

ತಿರುವನಂತಪುರಂ: ಕೇರಳ ಸಚಿವಾಲಯದ ಕಟ್ಟಡದಲ್ಲಿ ಮಂಗಳವಾರ (ಆಗಸ್ಟ್ 25) ಸಂಭವಿಸಿದ ಅಗ್ನಿ ದುರಂತಕ್ಕೆ ಬೇರೆಯದೇ ವ್ಯಾಖ್ಯಾನ ನೀಡಲಾಗುತ್ತಿದೆ.
ಮಂಗಳವಾರ ಮಧ್ಯಾಹ್ನ ಸಚಿವಾಲಯದ ಸೌತ್ ಸ್ಯಾಂಡ್ವಿಚ್ ಬ್ಲಾಕ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸಿಎಂ ಕಚೇರಿಗೆ ಸಮೀಪದಲ್ಲಿಯೇ ಈ ಅವಘಡ ಸಂಭವಿಸಿತ್ತು.
ಸಾಮಾನ್ಯ ಆಡಳಿತ ವಿಭಾಗದ ಸಿಬ್ಬಂದಿ ಮೇಲ್ಭಾಗದಲ್ಲಿದ್ದ ವೈರಿಂಗ್ನಿಂದ ಏಳುತ್ತಿರುವುದನ್ನು ಗಮನಿಸಿದ್ದರು. ಕೆಲ ಹೊತ್ತಿನಲ್ಲಿಯೇ ಬೆಂಕಿಯೂ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.
ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚಿನ್ನದ ಕಳ್ಳಸಾಗಾಟ ಪ್ರಕರಣದಲ್ಲಿನ ಸಾಕ್ಷ್ಯಾಧಾರಗಳ ನಾಶಕ್ಕೆ ನಡೆಸಲಾದ ಕೃತ್ಯ' ಎಂದೇ ಆರೋಪಿಸಿವೆ.
ಅಲ್ಲದೇ, ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಇದನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಅವರನ್ನು ಪೊಲೀಸರು ಬಂಧಿಸಿದರು.
ಚಿನ್ನದ ಕಳ್ಳ ಸಾಗಣೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಹಾಗೂ ತನಿಖೆಯ ದಿಕ್ಕನ್ನು ತಪ್ಪಿಸಲು ಬೆಂಕಿ ಹಚ್ಚುವ ಕೆಲಸ ಮಾಡಲಾಗಿದೆ. ದಾಖಲೆಗಳನ್ನು ಸುಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಸದ್ಯ ಚಿನ್ನ ಕಳ್ಳ ಸಾಗಾಟದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.