

ಬೆಂಗಳೂರು: ಕೊನೆಗೂ ಬಹಳ ದಿನಗಳಿಂದ ವಿವಾದಕ್ಕೊಳಗಾಗಿದ್ದ ನಟ ಅನಿರುದ್ಧ್ ಬ್ಯಾನ್ ಪ್ರಕರಣ ಸುಖಾಂತ್ಯ ಕಂಡಿದೆ. 'ಜೊತೆ ಜೊತೆಯಲಿ' ಧಾರಾವಾಹಿಯ ನಿರ್ಮಾಪಕ ಮತ್ತು ನಿರ್ದೇಶಕ ಆರೂರು ಜಗದೀಶ್ ಅವರ ನಡುವೆ ಪ್ರಕರಣ ಬಗೆಹರಿದಿದ್ದು, ಮುಂದೆ ಯಾವುದೇ ಧಾರಾವಾಹಿಯಲ್ಲೂ ನಟಿಸುವುದಕ್ಕೆ ಅನಿರುದ್ಧ್ ನಟಿಸಬಹುದಾಗಿದೆ.
ಆರೂರು ಜಗದೀಶ್ ನಿರ್ದೇಶನದ 'ಜೊತೆ ಜೊತೆಯಲಿ' ಧಾರಾವಾಹಿಯ ತಂಡದೊಂದಿಗೆ ವೈಮನಸ್ಯ ಉಂಟಾದ ಕಾರಣ ಅನಿರುದ್ಧ್, ಆ ತಂಡದಿಂದ ಕೆಲವು ತಿಂಗಳುಗಳ ಹಿಂದೆ ಹೊರಬಂದಿದ್ದರು. ಈ ಪ್ರಕರಣವು ಕಿರುತೆರೆ ನಿರ್ಮಾಪಕರ ಸಂಘದ ಮಟ್ಟಿಲೇರಿ, ಅನಿರುದ್ಧ್ ಅವರಿಗೆ ಬೇರೆ ಯಾವ ಧಾರಾವಾಹಿಯಲ್ಲೂ ನಟಿಸುವುದಕ್ಕೆ ಅವಕಾಶ ನೀಡಬಾರದು ಎಂದು ತೀರ್ಮಾನವಾಗಿತ್ತು. ಹೀಗಿರುವಾಗಲೇ, ಉದಯ ಟಿವಿಯಲ್ಲಿ ಪ್ರಸಾರವಾಗಬೇಕಿರುತವ 'ಸೂರ್ಯವಂಶ' ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಇದಕ್ಕೆ ಕಿರುತೆರೆ ನಿರ್ಮಾಪಕರ ಸಂಘವು ವಿರೋಧ ವ್ಯಕ್ತಪಡಿಸಿದ್ದು, ಅನಿರುದ್ಧ್ ಅವರಿಗೆ ನಟಿಸುವುದಕ್ಕೆ ಅವಕಾಶ ನೀಡಬಾರದು ಎಂದು ಹೇಳಿತ್ತು. ಈ ಪ್ರಕರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂಗಳಕ್ಕೆ ಹೋಗಿ, ಕಳೆದ ಎರಡು ದಿನಗಳಿಂದ ಅಲ್ಲಿ ಚರ್ಚೆ ನಡೆದಿತ್ತು. ಈ ಸಭೆಗೆ 'ಜೊತೆ ಜೊತೆಯಲಿ' ಚಿತ್ರತಂಡ ಮತ್ತು ಕಿರುತೆರೆ ನಿರ್ಮಾಪಕರ ಸಂಘದವರಾಗಲೀ ಹಾಜರಾಗಿರಲಿಲ್ಲ. ಅದಕ್ಕೆ ಪ್ರತಿಯಾಗಿ ಎರಡೂ ಸಂಘಗಳು ಪ್ರತ್ಯೇಕವಾಗಿ ಸಭೆ ನಡೆಸಿದ್ದವು. ಈ ಸಭೆಯಲ್ಲಿ ಅನಿರುದ್ಧ್ ಸಹ ಭಾಗವಹಿಸಿದ್ದು, ಪ್ರಕರಣ ಇತ್ಯರ್ಥವಾಗಿದೆ.
ಸಭೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದ ನಿರ್ದೇಶಕ ಶೇಷಾದ್ರಿ, 'ಚಿತ್ರೀಕರಣ ಸಂದರ್ಭದಲ್ಲಿ ವ್ಯತ್ಯಾಸಗಳು ಆಗುವುದು ಸಹಜ. ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ಇದಕ್ಕೆ ಜಗದೀಶ್ ಹಾಗೂ ಅನಿರುದ್ಧ್ ಒಪ್ಪಿಕೊಂಡಿದ್ದಾರೆ. ಇಬ್ಬರೂ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾರೆ. ಈ ಹಿಂದೆ ಆಗಿರುವ ಘಟನೆ ಮರೆತು ಮುಂದೆ ಸಾಗಬೇಕು. ಇದು ನಮ್ಮ ಮನೆಯ ವಿಷಯ. ಇದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಇದಕ್ಕೂ ಚಿತ್ರರಂಗಕ್ಕೂ ಸಂಬಂಧ ಇಲ್ಲ' ಎಂದು ಹೇಳಿದ್ದಾರೆ.
ಆರೂರು ಜಗದೀಶ್ ಹೆಗಲ ಮೇಲೆ ಕೈ ಹಾಕಿ ಭಾವುಕರಾದ ಅನಿರುದ್ಧ್, 'ಈ ಘಟನೆಯಿಂದ ಧಾರಾವಾಹಿಯ ಅಭಿಮಾನಿಗಳಿಗೆ ರಸಭಂಗ ಆಗಿದೆ. ಅಭಿಮಾನಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇಂತಹ ಘಟನೆ ನಡೆಯಬಾರದಾಗಿತ್ತು' ಎಂದು ಭಾವುಕರಾದರು.
ಆರೂರು ಜಗದೀಶ್ ಸಹ ಕ್ಷಮೆ ಕೇಳಿ, ''ಜೊತೆ ಜೊತೆಯಲಿ' ಧಾರವಾಹಿಗೆ ಹೀಗೆ ಆಗಬಾರದಿತ್ತು. ಮೂರು ವರ್ಷಗಳ ಅವರ ಜತೆಗೆ ಕೆಲಸ ಮಾಡಿದ್ದೇನೆ. ಧಾರಾವಾಹಿಯ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ. ಅನಿರುದ್ಧ್ ಅವರಿಗೆ ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅನಿರುದ್ಧ್ ಅವರ ಜತೆಗೆ ಕೆಲಸ ಮಾಡುತ್ತಾರಾ ಎಂಬ ಪ್ರಶ್ನೆಗೆ, ಕಾಲವೇ ಉತ್ತರಿಸುತ್ತದೆ' ಎಂದು ಹೇಳಿದ್ದಾರೆ.