ತಂಗಿಯ ಮೇಲೆ ಅಣ್ಣನಿಂದಲೇ ರೇಪ್: ನೋವು ಹೇಳಿಕೊಳ್ಳಲು ಅಜ್ಜಿ ಮನೆಗೆ ಹೋದವಳಿಗೆ ಮತ್ತೊಂದು ಶಾಕ್​!

Victim
Published on

ಖಮ್ಮಮ್​: ದಿನೇದಿನೆ ಮನುಷ್ಯರಲ್ಲಿ ಮಾನವೀಯತೆ ನಶಿಸಿ ಹೋಗುತ್ತಿದೆಯಾ? ರಕ್ತ ಸಂಬಂಧ ಎಂಬುದನ್ನು ನೋಡದೆ ಮೃಗೀಯ ವರ್ತಿಸುವಂತಹ ಘಟನೆಗಳು, ಮಾನವನ ಮೌಲ್ಯಗಳು ಕುಸಿಯುತ್ತಿವೆ ಎಂಬುದನ್ನು ಎತ್ತಿ ತೋರಿಸುವಂತಹ ಪ್ರಸಂಗಗಳು ಆಗಾಗ ಬೆಳಕಿಗೆ ಬರುತ್ತಿರುವುದು ದುರ್ದೈವದ ಸಂಗತಿಯಾಗಿದೆ.

ಇದೀಗ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕಾಮುಕ ಸಹೋದರನೊಬ್ಬ ಸ್ವಂತ ಸಹೋದರಿ ಮೇಲೆಯೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಭದ್ರಾದ್ರಿ ಕೊಟ್ಟಗುಡೆಮ್​ ಜಿಲ್ಲೆಯಲ್ಲಿ ನಡೆದಿದೆ. ತಂದೆಯಿಲ್ಲದ ಸಂತ್ರಸ್ತೆ ತನ್ನ ತಾಯಿ ಮತ್ತು ಸಹೋದರನ ಜತೆ ವಾಸವಿದ್ದಳು. ಈ ಕ್ರೌರ್ಯದ ಬಗ್ಗೆ ತಾಯಿ ಮತ್ತು ಅಜ್ಜಿಗೆ ಹೇಳಿಕೊಂಡರು ಸಹ ತಲೆಕೆಡಿಸಿಕೊಳ್ಳದ ಪಾಲಕರು ಕಾಮುಕನ ಬೆಂಬಲಕ್ಕೆ ನಿಂತಿದ್ದು ಶೋಚನೀಯ ಸಂಗತಿಯಾಗಿದೆ.

ಪಾಲಕರು ಸಂತ್ರಸ್ತೆಯ ಬೆಂಬಲಕ್ಕೆ ನಿಲ್ಲದಿದ್ದಾಗ ಆಕೆ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಹೇಳಿಕೆಯಂತೆ ಸ್ವಂತ ಅಣ್ಣನೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಭದ್ರಾದ್ರಿ ಎಂದು ಗುರುತಿಸಲಾಗಿದೆ. ಈತ ಕೆಲವು ತಿಂಗಳಿಂದ ಸಹೋದರಿಗೆ ಕಿರುಕುಳ ನೀಡಿತ್ತಿದ್ದನಂತೆ. ಈ ಬಗ್ಗೆ ತಾಯಿಯ ಬಳಿ ಹೇಳಿಕೊಂಡರು ಯಾವುದೇ ಸಹಾಯ ಮಾಡಿಲ್ಲ.

ಇದಾದ ಬಳಿಕ ಅಜ್ಜಿ ಮತ್ತು ತಾತನ ಮನೆಗೆ ಸಂತ್ರಸ್ತೆ ತನ್ನ ನೋವನ್ನು ಹೇಳಿಕೊಳ್ಳಲು ಹೋದರೆ ಅಲ್ಲಿಯೂ ಸಹ ಅವರು ಆಕೆಗೆ ಬೆಂಬಲ ನೀಡಲಿಲ್ಲ. ಅದರ ಬದಲಾಗಿ ಅಜ್ಜಿ-ತಾತನ ಮಗನೇ ಸಂತ್ರಸ್ತೆಯ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದಾನೆ. ಕಷ್ಟ ಹೇಳಿಕೊಳ್ಳಲು ಹೋದವಳ ಮೇಲೆ ಮತ್ತೆ ದೌರ್ಜನ್ಯ ನಡೆದಿದೆ. ಅಲ್ಲದೆ, ಈ ಬಗ್ಗೆ ಯಾರಿಗೂ ಹೇಳಿದಂತೆ ಬೆದರಿಕೆಯನ್ನು ಹಾಕಿದ್ದಾರೆ.

ಆದರೆ, ಕೊನೆಗೂ ಏನಾದರೂ ಆಗಲಿ ಎಂದು ಧೈರ್ಯ ಮಾಡಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net