

ಬೆಂಗಳೂರು: ಶಂಕರ್ ನಾಗ್ ನಿರ್ದೇಶಿಸುತ್ತಿರುವ ವಿಭಿನ್ನ ಶೀರ್ಷಿಕೆಯ ಚಿತ್ರ ‘ಧ್ರುವ 369’. ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮೊದಲ ಬಾರಿಗೆ ರಾಜ್ಯಪಾಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಕ್ಲೈಮ್ಯಾಕ್ಸ್ ಚಿತ್ರೀಕರಣ ನಂದಿ ಬೆಟ್ಟದ ಸಮೀಪವಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು. ಚಿತ್ರೀಕರಣದಲ್ಲಿ ರಾಘವೇಂದ್ರ ರಾಜಕುಮಾರ್ ಸಹ ಪಾಲ್ಗೊಂಡಿದ್ದರು. ‘ಎರಡು ದಿನಗಳಿಂದ ಶೂಟಿಂಗ್ನಲ್ಲಿ ಭಾಗಿಯಾಗುತ್ತಿದ್ದೇನೆ. ಮೊದಲ ಬಾರಿ ಇಂತಹ ಪಾತ್ರ ಮಾಡುತ್ತಿರುವುದು ಖುಷಿ ನೀಡಿದೆ’ ಎಂದು ರಾಘವೇಂದ್ರ ರಾಜಕುಮಾರ್ ಹೇಳಿಕೊಂಡರು.
ನಿರ್ದೇಶಕ ಶಂಕರ್ನಾಗ್ ಪ್ರಕಾರ ಕಥೆಗೆ ಮೂಲ ಆಧಾರವೇ ರಾಘವೇಂದ್ರ ರಾಜಕುಮಾರ್ ಪಾತ್ರವಂತೆ. ಪ್ರಾರಂಭ, ಮಧ್ಯಂತರ ಹಾಗೂ ಕೊನೆಯಲ್ಲಿ ಅವರು ಇರುತ್ತಾರೆ. ಪುರಾಣದಲ್ಲಿ ಧ್ರುವ ನಕ್ಷತ್ರ ಕಥೆಗೂ, ಈಗಿನ ಖಗೋಳ ಶಾಸ್ತ್ರಕ್ಕೂ ಸಂಬಂಧವಿರುವ ಕಥೆಯಿದು. ಹಲವು ಕುತೂಹಲಕಾರಿ ಅಂಶಗಳು ಚಿತ್ರದಲ್ಲಿವೆ ಎಂದು ಮಾಹಿತಿ ನೀಡಿದರು ಅವರು.
ರಮೇಶ್ ಭಟ್, ಅತೀಶ್ ಶೆಟ್ಟಿ, ಚಂದನಾ, ನಮಿತಾ, ಸಂದೀಪ್ ಮಲಾನಿ, ಅರುಣ್ ಸಾಗರ್, ಮೇಘಾ ಗೌಡ ಪ್ರಮುಖ ತಾರಾಗಣದಲ್ಲಿದ್ದು, ಮಂಗಳೂರಿನ ಕೆಲವು ರಂಗಭೂಮಿ ಕಲಾವಿದರು ಸಹ ನಟಿಸಿದ್ದಾರೆ. ಮಂಗಳೂರು, ಉಡುಪಿ, ಮುರುಡೇಶ್ವರ, ಬೆಂಗಳೂರು, ಚಿಕ್ಕಬಳ್ಳಾಪುರದ ಹಲವೆಡೆ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಸತೀಶ್ ಬಾಬು ಸಂಗೀತ, ಮಹಾಬಲ ಛಾಯಾಗ್ರಹಣ, ಸುಬ್ರಮಣ್ಯ ಐರೋಡಿ ಸಂಕಲನವಿದೆ.