

ಬೆಂಗಳೂರು: 'ಕಾಂತಾರ' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸಪ್ತಮಿ ಗೌಡ, ಇದೀಗ ಬಾಲಿವುಡ್ಗೆ ಹಾರಿದ್ದಾರೆ. 'ಕಾಶ್ಮೀರ್ ಫೈಲ್ಸ್' ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್ ವಾರ್' ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಿದರೂ, ತಮ್ಮ ಮೊದಲ ಪ್ರಾಶಸ್ತ್ಯ ಕನ್ನಡಕ್ಕೆ ಎಂದಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಹಿಂದಿ ಚಿತ್ರವೊಂದಕ್ಕೆ ಆಯ್ಕೆಯಾಗಿದ್ದು ಹೇಗೆ ಎನ್ನುವುದರ ಜತೆಗೆ, ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
'ವಿವೇಕ್ ಅಗ್ನಿಹೋತ್ರಿ ಅವರು 'ಕಾಂತಾರ' ಚಿತ್ರ ನೋಡಿ, ರಿಷಬ್ ಶೆಟ್ಟಿ ಅವರನ್ನು ಸಂಪರ್ಕಿಸಿದರಂತೆ. ಚಿತ್ರದಲ್ಲಿನ ಒಂದು ಪಾತ್ರಕ್ಕೆ ನಾನು ಸೂಕ್ತ ಎಂದನಿಸಿ ನನ್ನ ಫೋನ್ ನಂಬರ್ ಕೇಳಿದರಂತೆ. ಅವರಿಂದ ನಂಬರ್ ಪಡೆದು, ನನಗೆ ಕಾಲ್ ಮಾಡಿದ್ದಾರೆ. ಈ ಪಾತ್ರ ನಾನು ಮಾಡಿದರೆ ಚೆನ್ನಾಗಿರುತ್ತದೆ ಎಂದು ಅವರು ಹೇಳಿದರು. ನಾನು ತಕ್ಷಣ ಒಪ್ಪಿಕೊಂಡೆ. ನನಗೆ ಸ್ಕ್ರಿಪ್ಟ್ ಕಳಿಸಲಾಯಿತು. ಹೀಗೆ ನೋಡುನೋಡುತ್ತಿದ್ದಂತೆ, ನಾನು ಬಾಲಿವುಡ್ ಚಿತ್ರವೊಂದರ ಭಾಗವಾದೆ' ಎಂದು ಅವರು ಹೇಳಿಕೊಂಡಿದ್ದಾರೆ.
ಬಾಲಿವುಡ್ ಚಿತ್ರಗಳಲ್ಲಿ ಇನ್ನು ಮುಂದೆ ಸಹ ನಟಿಸುತ್ತೀರಾ ಎಂದರೆ, 'ನನಗೆ ಕಥೆ ಇಷ್ಟವಾದರೆ, ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನನ್ನ ಮೊದಲ ಪ್ರಾಶಸ್ತ್ಯ ಕನ್ನಡ ಚಿತ್ರಗಳು ಮತ್ತು ಕನ್ನಡ ಚಿತ್ರಗಳಿಗಾಗಿ ನಾನು ಎದುರು ನೋಡುತ್ತೇನೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲರಾದ ರಾಘಣ್ಣ; ಧ್ರುವ 369 ಚಿತ್ರದಲ್ಲಿ ಅಭಿನಯ
'ವ್ಯಾಕ್ಸಿನ್ ವಾರ್' ಚಿತ್ರದಲ್ಲಿ ನಾಯಕ-ನಾಯಕಿ ಅಂತಿಲ್ಲವಂತೆ. ಚಿತ್ರದಲ್ಲಿ ಎಲ್ಲ ಪಾತ್ರಗಳೂ ಪ್ರಮುಖ ಪಾತ್ರಗಳಂತೆ. 'ನನ್ನ ಪಾತ್ರವಂತೂ ಸ್ವಲ್ಪ ಕಷ್ಟಕರವಾದದ್ದು. ಇದೊಂದೇ ಅಲ್ಲ, ಎಲ್ಲ ಪಾತ್ರಗಳೂ ಕಷ್ಟವಾಗಿರುತ್ತವೆ. ಪಾತ್ರ ಸುಲಭವಾಗಿದ್ದರೆ ಮಜ ಇರುವುದಿಲ್ಲ. ಈ ಪಾತ್ರ ಮಾಡುವುದಕ್ಕೆ ವಿವೇಕ್ ಅಗ್ನಿಹೋತ್ರಿ ನನಗೆ ಬಹಳ ಸಹಾಯ ಮಾಡಿದ್ದಾರೆ' ಎಂದು ಸಪ್ತಮಿ ಹೇಳಿದ್ದಾರೆ.