ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಊಟ ಬಡಿಸಿದ 'ದುನಿಯಾ' ವಿಜಯ್

Duniya Vijay - Birthday 1
Published on

ಆನೇಕಲ್​: 'ದುನಿಯಾ' ವಿಜಯ್​ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಹುಟ್ಟೂರಾದ ಆನೇಕಲ್​ನಲ್ಲಿ ತಂದೆ-ತಾಯಿಯ ಸಮಾಧಿ, ಅಭಿಮಾನಿಗಳ ಸಮ್ಮುಖದಲ್ಲಿ ದೊಡ್ಡ ಮಟ್ಟಿಗೆ ಆಚರಿಸಿಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿಜಯ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ವಿಜಯ್​ ಅವರ ತಾಯಿ ಕಳೆದ ವರ್ಷ ನಿಧನರಾಗಿದ್ದರು. ಅದಾದ ಕೆಲವೇ ದಿನಗಳಲ್ಲಿ ಅವರ ತಂದೆಯೂ ಇನ್ನಿಲ್ಲವಾಗಿದ್ದರು. ಅಪ್ಪ-ಅಮ್ಮನ ಅಂತ್ಯಕ್ರಿಯೆಯನ್ನು ವಿಜಯ್​, ತಮ್ಮ ಹುಟ್ಟೂರಾದ ಆನೇಕಲ್​ನ ಕುಂಬಾರನಹಳ್ಳಿಯಲ್ಲಿ ನೆರವೇರಿಸಿದ್ದರು. ಅಷ್ಟೇ ಅಲ್ಲ, ಅಲ್ಲೇ ಸಮಾಧಿಯನ್ನೂ ಕಟ್ಟಿಸಿದ್ದರು. ಆ ಸಮಾಧಿಯ ಎದುರೇ ವಿಜಯ್​ ತಮ್ಮ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಂಡಿದ್ದಾರೆ.

ಗುರುವಾರ ರಾತ್ರಿಯೇ ಆನೇಕಲ್​ನತ್ತ ಪ್ರಯಾಣ ಬೆಳೆಸಿದ ವಿಜಯ್​ ಅವರನ್ನು ನೋಡುವುದಕ್ಕೆ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು. ಇಂದು ಬೆಳಿಗ್ಗೆ ಸಮಾಧಿಗೆ ಪೂಜೆ ಸಲ್ಲಿಸಿ ಬಂದ ವಿಜಯ್​, ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಕೇಕ್​ ಕತ್ತರಿಸುವ ಮೂಲಕ ಆಚರಿಸಿದರು. ಅಭಿಮಾನಿಗಳನ್ನು ನಿಯಂತ್ರಿಸಲು 50ಕ್ಕೂ ಹೆಚ್ಚು ಬೌನ್ಸರ್​ಗಳು ನೇಮಕ ಮಾಡಲಾಗಿದ್ದರೂ, ಹಲವು ಪೊಲೀಸರಿದ್ದರೂ ಕಷ್ಟಪಡಬೇಕಾಯಿತು.

ಕೇಕ್​ ಕತ್ತರಿಸಿದ ಬಳಿಕ ವಿಜಯ್​ ಸ್ವತಃ ಮುಂದೆ ನಿಂತು ತಮ್ಮ ಅಭಿಮಾನಿಗಳಿಗೆ ಊಟ ಬಡಿಸಿದರು. ಅಷ್ಟೇ ಅಲ್ಲ, ಅಭಿಮಾನಿಗಳ ಕೈಯಿಂದ ತುತ್ತನ್ನು ತಿಂದರು. ಅಷ್ಟೇ ಅಲ್ಲ, ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಈ ಮಧ್ಯೆ, ಮೈತುಂಬಾ ಟ್ಯಾಟೂ ಹಾಕಿಸಿಕೊಂಡು ಬಂದ ಮಣಿ ಎಂಬ ಅಭಿಮಾನಿಯೊಬ್ಬರು ಎಲ್ಲರ ಗಮನಸೆಳೆದರು. ಆರ್ಕೆಸ್ಟ್ರಾದಲ್ಲಿ ಗಾಯಕನಾಗಿರುವ ಮಣಿ, ಬೆನ್ನಿನ ಮೇಲೆ ವಿಜಿ ಅವರ ದೊಡ್ಡದಾದ ಟ್ಯಾಟೂ ಹಾಕಿಸಿಕೊಂಡು ಬಂದು ಎಲ್ಲರ ಗಮನಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net