ಅಭಿಷೇಕ್​ಗಿಂತ ಮೊದಲೇ ಅವಿವಾ ಸಿನಿಮಾದಲ್ಲಿ ನಟಿಸಿದ್ದರು ಗೊತ್ತಾ?

Aviva Biddappa
Published on

ಬೆಂಗಳೂರು: 'ರೆಬೆಲ್ ಸ್ಟಾರ್​' ಅಂಬರೀಶ್​ ಅವರ ಮಗ ಅಭಿಷೇಕ್​ ಅಂಬರೀಶ್​ ಅವರ ನಿಶ್ಚಿತಾರ್ಥ ಇಂದು ಅವಿವಾ ಬಿದ್ದಪ್ಪ ಜತೆಗೆ ಆಗಿದೆ. ಮದುವೆ ಮತ್ತು ನಿಶ್ಚಿತಾರ್ಥದ ಬಗ್ಗೆ ಕೇಳಿದಾಗಲೆಲ್ಲ, ಅದೆಲ್ಲ ಸುಳ್ಳು, ನಂಗೇನೂ ಗೊತ್ತಿಲ್ಲ, ಇವೆಲ್ಲ ಮಾಧ್ಯಮದವರ ಸೃಷ್ಟಿ ... ಎಂದು ಹೇಳುತ್ತಲೇ ಅಭಿಷೇಕ್​, ಅವಿವಾ ಜತೆಗೆ ಎಂಗೇಜ್​ಮೆಂಟ್​ ಮುಗಿಸಿಕೊಂಡಿದ್ದಾರೆ. ಸದ್ಯದಲ್ಲೇ ಹಸೆಮಣೆಯನ್ನೂ ಏರಲಿದ್ದಾರೆ.

ಅಂದಹಾಗೆ, ಅವಿವಾ ಸಹ ಒಬ್ಬ ನಟಿ ಮತ್ತು ಅಭಿಷೇಕ್​ಗಿಂತ ಮೊದಲೇ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದರು ಎಂಬ ವಿಷಯ ಗೊತ್ತಾ? ಇದೇನು ಹೊಸ ವಿಷಯವೇನಲ್ಲ. ಎಂಟ್ಹತ್ತು ವರ್ಷಗಳಾಗಿರುವುದರಿಂದ ಮರೆತು ಹೋಗಿರಲಿಕ್ಕೆ ಸಾಕು.

ಅಂದಹಾಗೆ, 'ಅಲೆ' ಎಂಬ ಚಿತ್ರದಲ್ಲಿ ಅವಿವಾ ಬಿದ್ದಪ್ಪ ನಾಯಕಿಯಾಗಿ ನಟಿಸಿದ್ದರು. ತನುಷ್​ ಮತ್ತು ಹರ್ಷಿಕಾ ಪೂಣಾಚ್ಛ ನಾಯಕ-ನಾಯಕಿಯಾಗಿ ನಟಿಸಿದ್ದ ಈ ಚಿತ್ರದಲ್ಲಿ ಅವಿವಾ ದ್ವಿತೀಯ ನಾಯಕಿಯಾಗಿ ನಟಿಸಿದ್ದರು. ಮೊದಲು ಈ ಚಿತ್ರಕ್ಕೆ ಹರ್ಷಿಕಾ ಮಾತ್ರ ನಾಯಕಿಯಾಗಿದ್ದರು. ಆ ನಂತರ ಅವಿವಾ ಸಹ ಚಿತ್ರಕ್ಕೆ ದ್ವಿತೀಯ ನಾಯಕಿಯಾಗಿ ಸೇರ್ಪಡೆಯಾದಾಗ, ಹರ್ಷಿಕಾಗೆ ಬೇಸರವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆ ನಂತರ ವಿವಾದ ತಣ್ಣಗಾಗಿತ್ತು. ಈ ಚಿತ್ರ 2013ರಲ್ಲಿ ಬಿಡುಗಡೆಯಾಗಿ, ಅಷ್ಟು ಸುದ್ದಿಯಾಗದೇ ಮಾಯವಾಯಿತು. ಆ ನಂತರ ಅವಿವಾ ಯಾವುದೇ ಸಿನಿಮಾದಲ್ಲೂ ನಟಿಸಲಿಲ್ಲ.

ಇದಾಗಿ ಕೆಲವು ವರ್ಷಗಳ ನಂತರ ಅಭಿಷೇಕ್​, 'ಅಮರ್​' ಚಿತ್ರದ ಮೂಲಕ ಹೀರೋ ಆದರು. ನಂತರದ ದಿನಗಳಲ್ಲಿ ಅಭಿಷೇಕ್ ಮತ್ತು ಅವಿವಾ ನಡುವೆ ಪ್ರೇಮಾಂಕುರವಾಗಿ, ಎರಡೂ ಕುಟುಂಬವರು ಒಪ್ಪಿಗೆ ಪಡೆದು, ಇದೀಗ ಮದುವೆಯಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net