

Axiom-4 Mission: ಭಾರತೀಯ ಗಗನಯಾತ್ರಿ ಮತ್ತು ಗ್ರೂಪ್ ಕ್ಯಾಪ್ಟನ್ ಸುಭಾನ್ಶು ಶುಕ್ಲಾ ಸೇರಿದಂತೆ ನಾಲ್ವರು ಸದಸ್ಯರ ಸಿಬ್ಬಂದಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಮಿಷನ್‌ಗೆ ಕರೆದೊಯ್ಯುವ ಆಕ್ಸಿಯಮ್ -4 ಯಾನವನ್ನು ಇತ್ತೀಚೆಗಷ್ಟೇ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಇದೀಗ ಹೊಸ ದಿನಾಂಕವನ್ನು ಸುದೀರ್ಘ ಚರ್ಚೆ ಬಳಿಕ ಅಧಿಕೃತಗೊಳಿಸಲಾಗಿದ್ದು, ಇದೇ ಜೂನ್ 19ರಂದು ಉಡಾವಣೆಯಾಗಲಿದೆ ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನಕ್ಕೆ ಕಡೆಗೂ ಹೊಸ ದಿನಾಂಕವನ್ನು ಅಧಿಕೃತಪಡಿಸಿದ್ದು, ಜೂನ್ 19ರಂದು ಶುಭಾಂಶು ಶುಕ್ಲಾ ಅವರ ಆಕ್ಸಿಯಮ್ -4 ಮಿಷನ್ ಉಡಾವಣೆಯಾಗಲಿದೆ. ಆದಾಗ್ಯೂ, ಆರಂಭದಲ್ಲಿ ಉಡಾವಣೆಯನ್ನು ಮೇ.29ಕ್ಕೆ ನಿಗದಿಪಡಿಸಲಾಗಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಉಡಾವಣೆಯನ್ನು ಹಲವಾರು ಬಾರಿ ಮುಂದೂಡಲಾಯಿತು ಎಂದು ತಿಳಿದುಬಂದಿದೆ.
ಈ ಹಿಂದೆ ಬಾಹ್ಯಾಕಾಶ ಮಿಷನ್ ಅನ್ನು ಜೂನ್ 11ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಸ್ಪೇಸ್‌ಎಕ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಮಂಗಳವಾರ (ಜೂನ್ 10) ಸಂಜೆ 5:52ಕ್ಕೆ ನಡೆಯಬೇಕಿದ್ದ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಉಡಾವಣೆಯನ್ನು ಒಂದು ದಿನದ ಮಟ್ಟಿಗೆ ತಡೆ ಹಿಡಿಯಲಾಯಿತು. ಬುಧವಾರ ಭಾರತೀಯ ಕಾಲಮಾನ ಸಂಜೆ 5:30ಕ್ಕೆ ನಡೆಯಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಆಮ್ಲಜನಕ ಸೋರಿಕೆಯ ಹಿನ್ನಲೆ ಉಡಾವಣೆ ದಿನಾಂಕವನ್ನು ಮುಂದೂಡಲಾಗಿತ್ತು. ಆದರೆ, ಈಗ ಜೂ.19ರಂದು ಉಡಾವಣೆ ಮಾಡುವುದಾಗಿ ಅಧಿಕೃತ ಘೋಷಣೆ ಹೊರಬಿದ್ದಿದೆ.
ಅಸಲಿಗೆ ಮೇ.29ರಂದು ಕಾರ್ಯಾಚರಣೆಗಾಗಿ ಬಾಹ್ಯಾಕಾಶಕ್ಕೆ ಹೋಗಬೇಕಿದ್ದ ಆಕ್ಸಿಯಮ್-4 ಮಿಷನ್ ಅನ್ನು ಈ ತಿಂಗಳ 8ಕ್ಕೆ ನಿಗದಿಪಡಿಸಲಾಗಿತ್ತು. ಇದಾದ ಬಳಿಕ ಮತ್ತೆ 10ಕ್ಕೆ ಮುಂದೂಡಲಾಗಿತ್ತು. ಇದೆಲ್ಲದರ ನಂತರವೂ ಮೂರನೇ ಬಾರಿಗೆ ದಿನಾಂಕದಲ್ಲಿ ಬದಲಾವಣೆ ಮಾಡಿದ್ದು ಹಲವರ ಬೇಸರ, ಗೊಂದಲಕ್ಕೆ ಕಾರಣವಾಯಿತು. ಅಮೆರಿಕದ ಖಾಸಗಿ ಬಾಹ್ಯಾಕಾಶ ಕಂಪನಿ ‘ಆಕ್ಸಿಯಮ್ ಸ್ಪೇಸ್’ ನಡೆಸುತ್ತಿರುವ ಮಾನವಸಹಿತ ಬಾಹ್ಯಾಕಾಶ ಪ್ರಯೋಗ ‘AX-4’ ಕಾರ್ಯಾಚರಣೆಯ ಭಾಗವಾಗಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹೆಜ್ಜೆಯಿಡಲಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಈ ಸ್ಪೇಸ್ ಮಿಷನ್ ಮೂಲಕ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರವೇಶಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. 1984ರಲ್ಲಿ ರಷ್ಯಾದ ಸೋಯುಜ್ ರಾಕೆಟ್ ಬಳಸಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ರಾಕೇಶ್ ಶರ್ಮಾ ಎಂಬುದು ಗಮನಾರ್ಹ,(ಏಜೆನ್ಸೀಸ್).