

ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಎನ್ನುವಷ್ಟರಲ್ಲಿ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಒಂದೆಡೆ ಪಕ್ಷದಿಂದ ಟಿಕೆಟ್ ಕೈತಪ್ಪಿದ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಯಾದರೂ ಸರಿ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದು ಮುಂದಾದರೆ, ಇನ್ನೂ ಕೆಲವರು ಅಖಾಡಕ್ಕೆ ಇಳಿಯುವುದೇ ಬೇಡ ಎಂದು ಬೇಸರದಿಂದ ಹೊರನಡೆದಿದ್ದು ಇದೆ. ಆದರೆ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವಿಗೆ ಟಿಕೆಟ್ ವಂಚಿತ ಮುಖಂಡ ಸಾಥ್ ನೀಡಿದ್ದಾರೆ.
ಗದ್ದಿಗೌಡರ ಜತೆ ಪ್ರಚಾರಕ್ಕೆ ಇಳಿದಿರುವ ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಚಿತ್ರದುರ್ಗ ಮೂಲದ ಡಾ. ಪ್ರಕಾಶ್ ಪರಪ್ಪ, ಕಳೆದ ಒಂದು ವರ್ಷದಿಂದ ಬಾಗಲಕೋಟೆಯಲ್ಲಿ ಮನೆ ಮಾಡಿ, ತಮ್ಮದೇ ಆದ ವಿಭಿನ್ನ ಪ್ರಚಾರಕ್ಕೆ ಇಳಿದಿದ್ದ ಮುಖಂಡರು. ಆದರೆ, ಟಿಕೆಟ್ ವಂಚಿತರಾದ ಬಳಿಕ ಹತಾಶೆಗೊಂಡಿದ್ದರು.
ಎಂಪಿ ಚಾಯ್, ಕಟೌಟ್ ಅಭಿಯಾನದ ಮೂಲಕ ಕ್ಷೇತ್ರದಾದ್ಯಂತ ಗಮನ ಸೆಳೆದಿದ್ದ ಡಾ.ಪ್ರಕಾಶ್ಗೆ ಟಿಕೆಟ್ ನೀಡದ ಬಿಜೆಪಿ ಹಾಲಿ ಸಂಸದ ಗದ್ದಿಗೌಡರನ್ನು ಲೋಕಸಭೆ ಚುನಾವಣೆಯ ಅಭ್ಯರ್ಥಿ ಎಂದು ಘೋಷಿಸಿತ್ತು. ಪಕ್ಷದ ನಿರ್ಧಾರಕ್ಕೆ ಮಣಿದು ಇದೀಗ ಗದ್ದಿಗೌಡರ ಪರ ಪ್ರಚಾರಕ್ಕೆ ಡಾ.ಪ್ರಕಾಶ್ ಸಜ್ಜಾಗಿದ್ದಾರೆ.
ಅಖಾಡ ರಂಗೇರಿದ ವೇಳೆಯೇ ಗದ್ದಿಗೌಡರಿಗೆ ಸಾಥ್ ನೀಡಿದ ಡಾ.ಪ್ರಕಾಶ್, ಗೌಡರ ಜತೆ ಸೇರಿ ಒಗ್ಗಟ್ಟಿನ ಮಂತ್ರ ಜಪ್ಪಿಸಿದ್ದಾರೆ. ಕಳೆದ ಒಂದು ವರ್ಷದಿಂದ ಬೂತ್ ಮಟ್ಟದಲ್ಲಿ ಛಾಪು ಮೂಡಿಸಿದ್ದ ಪರಪ್ಪ, ಟಿಕೆಟ್ ಕೈ ತಪ್ಪಿದ ಅಸಮಾಧಾನ ಬದಿಗೊತ್ತಿ ಗದ್ದಿಗೌಡರ್ಗೆ ಸಾಥ್ ನೀಡಿದ್ದಾರೆ. ಇದು ಅನೇಕರಿಗೆ ಆಶ್ಚರ್ಯ ತಂದೊಡ್ಡಿದೆ. ಇನ್ನು ಈ ಬಗ್ಗೆ ಗದ್ದಿಗೌಡರು ಕೆಲವು ವಿಷಯ ಹಂಚಿಕೊಂಡಿದ್ದಾರೆ.
"ನಾನು ಎಂದು ಕೂಡ ಅವರ ಪ್ರಯತ್ನಕ್ಕೆ ಅಡ್ಡಿ ಮಾಡಿರಲಿಲ್ಲ ಎಂದ ಗದ್ದಿಗೌಡರು, ನನಗೆ ನಿವೃತ್ತಿ ಆಗೋ ಮನಸ್ಸು ಇರೋದ್ರಿಂದ ನನ್ನನ್ನು ಭೇಟಿ ಮಾಡಿಯೇ ಪ್ರಚಾರ ಆರಂಭಿಸಿದರು. ಬಳಿಕ ನನಗೆ ಟಿಕೆಟ್ ಸಿಕ್ಕ ದಿನ ಶಾಲು ಹಾರ ಹಾಕಿ ಅವರೇ ಸನ್ಮಾನ ಮಾಡಿದರು. ನಿಮಗೆ ಭವಿಷ್ಯ ಒಳ್ಳೆಯದಿದೆ. ಸ್ವಚ್ಚ ಮನಸ್ಸಿನಿಂದ ಚುನಾವಣೆಯಲ್ಲಿ ಸಹಕಾರ ಮಾಡ್ತೀನಿ" ಅಂತ ಹೇಳಿದರು.