ಲಸಿಕೆ ಪಡೆಯಲು ಹೋದ ಆಟೋ ಡ್ರೈವರ್​... ಮನೆಗೆ ವಾಪಸಾದಾಗ ಅಲ್ಮೆರಾ ಖಾಲಿ !

auto
Published on

ನವದೆಹಲಿ : ದೆಹಲಿಯ ಶಿವ್​ ವಿಹಾರ್​ ಪ್ರದೇಶದಲ್ಲಿ ಮನೆಯ ಮಾಲೀಕರು ಕರೊನಾ ಲಸಿಕೆ ಪಡೆಯಲು ಹೊರಗೆ ಹೋದ ಸಂದರ್ಭವನ್ನು ನೋಡಿಕೊಂಡು 25 ಲಕ್ಷ ರೂಪಾಯಿ ಹಣ ಮತ್ತು ಒಡವೆಗಳನ್ನು ಕದ್ದಿರುವ ಘಟನೆ ವರದಿಯಾಗಿದೆ. ಆಶ್ಚರ್ಯವೆಂದರೆ ಆರ್ಟಿಫಿಷಿಯಲ್​ ಜ್ಯೂವಲರಿಗಳನ್ನು ಮಾತ್ರ ಬಿಟ್ಟುಹೋಗಿದ್ದಾರೆ.

ಆಟೋ ರಿಕ್ಷಾ ಚಾಲಕರಾದ ಅರವಿಂದ್​ ಕುಮಾರ ಪಟ್ವಾ (40) ಎಂಬುವರು ಮೇ 12 ರಂದು ಬೆಳಿಗ್ಗೆ 10 ಗಂಟೆಗೆ ಕರೊನಾ ಲಸಿಕೆ ಪಡೆಯಲು ಸ್ಲಾಟ್ ಪಡೆದಿದ್ದರು. ತಮ್ಮ ಪತ್ನಿ ಮಕ್ಕಳೊಂದಿಗೆ ಬೆಳಿಗ್ಗೆಯೇ ಮನೆ ಬಿಟ್ಟ ಅವರು, ಮಕ್ಕಳನ್ನು ತಮ್ಮ ಮಾವನ ಮನೆಯಲ್ಲಿ ಬಿಟ್ಟು ಪತ್ನಿಯೊಂದಿಗೆ ಲಸಿಕಾ ಕೇಂದ್ರಕ್ಕೆ ತೆರಳಿದರು. ಅವರು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ವಾಪಸಾದಾಗ, ಮೇನ್​ ಗೇಟ್​ ತೆಗೆದಿದ್ದು, ಮನೆಯೊಳಗೆ ಹೋಗಿ ನೋಡಿದಾಗ ಅಲ್ಮಿರಾ ಕೂಡ ತೆರೆದಿತ್ತು. ಮನೆಗೆ ಹೊಕ್ಕಿದ್ದ ದುಷ್ಕರ್ಮಿಗಳು ಪಟ್ವಾ ಅವರು ಇಟ್ಟಿದ್ದ 25 ಲಕ್ಷ ರೂ. ನಗದು ಮತ್ತು ಎಲ್ಲಾ ಚಿನ್ನದ ಒಡವೆಗಳನ್ನು ಒಯ್ದಿದ್ದರು. ಆದರೆ ಕೃತಕ ಒಡವೆಗಳನ್ನು ಮಾತ್ರ ಅಲ್ಲೇ ಬಿಟ್ಟುಹೋಗಿದ್ದರು!

"ಅಲ್ಮಿರಾದಲ್ಲಿ ನನ್ನ ಸೋದರಿಯ ಒಡವೆಗಳನ್ನೂ ಇಟ್ಟಿದ್ದೆವು. ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ಅವರು ಕೊಂಡೊಯ್ದಿದ್ದಾರೆ. ನಾವು ಮನೆಯಲ್ಲಿಲ್ಲದಾಗ ಯಾರೋ ಒಬ್ಬ ವ್ಯಕ್ತಿ ಮನೆಯ ಮುಂದೆ ನಿಂತು ಫೋನಿನಲ್ಲಿ ಮಾತನಾಡುತ್ತಿದ್ದುದನ್ನು ಪಕ್ಕದ ಮನೆಯವರು ನೋಡಿದ್ದಾರೆ. ಅವನು ಕಳ್ಳರ ಗುಂಪಿಗೆ ಸೇರಿದವನಿರಬಹುದು" ಎಂದು ಪಟ್ವಾ ಹೇಳಿದ್ದಾರೆ. ಕರವಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಳವು ಪ್ರಕರಣದ ತನಿಖೆ ಆರಂಭವಾಗಿದೆ.

ಪಟ್ವಾ ಅವರು ಆಟೋ ಚಾಲಕರಾಗಿದ್ದು, ಜೊತೆಯಲ್ಲಿ ಮನೆಯಲ್ಲೇ ರಾಖಿ ವ್ಯಾಪಾರ ಮಾಡುತ್ತಿದ್ದರು. ಕಳೆದ 15 ದಿನಗಳಿಂದ ಮನೆಯಿಂದ ಯಾರೂ ಹೊರಗೆ ಹೋಗಿರಲಿಲ್ಲ. ಲಸಿಕೆ ಪಡೆಯಲು ಹೋದ ಸಮಯಕ್ಕೆ ಸರಿಯಾಗಿ ಕಳ್ಳರು ಲೂಟಿ ಮಾಡಿಹೋಗಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net