

ಮುಂಬೈ: ಸಲ್ಮಾನ್ ಖಾನ್ ಅಭಿನಯದ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ದಬಾಂಗ್ ಚಿತ್ರದ ಚುಲ್ಬುಲ್ ಪಾಂಡೆ ಪಾತ್ರ ಸಹ ಒಂದು. ಸದಾ ಲವಲವಿಕೆಯಿಂದ ಇರುವುದರ ಜತೆಗೆ, ಬಿಲ್ಡಪ್ ಕೊಡುತ್ತಾ, ಪಂಚಿಂಗ್ ಡೈಲಾಗ್ಗಳನ್ನು ಹೊಡೆಯುವ ವಿಭಿನ್ನ ಪಾತ್ರವದು. ಈ ಪಾತ್ರ ಅದೆಷ್ಟು ಜನಪ್ರಿಯವಾಗಿದೆ ಎಂದರೆ ದಬಾಂಗ್ ಸೀರೀಸ್ನಲ್ಲಿ ಇದುವರೆಗೂ ಮೂರು ಭಾಗಗಳು ಬಿಡುಗಡೆಯಾಗಿವೆ.
ದಬಾಂಗ್ ಚಿತ್ರದಲ್ಲಿ ಲವಲವಿಕೆಯಿಂದ ಇರುವಂತೆಯೇ, ಸಲ್ಮಾನ್ ತಮ್ಮ ನಿಜಜೀವನದಲ್ಲೂ ಇರುತ್ತಾರಾ ಎಂಬ ಪ್ರಶ್ನೆ ಬರುವುದು ಸಹಜ. ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಸಲ್ಮಾನ್ ಎದುರು ಈ ಪ್ರಶ್ನೆಯನ್ನು ಮುಂದಿಟ್ಟರೆ, ಅವರಿಂದ ಬಂದ ಉತ್ತರವೇನು ಗೊತ್ತಾ?
ನಾನು ಇಷ್ಟಪಟ್ಟಿರುವ ಪಾತ್ರಗಳನ್ನೆಲ್ಲ ಮನೆಗೆ ತೆಗೆದುಕೊಂಡು ಹೋಗುವುದು ಕಷ್ಟ. ನಾವು ಕೆಲವು ಪಾತ್ರಗಳನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿರುತ್ತೇವೆ. ಆದರೆ, ನಿಜಜೀವನದಲ್ಲಿ ಅದೇ ತರಹ ಇರುವುದಕ್ಕೆ ಆಗುವುದಿಲ್ಲ. ನಾನೇನಾದರೂ ಮನೆಯಲ್ಲಿ ಚುಲ್ಬುಲ್ ಪಾಂಡೆ ತರಹ ಇರುವುದಕ್ಕೆ ಹೋದರೆ, ನಮ್ಮಪ್ಪ ಹೊಡೆದೇಬಿಡುತ್ತಾರೆ. ನಮ್ಮಮ್ಮ ಕಪಾಳಕ್ಕೆ ಬಾರಿಸುತ್ತಾರೆ. ಹಾಗಾಗಿ, ತೆರೆಯ ಮೇಲಷ್ಟೇ ಆ ತರಹ ಇರುವುದಕ್ಕೆ ಸಾಧ್ಯ. ಮನೆಯಲ್ಲಿ ಒಬ್ಬ ಮಗ ಹೇಗಿರಬೇಕೋ, ಒಬ್ಬ ಸಹೋದರ ಹೇಗಿರಬೇಕೋ, ಅದೇ ರೀತಿ ಇರುವುದಕ್ಕೆ ನಾನು ಇಷ್ಟಪಡುತ್ತೇನೆ ಎಂದು ಸಲ್ಮಾನ್ ಹೇಳಿದ್ದಾರೆ.
ಅಂದಹಾಗೆ, ಸಲ್ಮಾನ್ ಖಾನ್ ಅಭಿನಯದ ರಾಧೆ – ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರವು ಇಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಜತೆಗೆ ದಿಶಾ ಪಠಾಣಿ, ಜಾಕಿ ಶ್ರಾಫ್, ರಣದೀಪ್ ಹೂಡಾ ಮುಂತಾದವರು ಅಭಿನಯಿಸಿದ್ದು, ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸಿದ್ದಾರೆ.