More

    Web Exclusive | ಇಂಜಿನಿಯರಿಂಗ್ ವ್ಯಾಸಂಗಕ್ಕೆ ನಿರಾಸಕ್ತಿ, ಖಾಸಗಿ ಸಂಸ್ಥೆಗಳಲ್ಲಿ ಮುಚ್ಚುವ ಸ್ಥಿತಿ!

    17 ಕಾಲೇಜುಗಳಲ್ಲಿ ಕೇವಲ 2-3 ವಿದ್ಯಾರ್ಥಿಗಳು ಪ್ರವೇಶ | ಇನ್ನೂ ಖಾಲಿ ಉಳಿದಿವೆ 28 ಸಾವಿರ ಸೀಟುಗಳು

    | ದೇವರಾಜ್ ಕನಕಪುರ ಬೆಂಗಳೂರು

    ಇಂಜಿನಿಯರಿಂಗ್ ಕೋರ್ಸ್ ಕಡೆ ವಿದ್ಯಾರ್ಥಿಗಳ ಒಲವು ಕಡಿಮೆಯಾಗಿದೆ. ಇದರ ಪರಿಣಾಮ ಬಹುತೇಕ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೇವಲ ಒಂದೆರಡು ಸೀಟುಗಳಷ್ಟೇ ಭರ್ತಿಯಾಗಿವೆ. ರಾಜ್ಯದಲ್ಲಿರುವ 280 ಇಂಜಿನಿಯರಿಂಗ್ ಕಾಲೇಜುಗಳ ಪೈಕಿ 17 ಕಾಲೇಜುಗಳಲ್ಲಿ 10ಕ್ಕಿಂತ ಕಡಿಮೆ ಹಾಗೂ 11 ಕಾಲೇಜುಗಳಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ನೂರಾರು ಸೀಟುಗಳಿರುವ ಕಾಲೇಜುಗಳಲ್ಲಿ 2-3 ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಕಾಲೇಜುಗಳಿಗೆ ಸಂಕಷ್ಟ ತಂದಿದ್ದು, ಮುಚ್ಚುವ ಸ್ಥಿತಿ ತಲುಪಿವೆ.

    ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2020-21ನೇ ಸಾಲಿನಲ್ಲಿ ನಡೆಸಿದ ಸಿಇಟಿ ಮೂಲಕ 280 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭ್ಯವಿದ್ದ 65,022 ಸೀಟುಗಳಿಗೆ 37,514 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಹಂಚಿಕೆ ಮಾಡಿತ್ತು. ಈ ಪೈಕಿ 36,683 (ಶೇ.56.39) ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಸತತ ನಾಲ್ಕನೇ ಸುತ್ತಿನ ಸೀಟು ಹಂಚಿಕೆಯ ಬಳಿಕವೂ 28,359 ಸೀಟುಗಳು ಖಾಲಿ ಉಳಿದಿವೆ.

    ಕಾರಣವೇನು?: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 219 ಕಾಲೇಜುಗಳು ಮಾನ್ಯತೆ ಪಡೆದಿವೆ. 3.25 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 280 ಕಾಲೇಜುಗಳಿದ್ದು, ಕೆಲವು ವಿಟಿಯು ಮೂಲಕ ಮಾನ್ಯತೆ ಪಡೆಯದ, ಸ್ವಾಯತ್ತತೆ ಪಡೆದಿರುವ ಕಾಲೇಜುಗಳಿವೆ. ಇದರಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯುವಾಗ ಈ ಎಲ್ಲ ಅಂಶಗಳು ಗಮನಿಸುತ್ತಾರೆ. ಬಹಳ ಮುಖ್ಯವಾಗಿ ಕಾಲೇಜುಗಳಲ್ಲಿರುವ ಮೂಲಸೌಕರ್ಯಗಳಾದ ಸಮರ್ಪಕ ಕೊಠಡಿ, ಅನುಭವಿ ಪ್ರಾಧ್ಯಾಪಕರು, ಪ್ರವೇಶ ಪ್ರಕ್ರಿಯೆ ಮುಗಿಸಿದ ಮೇಲೆ ಪ್ಲೇಸ್​ವೆುಂಟ್ ಇತ್ಯಾದಿ ಅಂಶಗಳು ಪ್ರವೇಶದ ವೇಳೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ.

    ಕಾಮೆಡ್-ಕೆ: ಕಾಮೆಡ್-ಕೆ ವ್ಯಾಪ್ತಿಯಲ್ಲಿರುವ ಇಂಜಿನಿಯರಿಂಗ್ ಸೀಟುಗಳ ಪರಿಸ್ಥಿತಿ ಕೂಡ ಕೆಇಎ ಸೀಟುಗಳಿಗಿಂತ ವಿಭಿನ್ನವಾಗಿಲ್ಲ. 2021ರಲ್ಲಿ ಲಭ್ಯವಿದ್ದ 15,020 ಸೀಟುಗಳ ಪೈಕಿ ಭರ್ತಿಯಾಗಿದ್ದು, 4,711 ಮಾತ್ರ. 10,309 ಸೀಟುಗಳು ಹಾಗೇ ಖಾಲಿ ಉಳಿದಿವೆ. ಇಲ್ಲಿ 51 ಕಾಲೇಜುಗಳಲ್ಲಿ ಕನಿಷ್ಠ ಶೇ.25 ಸೀಟುಗಳು ಕೂಡ ಭರ್ತಿಯಾಗಿಲ್ಲ.

    ಯುವಿಸಿಇ ಬೆಸ್ಟ್: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಮಧ್ಯೆಯೇ ಬೆಂಗಳೂರು ವಿವಿ ವ್ಯಾಪ್ತಿಯಲ್ಲಿರುವ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) ತನ್ನ ಗುಣಮಟ್ಟತೆಯನ್ನು ಕಾಯ್ದುಕೊಂಡಿದೆ. ಈ ಕಾಲೇಜಿನಲ್ಲಿ ಲಭ್ಯವಿದ್ದ 552 ಸೀಟುಗಳಿಗೆ 511 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇಲ್ಲಿ ಕಡಿಮೆ ಶುಲ್ಕ ಹಾಗೂ ಪ್ಲೇಸ್​ವೆುಂಟ್ ಕೂಡ ಶೇ.90 ಇರುವುದು ಹೆಚ್ಚು ವಿದ್ಯಾರ್ಥಿಗಳ ಪ್ರವೇಶಕ್ಕೆ ಕಾರಣವಾಗಿದೆ. ಉಳಿದ ಬೆಂಗಳೂರಿನ ಪ್ರತಿಷ್ಠಿತ ಟಾಪ್ ಎಂದು ಕರೆಸಿಕೊಳ್ಳುವ ಕಾಲೇಜುಗಳಲ್ಲಿ ಶೇ.80ರಿಂದ 90 ಸೀಟುಗಳು ಭರ್ತಿಯಾಗಿವೆ.

    ಮೆಕಾನಿಲ್ ಕೋರ್ಸ್ ಮುಚ್ಚಿ: ಖಾಸಗಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಸೀಟು ಭರ್ತಿಯಾಗದೆ ಉಳಿದಿದ್ದು, ವಿಭಾಗವಾರು ನೋಡಿದಾಗ ಮೆಕಾನಿಕಲ್ ಕಾಲೇಜುಗಳಲ್ಲಿ ಬಹುತೇಕ ಸೀಟುಗಳು ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿಗಳು ವಿಟಿಯುಗೆ ಪತ್ರ ಬರೆದು ಈ ಕೋರ್ಸ್​ನ ಇನ್​ಟೇಕ್ ಕಡಿಮೆ ಮಾಡಿ ಇಲ್ಲವೆ ರದ್ದುಪಡಿಸಲು ಅನುಮತಿ ನೀಡುವಂತೆ ಮನವಿ ಮಾಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts