ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೊರೆ ಹೋಗಿದ್ದು ಏಕೆ?

Priyanka Chopra
Published on

ಲಾಸ್​ ಆಂಜಲೀಸ್​: ಪ್ರಿಯಾಂಕಾ ಚೋಪ್ರಾ ಬಾಲಿವುಡ್​ನಿಂದ ಹಾಲಿವುಡ್ ನಟಿಯಾಗಿ ಯಾವುದೋ ಕಾಲವಾಗಿದೆ. ಈಗ ಅವರು ಬರೀ ನಟಿಯಷ್ಟೇ ಅಲ್ಲ, ಉದ್ಯಮಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು, ಮ್ಯಾಕ್ಸ್​ ಫ್ಯಾಕ್ಟರ್​ ಎಂಬ ತಮ್ಮ ಮೊದಲ ಮೇಕಪ್​ ಕಲೆಕ್ಷನ್​ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ಬ್ರಿಟಿಷ್​ ನಿಯತಕಾಲಿಕೆ 'ವೋಗ್​'ನಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮ್ಯಾಗಜೀನ್​ ಮೇಲೆ ಕಾಣಿಸಿಕೊಂಡಿರುವ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ವಿಶೇಷವೆಂದರೆ, ಪ್ರಿಯಾಂಕಾ ಜತೆಗೆ ಅವರ ಮಗಳು ಮಾಲ್ತಿ ಮೇರಿ ಸಹ ಕಾಣಿಸಿಕೊಂಡಿದ್ದಾಳೆ. ಮಗಳು ಹುಟ್ಟಿದಾಗಿನಿಂದ ಆಕೆಯ ಮುಖವನ್ನು ಪ್ರಿಯಾಂಕಾ ಚೋಪ್ರಾ ಎಲ್ಲೂ ತೋರಿಸಿಲ್ಲ. ಈ ಫೋಟೋಗಳಲ್ಲೂ ಪ್ರಿಯಾಂಕಾ, ಮಗುವಿನ ಮುಖವನ್ನು ಬಹಿರಂಗೊಳಿಸಿಲ್ಲ.

ಅಂದಹಾಗೆ, ಪ್ರಿಯಾಂಕಾ ಚೋಪ್ರಾ ತಾಯಿಯಾಗಿ ಒಂದು ವರ್ಷವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಪ್ರಿಯಾಂಕಾ, ಬಾಡಿಗೆ ತಾಯ್ತನದ ಮೂಲಕ ತಾಯಿಯಾದರು. ಪ್ರಿಯಾಂಕಾ ಮತ್ತು ನಿಕ್​ ಅವರ ಮಗು ಬಹಳ ಕೃಷವಾಗಿತ್ತು. ನಿನ್ನ ಕೈಗಳಿಗಿಂತ ಸಣ್ಣದಾಗಿತ್ತು. ಸುಮಾರು ಮೂರು ತಿಂಗಳುಗಳ ಕಾಲ ಅವಳು NICUನಲ್ಲಿತ್ತು' ಎಮದು ಹೇಳಿಕೊಂಡಿದ್ದಾರೆ.

ಇನ್ನು, ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೊರೆ ಹೋದಾಗ ಹಲವರು ಅವರ ಕಾಲೆಳೆದಿದ್ದರು. ಫಿಗರ್​ ಹಾಳಾಗುತ್ತದೆ ಎಂಬ ಭಯದಲ್ಲಿ ಪ್ರಿಯಾಂಕಾ ಹಾಗೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಮಾತನಾಡಿರುವ ಅವರು, 'ನನಗೆ ಸಾಕಷ್ಟು ಆರೋಗ್ಯಕರ ಸಮಸ್ಯೆಗಳು ಇದ್ದವು. ನಾನು ಬಾಡಿಗೆ ತಾಯ್ತನದ ಮೊರೆ ಹೋಗದಿದ್ದರೆ ಕಷ್ಟವಾಗುತ್ತಿತ್ತು. ಹಾಗಾಗಿ, ಅದು ಅನಿವಾರ್ಯವಾಗಿತ್ತು. ನಮಗಾಗಿ ನಮ್ಮ ಅಮೂಲ್ಯವಾದ ಮಗುವನ್ನು, ಬಾಡಿಗೆ ತಾಯಿ ಆರು ತಿಂಗಳುಗಳ ಕಾಲ ರಕ್ಷಿಸಿದರು. ಈ ಸಂದರ್ಭದಲ್ಲಿ ಮಾನಸಿಕವಾಗಿ ಬಹಳ ನೊಂದಿದ್ದೆ. ನಾನು ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ ಎಂದ ಮಾತ್ರಕ್ಕೆ, ಯಾರು ಏನು ಬೇಕಾದರೂ ಮಾತಾಡಿಕೊಳ್ಳಬಹುದು ಎಂದಲ್ಲ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net