ಗಳಿಕೆ ಕಾಣದ ಚಿತ್ರವಿದು ರಾಧೆ; ಸಲ್ಮಾನ್ ಖಾನ್ ಮನದಾಳದ ಮಾತು

IMG-20210512-WA0059
Published on

ಗಳಿಕೆ ಕಾಣದ ಚಿತ್ರವಿದು...

ತಮ್ಮ ಚಿತ್ರ ಬಿಡುಗಡೆಗೂ ಮುನ್ನವೇ ಎಲ್ಲ ನಟ-ನಟಿಯರು ಚಿತ್ರ ಹಿಟ್ ಆಗುತ್ತದೆ ಎಂದು ಭವಿಷ್ಯ ಹೇಳೋದು, ಆತ್ಮವಿಶ್ವಾಸದ ಮಾತುಗಳನ್ನಾಡೋದು ಸಹಜ. ಆದರೆ, ಸಲ್ಮಾನ್ ಖಾನ್ ಮಾತ್ರ ‘ರಾಧೆ’ ಚಿತ್ರದ ಬಿಡುಗಡೆಗೆ ಮುನ್ನವೇ ಆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

‘ರಾಧೆ’ ಚಿತ್ರವು ಇಂದು (ಮೇ 13) ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲ ಕಡೆ ಲಾಕ್​ಡೌನ್ ಇರುವ ಕಾರಣ, ಓಟಿಟಿ ಮತ್ತು ಡಿಟಿಎಚ್​ಗಳಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಅವಕಾಶವಿರುವ ಕೆಲವು ಕಡೆ ಮಾತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ, ‘ರಾಧೆ’ ಚಿತ್ರವು ಸಲ್ಮಾನ್ ಖಾನ್ ಅಭಿನಯದ ಚಿತ್ರಗಳಲ್ಲೇ ಅತ್ಯಂತ ಕಡಿಮೆ ಕಲೆಕ್ಷನ್ ಮಾಡುವ ಚಿತ್ರವಾಗಲಿದೆ. ಅದನ್ನು ಸಲ್ಮಾನ್ ಸಹ ಒಪ್ಪಿಕೊಂಡಿದ್ದಾರೆ.

‘ಬಾಕ್ಸ್​ಆಫೀಸ್ ವಿಚಾರಕ್ಕೆ ಬಂದರೆ, ನನ್ನ ಚಿತ್ರಗಳಲ್ಲೇ ಅತ್ಯಂತ ಕಡಿಮೆ ಕಲೆಕ್ಷನ್ ಮಾಡುವ ಚಿತ್ರ ಎಂದರೆ ಅದು ‘ರಾಧೆ’. ನನ್ನ ಪ್ರಕಾರ, 10-15 ಕೋಟಿ ಸಹ ಸಂಗ್ರಹ ಮಾಡುವುದೂ ಸಂಶಯ. ಏಕೆಂದರೆ, ಲಾಕ್​ಡೌನ್​ನಿಂದ ಎಲ್ಲ ಚಿತ್ರಮಂದಿರಗಳು ಬಂದ್ ಆಗಿವೆ. ಆ ನಿಟ್ಟಿನಲ್ಲಿ ಇದು ನಮಗೆ ದೊಡ್ಡ ನಷ್ಟ. ಇದರಿಂದ ಕೆಲವರಿಗೆ ಖುಷಿಯಾಗಬಹುದು. ಹಾಗಂತ ನನಗೆ ಬೇಸರವಿಲ್ಲ. ಏಕೆಂದರೆ, ಜನ ಚಿತ್ರಮಂದಿರಗಳಿಗೆ ಬರಬೇಕಾದರೆ, ‘ರಾಧೆ’ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಿ ಎಂದು ಹಲವು ಪ್ರದರ್ಶಕರು ಹೇಳಿದ್ದರು. ಅವರಿಗೆ ಒಳ್ಳೆಯದಾಗ ಬೇಕೆಂದು, ಆರು ತಿಂಗಳ ಹಿಂದೆಯೇ ಚಿತ್ರದ ಬಿಡುಗಡೆ ಘೋಷಣೆ ಮಾಡಿದ್ದೆ. ಅಷ್ಟರಲ್ಲಿ ಲಾಕ್​ಡೌನ್ ಬಂದು ಚಿತ್ರ ಪ್ರದರ್ಶನ ಕ್ಯಾನ್ಸಲ್ ಆಗಿದೆ. ಪ್ರೇಕ್ಷಕರನ್ನು ಇನ್ನೆಷ್ಟು ದಿನ ಕಾಯಿಸುವುದು. ಹಾಗಾಗಿ, ಲಾಸ್ ಆದರೂ ಹೇಳಿದ ದಿನವೇ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ.

ಬಾಕ್ಸ್​ಆಫೀಸ್ ದೃಷ್ಟಿಯಲ್ಲಿ ‘ರಾಧೆ’ ಕಲೆಕ್ಷನ್ ಕಡಿಮೆಯಾಗಿ ನಷ್ಟವಾದರೂ, ಓಟಿಟಿ ಮತ್ತು ಸ್ಯಾಟ್​ಲೈಟ್ ಹಕ್ಕುಗಳ ಮಾರಾಟದಿಂದ ಸಲ್ಮಾನ್​ಗೆ ಒಳ್ಳೆಯ ಲಾಭ ಬಂದಿದೆಯಂತೆ. ಮೂಲಗಳ ಪ್ರಕಾರ, ಜೀ ಸಂಸ್ಥೆಯು ಚಿತ್ರದ ಸ್ಯಾಟ್​ಲೈಟ್, ಡಿಜಿಟಲ್, ಮ್ಯೂಸಿಕ್ ಮತ್ತು ವಿತರಣೆಯ ಹಕ್ಕುಗಳನ್ನು 190 ಕೋಟಿ ರೂ.ಗಳಿಗೆ ಖರೀದಿಸಿದೆ ಎಂದು ಹೇಳಲಾಗಿದ್ದು. ಚಿತ್ರದ ಬಜೆಟ್ 90 ಕೋಟಿಯಾದರೂ, ಸಲ್ಮಾನ್​ಗೆ ಈ ಚಿತ್ರದಿಂದ ನೂರು ಕೋಟಿ ರೂ. ಆದಾಯ ಸಿಗಲಿದೆ ಎಂದು ಹೇಳಲಾಗುತ್ತಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net