

ಮಂಡ್ಯ: ಮಳವಳ್ಳಿ ತಾಲೂಕಿನ ಮಾರೇಹಳ್ಳಿ ಗ್ರಾಮದಲ್ಲಿ ಸರ್ಕಾರಿ ಓಣಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ತಾಲೂಕು ಆಡಳಿತ ಮೀನಾಮೇಷದ ನೀತಿ ಅನುಸರಿಸಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್ ಆರೋಪಿಸಿದರು.
ಮಾರೇಹಳ್ಳಿ ಗ್ರಾಮದ ಸರ್ವೇ ನಂ 688 ಹಾಗೂ 702ರ ಮಧ್ಯದ ಓಣಿ ರಸ್ತೆಯಿಂದ ಸರ್ವೇ ನಂ 683 ಹಾಗೂ 675ರ ಮಧ್ಯದವರಿನ ಸರ್ಕಾರಿ ಓಣಿ ರಸ್ತೆಯನ್ನು ತೆರವು ಮಾಡಲು ಮುಂದಾಗಿ ಕೆಲವೇ ಅಡಿಗಳಷ್ಟು ತೆರವು ಮಾಡಿ ನಿಲ್ಲಿಸಿ ನಿರ್ಲಕ್ಷೃ ವಹಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸರ್ವೆ ನಂ 702ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಸ್ಥಳ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಓಣಿ ರಸ್ತೆಯ ಅಕ್ಕಪಕ್ಕದ ಜಮೀನಿನವರು ಸೇರಿದಂತೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವುದರಿಂದ ಇತರೇ ಜಮೀನಿನವರಿಗೆ ವ್ಯವಸಾಯ ಮಾಡಲು, ಕೃಷಿ ಸಾಮಗ್ರಿಗಳನ್ನು ಸಾಗಿಸಲು ತೊಂದರೆಯಾಗಿದೆ ಎಂದು ಸಮಸ್ಯೆ ತಿಳಿಸಿದರು.
ರೈತರ ಒತ್ತಾಯದ ಮೇರೆಗೆ ಒತ್ತುವರಿ ತೆರವಿಗೆ ಮುಂದಾದ ತಾಲೂಕು ಆಡಳಿತ ಒತ್ತುವರಿದಾರರ ಕುಮ್ಮಕ್ಕಿಗೆ ಒಳಗಾಗಿ ತೆರವು ಕಾರ್ಯ ಸ್ಥಗಿತಗೊಳಿಸಿದೆ. ಈ ರಸ್ತೆಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ನೇರ ಸಂಪರ್ಕ ಒದಗಿಸಲಿದೆ. ಆದ್ದರಿಂದ ಜಿಲ್ಲಾಧಿಕಾರಿ, ಸರ್ವೇ ಅಧಿಕಾರಿಗಳು ತಕ್ಷಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಗ್ರಾಮದ ರಾಚೇಗೌಡ, ಸುಬ್ಬೇಗೌಡ, ಕಿರಣ್‌ಕುಮಾರ್, ಪ್ರವೀಣ್ ಇದ್ದರು.