

ಬೀದರ್: ಕಾರು ಪಲ್ಟಿಯಾಗಿ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಅಶೋಕ್ ಖೇಣಿ ಅವರ ಸಹೋದರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 51ರಲ್ಲಿ ನಡೆದಿದೆ.
ಇಂದು ಚುನಾವಣೆ ಹಿನ್ನೆಲೆಯಲ್ಲಿ ಅದರ ಅವಸರದಲ್ಲಿದ್ದಾಗ ಸಂಜಯ್ ಖೇಣಿ ಅವರು ಪ್ರಯಾಣಿಸುತ್ತಿದ್ದ ಫಾರ್ಚೂನರ್ ಕಾರು ಪಲ್ಟಿ ಹೊಡೆದಿದೆ. ಗಾಯಗೊಂಡಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದಲ್ಲಿ ಮತದಾನ ಚುರುಕಾಗಿ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶೇ. 8.02 ರಷ್ಟು ಮತದಾನ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಮಾಹಿತಿ ಮಾಹಿತಿ ನೀಡಿದೆ. ಅಂಕಿ-ಅಂಶಗಳನ್ನು ನೋಡಿದರೆ ಈ ಬಾರಿಯ ಮತದಾನಕ್ಕೆ ಉತ್ತಮ ಆರಂಭ ಸಿಕ್ಕಿದೆ.
ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್)