

ಹೈದರಾಬಾದ್: ತೆಲುಗು ನಟ ನಂದಮೂರಿ ಬಾಲಕೃಷ್ಣ ಸದ್ಯ 'ವೀರ ಸಿಂಹ ರೆಡ್ಡಿ' ಎಂಬ ಚಿತ್ರವನ್ನು ಮುಗಿಸಿ, ಆ ಚಿತ್ರದ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ಈ ಗ್ಯಾಪ್ನಲ್ಲಿ ಅವರು ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತವಾಗಿದೆ. ಅನಿಲ್ ರಾವಿಪುಡಿ ನಿರ್ದೇಶನದ ಈ ಹೊಸ ಚಿತ್ರಕ್ಕೆ ಸದ್ಯಕ್ಕೆ 'ಎನ್ಬಿಕೆ 108' ಎಂಬ ಹೆಸರಿಡಲಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕೃತ ಹೆಸರು ಘೋಷಣೆಯಾಗಲಿದೆ.
ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ನಡಿ ಸಾಹು ಗರಪಟಿ ಮತ್ತು ಹರೀಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.
'ಎನ್ಬಿಕೆ 108' ಚಿತ್ರದ ಚಿತ್ರೀಕರಣ ಒಂದು ಫೈಟ್ ದೃಶ್ಯದ ಚಿತ್ರೀಕರಣದಿಂದ ಆರಂಭವಾಗಿದ್ದು, ಖ್ಯಾತ ಸಾಹಸ ನಿರ್ದೇಶಕ ವಿ. ವೆಂಕಟ್ ಮಾಸ್ಟರ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಆಕ್ಷನ್ ಹಾಗೂ ಮಾಸ್ ಎಲಿಮೆಂಟ್ ಒಳಗೊಂಡ ಈ ಚಿತ್ರಕ್ಕೆ ಬಾಲಕೃಷ್ಣ ಅವರ ಮಾಸ್ ಇಮೇಜ್ ಮತ್ತು ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡೇ ಅನಿಲ್ ರವಿಪುಡಿ ಪವರ್ ಫುಲ್ ಕಥೆ ಹೆಣೆದಿದ್ದಾರೆ. ಚಿತ್ರಕ್ಕೆ ಎಸ್.ಎಸ್. ತಮನ್ ಸಂಗೀತ ಸಂಯೋಜಿಸುತ್ತಿದ್ದಾರೆ.