

ಮುಂಬೈ: ಜೇಮ್ಸ್ ಕ್ಯಾಮರನ್ ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ 'ಅವತಾರ್ - ದಿ ವೇ ಆಫ್ ವಾಟರ್ಸ್', ಕಳೆದ ತಿಂಗಳು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಭಾರತದಲ್ಲೂ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದ್ದು, ಜನರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ.
ಸಾವಿರಾರು ಕೋಟಿ ಬಜೆಟ್ನ ಈ ಚಿತ್ರ, ಎಷ್ಟು ಸಂಪಾದಿಸಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ ಮತ್ತು 'ಅವತಾರ್ 2' ಚಿತ್ರವು ಜಗತಿಕ ಬಾಕ್ಸ್ ಆಫೀಸ್ನಲ್ಲಿ ಐತಿಹಾಸಿಕ ಮೈಲಿಗಲ್ಲೊಂದು ದಾಟಿ ಆರನೇ ಸ್ಥಾನದಲ್ಲಿದೆ.
ಚಿತ್ರವು ಜಗತ್ತಿನಾದ್ಯಂತ 16 ಸಾವಿರ ಕೋಟಿ ರೂ.ಗಳನ್ನು ಸಂಪಾದಿಸಿದೆ. 16 ಸಾವಿರ ಕೋಟಿ ರೂ. ಕ್ಲಬ್ನಲ್ಲಿ ಇದುವರೆಗೂ ಐದು ಹಾಲಿವುಡ್ ಚಿತ್ರಗಳಿದ್ದವು. ಈಗ 'ಅವತಾರ್ 2' ಆರನೇ ಚಿತ್ರವಾಗಿ ಹೊರಹೊಮ್ಮಿದೆ. ಇದಕ್ಕೂ ಮೊದಲು 'ಅವತಾರ್', 'ಅವೆಂಜರ್ಸ್ - ದಿ ಎಂಡ್ಗೇಮ್', 'ಟೈಟಾನಿಕ್', 'ಸ್ಟಾರ್ ವಾರ್ಸ್ - ದಿ ಫೋರ್ಸ್ ಅವೇಕನ್ಸ್' ಮತ್ತು ಅವೆಂಜರ್ಸ್: ಇನ್ಫಿನಿಟಿ ವಾರ್' ಚಿತ್ರಗಳು ಈ ಕ್ಲಬ್ನಲ್ಲಿತ್ತು. ಈಗ 'ಅವತಾರ್ 2' ಸಹ ಸೇರಿಕೊಂಡಿದೆ.
ವಿಶೇಷವೆಂದರೆ, ಈ ಆರು ಚಿತ್ರಗಳ ಪೈಕಿ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಅವರ ಮೂರು ಚಿತ್ರಗಳಿವೆ. ಈ ಹಿಂದೆ, ಕ್ಯಾಮರಾನ್ ನಿರ್ದೇಶನದ 'ಅವತಾರ್ ಮತ್ತು 'ಟೈಟಾನಿಕ್' ಚಿತ್ರಗಳು 16 ಸಾವಿರ ಕೋಟಿ ರೂ. ಸಂಗ್ರಹಿಸಿದ್ದವು. ಈಗ 'ಅವತಾರ್ 2' ಮೂಲಕ ಜೇಮ್ಸ್ ಕ್ಯಾಮರಾನ್ ಹೊಸ ದಾಖಲೆಯನ್ನೇ ಮಾಡಿದ್ದಾರೆ.