

ಬೆಂಗಳೂರು: ಕೋವಿಡ್ ಕಾರಣಗಳಿಂದ ಕಳೆದ ಕೆಲವು ವರ್ಷಗಳಿಂದ ನಿಂತಿದ್ದ 'ಕರ್ನಾಟಕ ಚಲನಚಿತ್ರ ಕಪ್', ಈ ಬಾರಿ ಮತ್ತೊಮ್ಮೆ ಮುಂದುವರೆಯಲಿದೆ. ಸುದೀಪ್ ನೇತೃತ್ವದಲ್ಲಿ ಪ್ರಾರಂಭವಾದ ಈ ಕಪ್ನ ಮೂರನೆಯ ಸೀಸನ್ ಸದ್ಯದಲ್ಲೇ ಪ್ರಾರಂಭವಾಗಲಿದೆ.
ಸೋಮವಾರ ಬೆಳಿಗ್ಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿಯ ಸೀಸನ್ ಕುರಿತು ಮಾಹಿತಿ ಹಂಚಿಕೊಂಡ ಸುದೀಪ್, 'ನಮ್ಮ ಚಿತ್ರರಂಗದಲ್ಲೊಂದು ಸಣ್ಣ ಗ್ಯಾಪ್ ಇದೆ. ಚಿತ್ರರಂಗದವರಿಗೆ ಒಟ್ಟಿಗೇ ಸೇರುವುದಕ್ಕೆ ಒಂದು ವೇದಿಕೆ ಇಲ್ಲ. ಇಲ್ಲಿ ಕಲಾವಿದರು ಮಾತ್ರವಲ್ಲ, ತಂತ್ರಜ್ನರು, ಮಾಧ್ಯಮದವರು ಸೇರಿದಂತೆ ಸಾಕಷ್ಟು ಜನ ಇದ್ದಾರೆ. ಅವರನ್ನೆಲ್ಲ ಒಂದೇ ಕಡೆ ಸೇರಿಸುವ ವೇದಿಕೆ ಕೆಸಿಸಿ. ಇಲ್ಲಿ ನನ್ನದು ಅಂತ ಏನೂ ಇಲ್ಲ. ಎಲ್ಲರೂ ಇರುತ್ತಾರೆ. ನಾವೆಲ್ಲರೂ ಸೇರಿ ಈ ಬಾರಿ ಒಟ್ಟಿಗೆ ಕ್ರಿಕೆಟ್ ಆಡುತ್ತೇವೆ' ಎನ್ನುತ್ತಾರೆ ಅವರು.
ಕಳೆದ ಸೀಸನ್ಗಳಲ್ಲಿ ಕೆಲವು ನಟರು ಬಾರದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, 'ಇದು ನನ್ನ ಸ್ವತ್ತಲ್ಲ. ಈ ಟೂರ್ನಿಯಲ್ಲಿ ಭಾಗವಹಿಸಲು ಎಲ್ಲರಿಗೂ ಆಹ್ವಾನ ನೀಡುತ್ತೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರುವುದಿಲ್ಲ. ಅಂತಹವರು ಬರುವುದಿಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಎಂದು ಉತ್ತರ ಕೊಡುವುದು ಕಷ್ಟ. ಅವರವರ ಕೆಲಸಗಳನ್ನು ನೋಡಿಕೊಂಡು ಬರುತ್ತಾರೆ' ಎಂದು ಸುದೀಪ್ ಹೇಳಿದರು.
ಈ ಬಾರಿ ಟೂರ್ನಿ ಬರೀ ಬೆಂಗಳುರಿಗೆ ಮಾತ್ರ ಸೀಮಿತವಾಗುವುದಿಲ್ಲವಂತೆ. ಮೈಸೂರಿನಲ್ಲೂ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಅಂತಾರಾಷ್ಟ್ರೀಯ ಆಟಗಾರರನ್ನು ಕರೆಸುವ ಉದ್ದೇಶವಿದ್ದರೂ ಅದು ಕಷ್ಟ ಎನ್ನುವ ಅವರು, 'ಅಂತಾರಾಷ್ಟ್ರೀಯ ಆಟಗಾರರನ್ನು ಕರೆತರೋದು ಬಹಳ ಕಷ್ಟ. ಅವರನ್ನು ಭೇಟಿ ಮಾಡುವುದೇ ಕಷ್ಟ. ದುಡ್ಡಿದ್ದರೆ ಎಲ್ಲವೂ ಆಗುವುದಿಲ್ಲ. ಅದರ ಹಿಂದೆ ಸಾಕಷ್ಟು ಶ್ರಮ ಬೇಕು' ಎನ್ನುತ್ತಾರೆ ಸುದೀಪ್.
ಈ ಬಾರಿಯ ಟೂರ್ನಿಯಲ್ಲಿ ಸುದೀಪ್, ಶಿವರಾಜಕುಮಾರ್, ಉಪೇಂದ್ರ, ಗಣೇಶ್, 'ಡಾಲಿ' ಧನಂಜಯ್ ಮುಂತಾದವರು ಭಾಗವಹಿಸುತ್ತಿದ್ದಾರೆ. 'ಕೆಸಿಸಿ ಸೀಸನ್ 3' ಪಂದ್ಯಗಳನ್ನು ಫೆಬ್ರವರಿ 11 ಹಾಗೂ 12ರಂದು ಆಯೋಜಿಸಲಾಗಿದೆ.