಅಲೆ ಬಂದಾಗ ಜನ ಅಕ್ಷರಶಃ ಹೆದರಿದ್ದರು. ಇದು ಅರಿವಿಗೆ ಬರುತ್ತಿದ್ದಂತೆ ಪ್ರತಿಷ್ಠಾನದಿಂದ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಮುಂದಾದೆ.
ವಾರ್ಡ್ನೆಲ್ಲೆಡೆ ಸ್ಯಾನಿಟೈಸೇಶನ್ ಮಾಡಿಸಲಾಯಿತು. ಪ್ರತಿ ಮನೆಗೆ ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಕಾರ್ವಿುಕರು, ಅಸಂಘಟಿತ ಜನರಿಗೆ ಆಹಾರ ವಿತರಿಸಿ, ಅವರಲ್ಲಿ ಧೈರ್ಯ ತುಂಬಲಾಯಿತು. ಲಸಿಕೆ ಸಿಗದಿದ್ದಾಗ ಆರೋಗ್ಯ ಇಲಾಖೆಯವರನ್ನು ಸಂರ್ಪಸಿ ಜನರಿಗೆ ಉಚಿತವಾಗಿ ಲಸಿಕೆ ವಿತರಿಸಲಾಯಿತು. ಆಕ್ಸಿಜನ್ ಸಿಲಿಂಡರ್ ಸಿಗದಿದ್ದಾಗ ಸ್ವಂತವಾಗಿಯೇ ‘ವೀಲ್ಸ್ ಆನ್ ಆಕ್ಸಿಜನ್’ ವಾಹನ ಸಿದ್ಧಪಡಿಸಿ ಜನರ ನೆರವಿಗೆ ಧಾವಿಸಿದೆವು. ಆಂಬುಲೆನ್ಸ್ ವಾಹನಗಳನ್ನು ಜನರಿಗೆ ಒದಗಿಸಲಾಯಿತು. ಕರೊನಾ ಯೋಧರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಿ ಅವರನ್ನು ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಹುರಿದುಂಬಿಸಲಾಯಿತು. ಆ ಸಮಯದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಗೆ ನೆರವು ನೀಡಿದ ಸಾರ್ಥಕತೆ ಇದೆ ಎನ್ನುತ್ತಾರೆ ಶಾಂತ ಕೃಷ್ಣಮೂರ್ತಿ.
ಉಚಿತ ಕುಡಿಯುವ ನೀರು ಪೂರೈಕೆ: ರಾಮಮೂರ್ತಿನಗರ ವ್ಯಾಪ್ತಿಯಲ್ಲಿ ಹಿಂದಿನಿಂದಲೂ ನೀರಿನ ಸಮಸ್ಯೆ ಕಾಡುತ್ತಿತ್ತು. ಇದರಿಂದ ಸ್ಥಳೀಯರು ಸಮಸ್ಯೆಗೆ ಒಳಗಾಗುತ್ತಿದ್ದನ್ನು ಕಂಡು, ಶಾಂತ ಕೃಷ್ಣಮೂರ್ತಿ ಕುಟುಂಬವು 2015ರಿಂದ ನಾಗರಿಕರಿಗೆ ಉಚಿತವಾಗಿ ಕುಡಿಯುವ ನೀರು ಪೂರೈಸುತ್ತಿದ್ದಾರೆ. ಪ್ರಸ್ತುತ ನಗರವನ್ನು ಕಾಡುತ್ತಿರುವ ನೀರಿನ ಸಮಸ್ಯೆ ವೇಳೆಯೂ ಎಸ್ಕೆಎಫ್ ಪ್ರತಿಷ್ಠಾನದ ಮೂಲಕ ನಿತ್ಯವೂ ಸಾರ್ವಜನಿಕರಿಗೆ ಉಚಿತವಾಗಿ ನೀರು ಸರಬರಾಜು ಮಾಡು ತ್ತಿರುವುದು ಬಡ ಹಾಗೂ ಮಧ್ಯಮ ವರ್ಗದ ಜನರು ನಿರಾಳತೆ ಹೊಂದಲು ಸಾಧ್ಯವಾಗಿದೆ.
ಬಡವರ ಪಾಲಿನ ‘ಆಪದ್ಬಾಂಧವ’: ಶಾಂತ ಕೃಷ್ಣಮೂರ್ತಿ ಫೌಂಡೇಶನ್ ಲಾಭರಹಿತ ಸೇವಾ ಸಂಸ್ಥೆಯಾಗಿ ಜನ ಸೇವೆಯಲ್ಲಿ ನಿರತವಾಗಿದೆ. ಕಲ್ಕೆರೆಯ ಎನ್ಆರ್ಐ ಬಡಾವಣೆಯಲ್ಲಿ ಕಚೇರಿ ಹೊಂದಿದ್ದು, ರಾಮಮೂರ್ತಿನಗರ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ತನ್ನ ಸಾಮಾಜಿಕ ಕಾರ್ಯದ ಮೂಲಕ ಅಲ್ಲಿನ ಜನರ ಪುರೋಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದೆ. ಶಾಂತ ಕೃಷ್ಣಮೂರ್ತಿ ದಂಪತಿ 2016ರವರೆಗೂ ‘ಪುಣ್ಯಭೂಮಿ ಸೇವಾ ಟ್ರಸ್ಟ್’ ಮೂಲಕ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದರು. ಆ ಬಳಿಕ ಎಸ್ಕೆಎಫ್ ಪ್ರತಿಷ್ಠಾನವಾಗಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸಮಾಜಸೇವೆ ಮಾಡುತ್ತ ಬಂದಿದೆ. ಬೇಡಿದ್ದನ್ನು ಕೊಡುವ ಕಾಮಧೇನುವಿನಂತೆ ಎಸ್ಕೆಎಫ್ ಇಲ್ಲಿನ ಜನರ ಆಪ್ತಮಿತ್ರನಾಗಿ ಕಾರ್ಯಾಚರಿಸುತ್ತಿದೆ. ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಕನ್ನಡ ಜಾಗೃತಿ, ಪರಿಸರ ಜಾಗೃತಿ, ಕ್ರೀಡಾ ಚಟುವಟಿಕೆ, ಶಾಲಾಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ, ಬಡ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸುವಿಕೆ, ಸ್ಕಾಲರ್ಶಿಪ್ ನೀಡುತ್ತ ಬಂದಿದೆ. ವೃದ್ಧರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಸಹಿತ ಕನ್ನಡಕಗಳ ವಿತರಣೆ ಹಾಗೂ ವಿವಿಧ ಕಾಯಿಲೆಗಳಿಗೆ ಔಷಧವನ್ನು ಪೂರೈಸುತ್ತಿದೆ. ವರ್ಷಪೂರ್ತಿ ಒಂದಿಲ್ಲೊಂದು ಕೆಲಸವನ್ನು ಮಾಡುತ್ತ ಬಂದಿರುವ ಎಸ್ಕೆಎಫ್ ಇಲ್ಲಿನ ಜನರ ಆಪದ್ಬಾಂಧವ ಎನಿಸಿಕೊಂಡಿದೆ.
ಅಂಗನವಾಡಿ ಕೇಂದ್ರ ನಿರ್ವಣ: ಕನಕನಗರ ಗ್ರಾಮದ ಮಕ್ಕಳಿಗೆ ಅಂಗನವಾಡಿ ಕೇಂದ್ರ ಇಲ್ಲದಿರುವುದನ್ನು ಗಮನಿಸಿದ ಶಾಂತ ಕೃಷ್ಣಮೂರ್ತಿ ಅವರು ತಮ್ಮ ಎಸ್ಕೆಎಫ್ ಪ್ರತಿಷ್ಠಾನದ ಮೂಲಕ ಹೊಸ ಕಟ್ಟಡವನ್ನು ನಿರ್ವಿುಸಿಕೊಟ್ಟರು. ಈ ಕೇಂದ್ರದಲ್ಲೀಗ 50ಕ್ಕೂ ಹೆಚ್ಚು ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ.
ನನ್ನ ಯಶಸ್ಸಿನಲ್ಲಿ ಪತಿಯ ಪಾಲು ಹೆಚ್ಚು: ಮದುವೆಯಾದ ಬಳಿಕ ಸಂಸಾರ ತೂಗಿಸುವ ಜತೆಗೆ ಬಿಜಿನೆಸ್ ಮಾಡಲು ಮನೆಯವರ ಸಹಕಾರ ಸಿಕ್ಕಿತು. ಪತಿ-ಮಕ್ಕಳು ಸಹಿತ ಎಲ್ಲರೂ ನನ್ನ ಕೆಲಸಕ್ಕೆ ಪ್ರೋತ್ಸಾಹ ನೀಡಿದರು. ಪ್ರತಿಷ್ಠಾನದ ಮೂಲಕ ವಿವಿಧ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ರೂಪುರೇಷೆ ಸಿದ್ಧಪಡಿಸುತ್ತಿದ್ದಂತೆ ಅದನ್ನು ಕಾರ್ಯರೂಪಕ್ಕೆ ತರಲು ತಕ್ಷಣವೇ ನೆರವು ಸಿಗುತ್ತಿತ್ತು. ಇದು ಜನರಿಗೆ ಸಕಾಲದಲ್ಲಿ ಸಹಾಯ ಮಾಡಲು ತುಂಬಾನೇ ಸಹಕಾರಿಯಾಯಿತು. ಈ ಎಲ್ಲ ಸೇವಾ ಕಾರ್ಯದ ಯಶಸ್ಸಿನ ಹಿಂದೆ ನನ್ನ ಪತಿ ಕೃಷ್ಣಮೂರ್ತಿ ಪಾಲು ಸಾಕಷ್ಟಿದೆ ಎನ್ನುತ್ತಾರೆ ಶಾಂತ.
ಉದ್ಯೋಗ ಮೇಳ: ಕೋವಿಡ್ ಸಾಂಕ್ರಾಮಿಕ ಮುನ್ನ ರಾಮಮೂರ್ತಿನಗರ ವಾರ್ಡ್ನಲ್ಲಿ ಮೊದಲ ಬಾರಿಗೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಯಿತು. ಅಂದಾಜು 8 ಸಾವಿರ ಮಂದಿ ಯುವಜನರು ಪಾಲ್ಗೊಂಡಿದ್ದರು. ಸುಮಾರು 120 ಕಂಪನಿಗಳು ಭಾಗಿಯಾಗಿ 5 ಸಾವಿರ ಉದ್ಯೋಗವನ್ನು ಒದಗಿಸಿದವು. ಇದರಿಂದ ಆ ಭಾಗದಲ್ಲಿ ಸ್ವಲ್ಪಮಟ್ಟಿಗೆ ನಿರುದ್ಯೋಗ ಸಮಸ್ಯೆ ನೀಗಿತು.
ಗಿಡ ನೆಡುವಿಕೆ: ರಾಮಮೂರ್ತಿನಗರ ವಾರ್ಡ್ನಲ್ಲಿರುವ ಕೆರೆ ಹಾಗೂ ಸರ್ಕಾರಿ ಜಾಗದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಎಸ್ಕೆಎಫ್ ಪ್ರತಿಷ್ಠಾನ ಒತ್ತು ನೀಡಿದೆ. ಜತೆಗೆ ಈ ಪ್ರತಿಷ್ಠಾನವು ಮಾರಸಂದ್ರ ಅರಣ್ಯ ಭಾಗಕ್ಕೆ ತೆರಳಿ ಅಲ್ಲಿನ 10 ಸಾವಿರ ಗಿಡಗಳನ್ನು ನೆಟ್ಟಿವೆ. ಮಳೆಗಾಲದಲ್ಲಿ ಸೀಡ್ ಬಾಲ್ ತಯಾರಿಸಿ ಅರಣ್ಯ ಇಲಾಖೆ ಸೂಚಿಸುವ ಪ್ರದೇಶದಲ್ಲಿ ವಿತರಿಸುವ ಕಾಯಕದಲ್ಲಿ ನಿರತವಾಗಿದೆ. ರೈತರ ಸಾವಯವ ಕೃಷಿ ಉತ್ಪನ್ನ ಮಾರಾಟ ಮೇಳ ಕೂಡ ಆಯೋಜಿಸಿ ರೈತರಿಗೆ ಸಹಾಯಹಸ್ತ ಚಾಚಲಾಗಿದೆ.
ದೇಶಭಕ್ತಿ ಉದ್ದೀಪನಕ್ಕೆ ಒತ್ತು: ಪ್ರತಿವರ್ಷ ಜ.26ರ ಗಣರಾಜ್ಯೋತ್ಸವ, ಆ.15ರಂದು ಸ್ವಾತಂತ್ರೊ್ಯೕತ್ಸವ ಹಾಗೂ ನ.1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ. ಜತೆಗೆ ಯೋಗ ದಿನವನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಯುವಜನರಲ್ಲದೆ ಸ್ಥಳೀಯರೆಲ್ಲರೂ ಜತೆಗೂಡಿ ನಾಡು- ನುಡಿ ಹಾಗೂ ದೇಶಭಕ್ತಿ ಉದ್ದೀಪಿಸುವ ಗೀತಗಾಯನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಉಚಿತ ಸಮವಸ್ತ್ರ ವಿತರಣೆ: ಎಸ್ಕೆಎಫ್ ಪ್ರತಿಷ್ಠಾನವು ಪ್ರತೀ ವರ್ಷ ಸರ್ಕಾರಿ ಶಾಲಾಮಕ್ಕಳಿಗೆ ಉಚಿತ ನೋಟ್ಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸುವ ಪದ್ಧತಿ ಹೊಂದಿದೆ. ಸುಮಾರು 1,000 ಮಕ್ಕಳಿಗೆ ಅನುಕೂಲವಾಗುತ್ತಿದೆ. ಕಲ್ಕರೆ ಹಾಗೂ ಕೊತ್ತನೂರು ಸರ್ಕಾರಿ ಶಾಲೆಗೆ ಬೇಕಿರುವ ಅಗತ್ಯ ಪರಿಕರಗಳನ್ನು ಒದಗಿಸಲಾಗಿದೆ.
ಸ್ವಚ್ಛ ಭಾರತ: ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಶಾಂತ ಕೃಷ್ಣಮೂರ್ತಿ ಅವರು ನಾಗರಿಕರ ಜತೆಗೂಡಿ ಸ್ವಚ್ಛತಾ ಕಾರ್ಯವನ್ನು ನಡೆಸುತ್ತ ಬಂದಿದ್ದಾರೆ. ಸರ್ಕಾರಿ ಆಸ್ಪತ್ರೆ, ಶಾಲೆ, ದೇವಸ್ಥಾನ, ಕೆರೆ-ಕಲ್ಯಾಣಿಗಳನ್ನು ಶುಚಿ ಮಾಡಿ ಜನಜಾಗೃತಿ ಮೂಡಿಸಲಾಗುತ್ತಿದೆ.
ಜನರಿಗೆ ಒಳಿತು ಮಾಡಬೇಕೆಂಬ ಉದ್ದೇಶದಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವೆ. ಈ ಸೇವೆಯಲ್ಲೇ ಧನ್ಯತಾಭಾವವನ್ನು ಪಡೆದಿರುವೆ. ನೈಜವಾಗಿ ಸೇವೆ ಮಾಡುವವರಿಗೆ ಪ್ರಶಸ್ತಿ ಅಗತ್ಯವಿಲ್ಲ. ಆದರೂ, ನಮ್ಮನ್ನು ಬೆನ್ನುತಟ್ಟಿ ಇನ್ನಷ್ಟು ಪ್ರೋತ್ಸಾಹ ಸಿಗುವಂತಿದ್ದರೆ ಪುರಸ್ಕಾರ ಸ್ವೀಕಾರ ಮಾಡಬಹುದು. ಈ ನಿಟ್ಟಿನಲ್ಲಿ ಕನ್ನಡಿಗರ ಧ್ವನಿಯಾಗಿರುವ ‘ವಿಜಯವಾಣಿ’ ದಿನಪತ್ರಿಕೆಯು ‘ಬೆಂಗಳೂರು ರತ್ನ ಪ್ರಶಸ್ತಿ’ಗೆ ನನ್ನನ್ನು ಆಯ್ಕೆ ಮಾಡಿರುವುದು ಖುಷಿ ಜತೆಗೆ ಇನ್ನಷ್ಟು ಜವಾಬ್ದಾರಿಯನ್ನು ಹೊರಿಸಿದಂತಾಗಿದೆ. ಆರೋಗ್ಯಕರ ಸಮಾಜ ನಿರ್ವಣವೇ ನಮ್ಮ ಪರಮಗುರಿ. ನನ್ನ ದೇಶ, ನನ್ನ ರಾಜ್ಯ, ಹಳ್ಳಿ, ಶಾಲೆ, ದೇಗುಲ, ನನ್ನ ಮನೆ ಎಂಬ ಭಾವನೆ ಮೂಡಿದರೆ ಸಮಾಜ ಸುಂದರವಾಗಿ ಕಾಣುವ ಜತೆಗೆ ಸ್ವಚ್ಛವೂ ಆಗಲು ಸಾಧ್ಯ.
| ಶಾಂತ ಕೃಷ್ಣಮೂರ್ತಿ
ಸದೃಢ ಸಮಾಜ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಈ ಗುರಿ ತಲುಪಲು ಸೇವೆಯ ಮಾರ್ಗವನ್ನು ಕಂಡುಕೊಂಡಿದ್ದೇವೆ. ಸೇವೆ ಪಡೆದುಕೊಂಡ ಜನ ಪ್ರತಿಷ್ಠಾನ ತೆರೆಯಲು ಸೂಚಿಸಿದ ಕಾರಣ ಎಸ್ಕೆಎಫ್ ಆರಂಭಿಸಲಾಯಿತು. ಇದರ ಮೂಲಕವೇ ಕಲ್ಕೆರೆ ಒಳಗೊಂಡಂತೆ ರಾಮಮೂರ್ತಿನಗರ ಸುತ್ತಮುತ್ತಲಿನ ಬಡಜನರಿಗೆ ವಿವಿಧ ರೀತಿಯ ನೆರವು ನೀಡುವ ಕಾರ್ಯ ಕೈಗೊಂಡಿದ್ದೇವೆ. ಈ ಕೆಲಸದಲ್ಲಿ ನನ್ನ ಪತ್ನಿ ತುಂಬಾ ಉತ್ಸುಕತೆ ತೋರಿದ ಕಾರಣ ಆಕೆಯ ಇಚ್ಛೆಯಂತೆ ವಿವಿಧ ಸಮಾಜಮುಖಿ ಕಾರ್ಯವನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ. ಬೆಂಗಳೂರಿನಂತಹ ನಗರದಲ್ಲಿ ಬದುಕು ಸಾಗಿಸಲು ಉದ್ಯೋಗ ಇರಬೇಕು. ಅದರಲ್ಲೂ ಸ್ಕಿಲ್ ಇರುವವರಿಗೆ ಮನ್ನಣೆ ಹೆಚ್ಚು. ಬಡಜನರಿಗೆ ಅವರ ಇಷ್ಟದ ವೃತ್ತಿಯಲ್ಲಿ ಕೌಶಲ ಒದಗಿಸಿ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿದ್ದೇವೆ. ನಮ್ಮ ಸೇವೆ ಪ್ರಾಮಾಣಿಕವಾಗಿದ್ದರೆ ಜನ ಖಂಡಿತ ಅಧಿಕಾರ ನೀಡುತ್ತಾರೆ ಎಂಬ ಅದಮ್ಯ ನಂಬಿಕೆ ನಮ್ಮದು.
| ಕೃಷ್ಣಮೂರ್ತಿ ಎಸ್ಕೆಎಫ್ ಮುಖ್ಯಸ್ಥ
ನಮ್ಮ ತಾಯಿಯವರ ಸಮಾಜಸೇವೆ ಗುರುತಿಸಿ ‘ವಿಜಯವಾಣಿ’ ಪತ್ರಿಕೆಯು ‘ಬೆಂಗಳೂರು ರತ್ನ ಪ್ರಶಸ್ತಿ’ ನೀಡಿ ಗೌರವಿಸಿರುವುದು ಹೆಚ್ಚು ಖುಷಿ ತಂದಿದೆ. ಎಸ್ಕೆಎಫ್ ಪ್ರತಿಷ್ಠಾನ ಮೂಲಕ ಜನರಿಗೆ ವಿವಿಧ ರೀತಿಯಲ್ಲಿ ನೆರವು ನೀಡಲಾಗುತ್ತಿದೆ. ಬಡವರಿಗೆ ಆರೋಗ್ಯ ಕ್ಯಾಂಪ್, ವಿದ್ಯಾರ್ಥಿಗಳಿಗೆ ನೋಟ್ಪುಸ್ತಕಸಹಿತ ಶೈಕ್ಷಣಿಕ ಕಿಟ್ ವಿತರಣೆ, ಉಚಿತವಾಗಿ ಕುಡಿಯುವ ನೀರು ಪೂರೈಕೆ, ಯುವಕರಿಗೆ ಉದ್ಯೋಗ ಮೇಳ ಆಯೋಜನೆ ಮಾಡುವಲ್ಲಿ ತಾಯಿಯವರು ಸದಾ ಮುಂದಿರುತ್ತಾರೆ. ಅವರ ಸಮಾಜಸೇವೆಗೆ ನಮ್ಮ ಬೆಂಬಲ ಸದಾ ಇರುತ್ತದೆ. ನಮ್ಮ ಕುಟುಂಬ ಜನಸೇವೆಗೆ ಮೊದಲ ಆದ್ಯತೆ ನೀಡಿದೆ. ಅಧಿಕಾರದ ಪವರ್ ಸಿಕ್ಕಲ್ಲಿ ಇನ್ನಷ್ಟು ಕೆಲಸ ಕೈಗೊಳ್ಳಲು ಸಾಧ್ಯ. ಕಲ್ಕೆರೆ, ರಾಮಮೂರ್ತಿನಗರ ಪ್ರದೇಶವನ್ನು ಮಾದರಿ ವಾರ್ಡ್ ಆಗಿ ಅಭಿವೃದ್ಧಿಪಡಿಸುವ ಇಚ್ಛೆ ನಮ್ಮ ಕುಟುಂಬದವರಲ್ಲಿದೆ.
| ಪೃಥ್ವಿ ಶಾಂತ ಕೃಷ್ಣಮೂರ್ತಿ ಪುತ್ರ
ನಮ್ಮ ಏರಿಯಾದಲ್ಲಿ ಶಾಂತ ಕೃಷ್ಣಮೂರ್ತಿ ಅವರು ಹೆಣ್ಣುಮಕ್ಕಳಿಗೆ ತುಂಬ ಸಹಾಯ ಮಾಡಿದ್ದಾರೆ. ಟೇಲರಿಂಗ್ ಕ್ಲಾಸ್, ಬ್ಯೂಟಿಷಿಯನ್ ಹಾಗೂ ಕಂಪ್ಯೂಟರ್ ತರಗತಿಗಳನ್ನು ಉಚಿತವಾಗಿ ನೀಡಿರುವ ಜತೆಗೆ ಹಲವು ಮಂದಿಗೆ ಸ್ವಯಂ ಉದ್ಯೋಗ ಕಲ್ಪಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ಬೋರ್ವೆಲ್ ಹಾಕಿಸಿ ನಮ್ಮ ಭಾಗದಲ್ಲಿ ನೀರಿನ ಕೊರತೆ ನೀಗಿಸಿದ್ದಾರೆ. ಸ್ಕೂಲ್ ಮಕ್ಕಳಿಗೆ ಬುಕ್ಸ್, ಬ್ಯಾಗ್, ಫೀ ಕೂಡ ಒದಗಿಸಿ ಬಡವರಿಗೆ ನೆರವಾಗಿದ್ದಾರೆ.
| ಅಖಿಲಾ ಕಲ್ಕೆರೆ
ಕೋವಿಡ್ ಸಮಯದಲ್ಲಿ ಲಸಿಕೆ ಪಡೆಯಲು ನಮಗೆ ಕಷ್ಟ ಆಗಿತ್ತು. ಆಗ ನೆರವಿಗೆ ಬಂದಿದ್ದು ಶಾಂತ ಅವರ ಪ್ರತಿಷ್ಠಾನ. ನಮ್ಮ ಏರಿಯಾದಲ್ಲಿ ಹೆಚ್ಚಿನ ಮಂದಿಗೆ ಉಚಿತ ಲಸಿಕೆ, ಫುಡ್ ಕಿಟ್ ನೀಡಿ ಜನರಿಗೆ ಸಹಾಯ ಮಾಡಿದರು. ಕೆಲಸ ಇಲ್ಲದೆ ಮನೆಯಲ್ಲಿದ್ದ ಕೂಲಿ ಕಾರ್ವಿುಕರಿಗೆ ತಿಂಗಳು ಪೂರ್ತಿ ಆಹಾರ ಒದಗಿಸಿದರು. ಹೆಣ್ಣುಮಕ್ಕಳಿಗೆ ಉಚಿತವಾಗಿ ಟೇಲರಿಂಗ್ ಕೋರ್ಸ್ ಒದಗಿಸಿದ್ದಾರೆ. ಮುಂದೆಯೂ ಅವರು ಸಮಾಜಮುಖಿ ಕೆಲಸ ಮಾಡಲೆಂದು ಹಾರೈಸುವೆ.
| ಶೇಕ್ ಅಬ್ದುಲ್ ಅಜೀಜ್ ಕೌದೇನಹಳ್ಳಿ ನಿವಾಸಿ, ಅದ್ಯಕ್ಷರು, ಮೆಕ್ಕಾ, ಮಸ್ಜಿದ್
ಶಾಂತ ಕೃಷ್ಣಮೂರ್ತಿ ಅವರು ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿ ಜನಾನುರಾಗಿಯಾಗಿದ್ದಾರೆ. ಯಾವುದೇ ವ್ಯಕ್ತಿ ನೆರವು ಕೋರಿದರೂ ತಕ್ಷಣವೇ ಸ್ಪಂದಿಸುವ ಗುಣ ಹೊಂದಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಮಾಡಿದ ಸೇವಾ ಕಾರ್ಯ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಲಸಿಕೆ, ಆಹಾರ ಕಿಟ್ ವಿತರಿಸಿ ಅವರ ಅಗತ್ಯತೆಯನ್ನು ಮನವರಿಕೆ ಮಾಡಿಕೊಂಡು ಕೆಲಸ ಮಾಡಿದ್ದಾರೆ. ಎರಡು ಟ್ರ್ಯಾಕ್ಟರ್ ಮೂಲಕ ಜನರಿಗೆ ಉಚಿತವಾಗಿ ಕುಡಿಯುವ ನೀರು ಪೂರೈಸುತ್ತಿರುವುದು ಬಡಜನರಿಗೆ ಹೆಚ್ಚಿನ ಉಪಯೋಗವಾಗಿದೆ.
| ಸಂಜನ ಪಾಟೀಲ್ ಎನ್ಆರ್ಐ ಲೇಔಟ್
ನಮ್ಮ ಬಡಾವಣೆಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಎಸ್ಕೆಎಫ್ ಪ್ರತಿಷ್ಠಾನವನ್ನು ಸಂರ್ಪಸಿದರೆ ಖಂಡಿತವಾಗಿಯೂ ಪರಿಹಾರ ಸಿಗುತ್ತದೆ. ಕೋವಿಡ್ ಸಮಯದಲ್ಲಿ ಶಾಂತಕ್ಕ ಹಾಗೂ ಕೃಷ್ಣಮೂರ್ತಿ ಅವರು ಲಸಿಕೆ ಕೊಡಿಸಿ ಆಹಾರದ ಕಿಟ್ಗಳನ್ನು ಮನೆಗಳಿಗೆ ತಲುಪಿಸಿ ನಮ್ಮಂತಹವರ ಆತಂಕವನ್ನು ದೂರ ಮಾಡಿದರು. ವರ್ಷದುದ್ದಕ್ಕೂ ಒಂದಿಲ್ಲೊಂದು ಕಾರ್ಯಕ್ರಮ ಮಾಡುವ ಇವರಿಗೆ ನಾವು ಸಾಥ್ ನೀಡಿದ್ದೇವೆ. ಇವರಿಬ್ಬರ ಸೇವಾ ಕಾರ್ಯ ಮೆಚ್ಚುವಂಥದ್ದು.
| ಸ್ವಾಮಿ ಎನ್ಆರ್ಐ ಲೇಔಟ್ ನಿವಾಸಿ