ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಆದೇಶದ ಕುರಿತು ಸಿಎಂ ಸ್ಪಷ್ಟನೆ

Siddaramaiah
Published on

ಬೆಂಗಳೂರು: ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ ಎಂದು ಸರ್ಕಾರ ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ಹಲವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಷಯ ವಿವಾದಾತ್ಮಕವಾಗಿ ಪರಿಣಮಿಸುತ್ತದೆ ಎಂಬ ಸುಳಿವು ಸಿಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆಯನ್ನು ನೀಡಿದ್ದಾರೆ.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದಲ್ಲಿ ಆಯುಧಪೂಜೆ ಸಂದರ್ಭದಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ಸಮಯದಲ್ಲಿ ಕಚೇರಿಗಳ ಒಳಗೆ ಮತ್ತು ಕಾರಿಡಾರ್‌ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ ಹಾನಿಕಾರಕ ಬಣ್ಣವು ನೆಲಹಾಸಿನ ಮೇಲೆ ಬಿದ್ದು, ಸುಮಾರು ತಿಂಗಳುಗಳ ಕಾಲ ಹಾಗೆಯೇ ಅಂಟಿಕೊಂಡು ಉಳಿಯುತ್ತದೆ.

ಇದರಿಂದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ನೆಲಹಾಸುಗಳ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಉಲ್ಲೇಖಿಸಲಾದ ಆದೇಶದಲ್ಲಿ, ಆಯುಧಪೂಜೆ ವೇಳೆ ಈ ಮೂರು ಕಟ್ಟಡಗಳ ಕಛೇರಿ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ/ಕುಂಕುಮ/ಅರಿಶಿನ/ಸುಣ್ಣ ಹಾಗೂ ಇನ್ನಿತರ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ ಸೂಚಿಸಲಾಗಿದೆ.

ಈ ಆದೇಶಕ್ಕೆ ನಕಾರಾತ್ಮಕ ಪ್ರತಿಕ್ರಿಯೆಯೇ ಹೆಚ್ಚು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಎಂ ಸ್ಪಷ್ಟನೆ ನೀಡಿದ್ದು, ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ ಎಂದಿದ್ದಾರೆ.

ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ ಎಂದಿರುವ ಅವರು ಕಳೆದ ವರ್ಷ ಬಿಜೆಪಿ ಸರ್ಕಾರವಿದ್ದಾಗ ದಸರಾ ಸಂದರ್ಭದಲ್ಲಿ ಹೊರಡಿಸಿದ್ದ ಇಂಥದ್ದೇ ಆದೇಶವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಜನತೆಯಲ್ಲಿ ಮನವಿ ಮಾಡುತ್ತೇನೆ ಎಂಬುದಾಗಿಯೂ ಕೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net