

ನವದೆಹಲಿ : ಈ ಹಳೆಯ ಫೋಟೋದಲ್ಲಿ ಈಗಿನ ಜನಪ್ರಿಯ ಕಾಮೆಡಿಯನ್ ಇದ್ದಾರೆ. ಯಾರೆಂದು ಗುರುತಿಸಬಲ್ಲಿರಾ ? ಗೊತ್ತಾಗಲಿಲ್ವಾ ? ಇದು ಟಿವಿಯಲ್ಲಿ ತಮ್ಮದೇ ಕಾಮೆಡಿ ಶೋ ಹೊಂದಿರುವ ಕಪಿಲ್ ಶರ್ಮ ! ನಿನ್ನೆ ರಾತ್ರಿ ಇನ್ಸ್ಟಾಗ್ರಾಂನಲ್ಲಿ ಶರ್ಮ ಪೋಸ್ಟ್ ಮಾಡಿದ ಅವರ ಕಾಲೇಜು ದಿನಗಳ ಚಿತ್ರ ಇದು. ಮಧ್ಯದಲ್ಲಿ ಬಿಳಿಯ ಅಂಗಿ ಧರಿಸಿ ನಿಂತಿರುವುದು ಅವರೇ !
"ಈ 23 ವರ್ಷಗಳ ಹಿಂದಿನ ಚಿತ್ರ ಸಿಕ್ಕಿದೆ. ಶ್ರೀ ಗುರು ನಾನಕ್ ದೇವ್ ಯೂನಿವರ್ಸಿಟಿಯ ಯುವಜನ ಮೇಳದಲ್ಲಿ 'ಆಜಾದಿ' ನಾಟಕದ ಪ್ರದರ್ಶನ ಮುಗಿದ ನಂತರ ತೆಗೆದ ಫೋಟೋ. ನಾನು ಧರಿಸಿದ್ದ ಗಡ್ಡವನ್ನು ಆಗ ತಾನೇ ತೆಗೆದು, ನನ್ನ ಸಹನಟರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ. ಆಗಿನ ದಿನಗಳಲ್ಲಿ ಫೋಟೋ ಕ್ಲಿಕ್ಕಿಸುವುದು ಬಹಳ ದೊಡ್ಡ ವಿಷಯವಾಗಿತ್ತು... ಅದಕ್ಕೇ ನನ್ನ ಮುಖದ ಮೇಲೆ ಗಡ್ಡದ ಅಂಟು ಇನ್ನೂ ಉಳಿದಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಆ ದಿನಗಳನ್ನು ಮಿಸ್ ಮಾಡಿಕೊಳ್ತಿದ್ದೇನೆ... ಆಗ ಜೇಬುಗಳು ಖಾಲಿ ಇರ್ತಿದ್ವು, ಆದ್ರೆ ಯಾವಾಗಲೂ ನಗು ಇರುತ್ತಿತ್ತು" ಎಂದು ಕಪಿಲ್ ಶರ್ಮ ವಿವರಣೆ ಬರೆದಿದ್ದಾರೆ.
ಅವರ ಮತ್ತೊಂದು ಹಳೆಯ ಚಿತ್ರ ನೋಡಿ -
ಪಂಜಾಬ್ನ ಅಮೃತಸರದಲ್ಲಿ ಜನಿಸಿದ ಕಪಿಲ್ ಶರ್ಮ ಅವರು, 2007 ರಲ್ಲಿ 'ದ ಗ್ರೇಟ್ ಇಂಡಿಯನ್ ಲಾಫ್ಟರ್ ಚ್ಯಾಲೆಂಜ್' ಟಿವಿ ಸ್ಪರ್ಧೆಯಲ್ಲಿ ಗೆದ್ದಾಗಿನಿಂದ ಜನಪ್ರಿಯಗೊಂಡಿದ್ದಾರೆ. ಕಾಮೆಡಿ ಸರ್ಕಸ್, ಝಲಕ್ ದಿಖ್ಲಾ ಜಾ ಸೀಸನ್ 6, ಛೋಟೇ ಮಿಯಾ ಮತ್ತು ಉಸ್ತಾದೋಂ ಕಾ ಉಸ್ತಾದ್ ಮುಂತಾದ ಟೆಲಿಶೋಗಳಲ್ಲಿ ಭಾಗವಹಿಸಿದ್ದಾರೆ. 2013 ರಲ್ಲಿ ತಮ್ಮದೇ ಕಾಮೆಡಿ ಶೋ 'ಕಾಮೆಡಿ ನೈಟ್ಸ್ ವಿತ್ ಕಪಿಲ್'ಅನ್ನು ಅವರು ಲಾಂಚ್ ಮಾಡಿದ್ದರು. ಈಗ ಸೋನಿ ಚಾನೆಲ್ನಲ್ಲಿ 'ದ ಕಪಿಲ್ ಶರ್ಮ ಶೋ'ಅನ್ನು ಹೋಸ್ಟ್ ಮಾಡುತ್ತಾರೆ.
ಕಪಿಲ್ ಶರ್ಮಾ ಸಿನಿಮಾಗಳಲ್ಲೂ ನಟಿಸಿದ್ದಾರೆ. 2015 ರಲ್ಲಿ ಕಿಸ್ ಕಿಸ್ಕೊ ಪ್ಯಾರ್ ಕರೂ ಚಿತ್ರದಿಂದ ಬಾಲಿವುಡ್ಗೆ ಕಾಲಿಟ್ಟು, ಎಬಿಸಿಡಿ 2, ಫಿರಂಗಿ, ಸನ್ ಆಫ್ ಮಂಜೀತ್ ಸಿಂಗ್, ದಿ ಆಂಗ್ರಿ ಬರ್ಡ್ಸ್ ಮೂವಿ 2 ಮತ್ತು ಇಟ್ಸ್ ಮೈ ಲೈಫ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. (ಏಜೆನ್ಸೀಸ್)