ಕಮಲ್ 'ಥಗ್​ ಲೈಫ್'​ಗಿಲ್ಲ ಬೆಲೆ! 130 ಕೋಟಿ ರೂ. ಕೊಡಲು ರೆಡಿಯಿಲ್ಲ ನೆಟ್​ಫ್ಲಿಕ್ಸ್, ಮತ್ತೇ ಮಾತುಕತೆ | Thug Life

ವಿಜಯವಾಣಿ (25)
Published on

Thug Life: ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದು ಭಾಷೆ ಕುರಿತು ತಮಿಳು ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಅವರಿಗೆ ಮಾತ್ರವಲ್ಲದೇ ಅವರು ಅಭಿನಯದ ಚಿತ್ರಕ್ಕೂ ಭಾರೀ ಮುಖಭಂಗವನ್ನೇ ಉಂಟುಮಾಡಿದೆ. ಕನ್ನಡಿಗರಲ್ಲಿ ಕ್ಷಮೆ ಕೇಳುವುದಿಲ್ಲ ಎಂಬ ಸೊಕ್ಕಿನ ಮಾತುಗಳನ್ನಾಡಿದ ಕಮಲ್​ಗೆ ಕರ್ನಾಟಕ ಹೈಕೋರ್ಟ್​ ಕೂಡ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಛೀಮಾರಿ ಹಾಕಿತು. ಕನ್ನಡಿಗರ ವ್ಯಾಪಕ ಆಕ್ರೋಶಕ್ಕೆ ಬಗ್ಗದ ನಟನಿಗೆ ಸದ್ಯ ಸರಣಿ ಸೋಲು, ಮುಖಭಂಗ ಎದುರಾಗುತ್ತಿದೆ.

ರಿಲೀಸ್​ ಆಗಿ 8 ವಾರಗಳೂ ಕಳೆದಿಲ್ಲ

ತಮ್ಮ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಕೋರಿ ಕೋರ್ಟ್​ಗೆ ಕಮಲ್ ಸಲ್ಲಿಸಿದ್ದ ಅರ್ಜಿ ಜೂ.10ಕ್ಕೆ ಮುಂದೂಡಿಕೆ ಆದ ಕಾರಣ, 'ಥಗ್​ ಲೈಫ್'​ ಸಿನಿಮಾ ಕರ್ನಾಟದಲ್ಲಿ ಜೂ.5ಕ್ಕೆ ರಿಲೀಸ್ ಆಗಲಿಲ್ಲ. ಇದು ತಮಿಳು ನಟನ ಚಿತ್ರಕ್ಕೆ ದೊಡ್ಡ ಹೊಡೆತ ನೀಡಿದ್ದಲ್ಲದೇ ಬಾಕ್ಸ್ ಆಫೀಸ್​ ಸೋಲಿಗೆ ಒಂದು ಕಾರಣವಾಗಿ ಪರಿಣಮಿಸಿದೆ. ತೆರೆಕಂಡ ಮೊದಲ ದಿನವೇ ಸಿನಿಪ್ರೇಕ್ಷಕರಿಂದ ನೀರಸ ಹಾಗೂ ನೆಗೆಟಿವ್ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ ಥಗ್​ ಲೈಫ್​ ಸದ್ಯ ಸೋಲಿನ ಹಾದಿ ಹಿಡಿದಿರುವುದು ನಿಜಕ್ಕೂ ದುರಾದೃಷ್ಟಕರ.

ನಷ್ಟದಿಂದ ಒಟಿಟಿ ಕಡೆಗೆ...

ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಪ್ರೇಕ್ಷಕರಿಲ್ಲದೆ ಮುಖಭಂಗ ಅನುಭವಿಸುತ್ತಿರುವ ಥಗ್​ ಲೈಫ್​, ಇದೀಗ ಬಾಕ್ಸ್​ ಆಫೀಸ್​ನಲ್ಲಿ ಭಾರೀ ನಷ್ಟವನ್ನು ಎದುರಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಹೆಸರಾಂತ ಒಟಿಟಿ ಪ್ಲಾಟ್​ಫಾರ್ಮ್ ಮೊರೆ ಹೋಗಿರುವ ಚಿತ್ರತಂಡ, ತಮ್ಮ ಚಿತ್ರವನ್ನು ನೆಟ್​ಫ್ಲಿಕ್ಸ್​ಗೆ ಮಾರಾಟ ಮಾಡಲು ಮುಂದಾಗಿದೆ. ಇದಕ್ಕಾಗಿ ಮಾತುಕತೆ ಕೂಡ ನಡೆಸಿದೆ. ಆದರೆ, ಮೊದಲ ಹಂತದಲ್ಲಿ ಇದು ಪ್ರಯೋಜನವಾಗಿಲ್ಲ. ​

ಇತ್ತೀಚಿನ 'ಪಿಂಕ್‌ವಿಲ್ಲಾ' ವರದಿ ಪ್ರಕಾರ, 130 ಕೋಟಿ ರೂ.ಗೆ ಥಗ್​ ಲೈಫ್​ ಚಿತ್ರವನ್ನು ನೆಟ್‌ಫ್ಲಿಕ್ಸ್​ಗೆ ಕೊಡಲು ಚಿತ್ರ ತಯಾರಕರು ಮಾತುಕತೆ ನಡೆಸಿದ್ದರು. ಆದ್ರೆ, ಇದಕ್ಕೆ ಮೊದಲ ಹಂತದಲ್ಲಿ ಒಪ್ಪಿಗೆ ಸೂಚಿಸದ ಒಟಿಟಿ ಸಂಸ್ಥೆ, ಹಿಂದೆ ತಿಳಿಸಿದ್ದ ಮೊತ್ತಕ್ಕಿಂತ ಶೇ.20ರಿಂದ 25ರಷ್ಟು ಕಡಿತದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಮರುಪರಿಶೀಲನೆ ನಡೆಸಲಿದೆ ಎಂದು ಹೇಳಲಾಗಿದೆ. ಜೂನ್​ 5ರಂದು ರಿಲೀಸ್ ಆಗಿರುವ ಚಿತ್ರ 8 ವಾರಗಳು ಕಳೆದಿರಬೇಕು ಅಥವಾ ಕನಿಷ್ಠ 4 ವಾರಗಳು ಕಳೆದಿದ್ದರೆ ಒಟಿಟಿಗೆ ಲಗ್ಗೆಯಿಡಲು ಸಾಧ್ಯ. ಹೀಗಿರುವ ಪರಿಸ್ಥಿತಿಯಲ್ಲಿ ಮುಂದೇನು? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net