

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗ (Sandalwood) ದ ಹಿರಿಯ ನಟ ಲಕ್ಷ್ಮಣ್ (Veteran actor Lakshman) ಅವರು ಹೃದಯಾಘಾತ (Heart Attack)ದಿಂದ ಇಂದು (ಜ.23) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಇಂದು ಮುಂಜಾನೆ ನಾಲ್ಕು ಗಂಟೆಗೆ ಮೂಡಲಪಾಳ್ಯದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಲಕ್ಷ್ಮಣ್ ಅವರು ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಬಹುದಿನಗಳಿಂದ ಲಕ್ಷ್ಮಣ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಸದ್ಯ ಮನೆಯಲ್ಲಿ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.
ನಿನ್ನೆ ಎದೆ ನೋವು ಕಾಣಿಸಿಕೊಂಡಿದ್ದು, 3.30ಕ್ಕೆ ನಾಗರಭಾವಿಯಲ್ಲಿರುವ ಜಿಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈಸಿಜಿ ಮಾಡಿದ ನಂತರ ಏನು ಆಗಿಲ್ಲ ಅಂತ ವೈದ್ಯರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಮನೆಗೆ ಕರೆತರಲಾಗಿತ್ತು. ಆದರೆ, ಇಂದು ಬೆಳಗಿನ ಜಾವ ಹೃದಯಾಘಾತವಾಗಿ ವಿಧಿವಶರಾಗಿದ್ದಾರೆ.
ಲಕ್ಷ್ಮಣ್ ಅವರು 300ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿರುವ ಲಕ್ಷ್ಮಣ್, ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಶಂಕರ್ನಾಗ್, ಅಂಬರೀಷ್, ಶಿವರಾಜ್ಕುಮಾರ್, ಸುದೀಪ್ ಸೇರಿದಂತೆ ಅನೇಕ ಸಿನಿ ದಿಗ್ಗಜರ ಜೊತೆ ತೆರೆಹಂಚಿಕೊಂಡಿದ್ದಾರೆ.