

ಮುಂಬೈ: ಸಿನಿಮಾಗಳಲ್ಲಿ ಖಳನಟನಾಗಿ ಖ್ಯಾತಿ ಪಡೆದಿರುವ ಆಶಿಶ್ ವಿದ್ಯಾರ್ಥಿ ತಮ್ಮ 60 ನೇ ವಯಸ್ಸಿನಲ್ಲಿ 2 ನೇ ವಿವಾಹವಾಗಿದ್ದಾರೆ. ಅಸ್ಸಾಂ ಮೂಲದ ರೂಪಾಲಿ ಬರುವಾ ಅವರನ್ನು ಆಶಿಶ್ ವಿದ್ಯಾರ್ಥಿ ವರಿಸಿದ್ದಾರೆ.
ಈ ಹಿಂದೆ ಖ್ಯಾತ ನಟಿ ಶಕುಂತಲಾ ಬರುವಾ ಅವರ ಪುತ್ರಿ ನಟಿ, ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ರಾಜೋಶಿ ಬರುವಾ ಅವರನ್ನು ಆಶಿಶ್ ವಿದ್ಯಾರ್ಥಿ ವಿವಾಹವಾಗಿದ್ದರು. ರಾಜೋಶಿ ಬರುವಾ ಸ್ವತಃ ನಟಿ. ಆಶಿಶ್ ಮತ್ತು ರಾಜೋಶಿ ಮದುವೆಯಾಗಿ 23 ವರ್ಷಗಳಾಗಿದ್ದು, ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನಿದ್ದಾನೆ. ಇದೀಗ ಆಶಿಶ್ ಅವರು 2ನೇ ಮದುವೆಯಾಗಿದ್ದಾರೆ. ಈ ಕುರಿತಾಗಿ ಅವರ ಮೊದಲ ಪತ್ನಿ ಮನಸ್ಸಿನ ಭಾವನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
‘ನಿಮಗೆ ನೋವುಂಟಾಗುತ್ತದೆ ಎಂಬ ವಿಚಾರ ಗೊತ್ತಿದ್ದರೆ ಸರಿಯಾದ ವ್ಯಕ್ತಿ ಅದನ್ನು ಮಾಡುವುದಿಲ್ಲ. ನೆನಪಿನಲ್ಲಿಡಿ’ ಎಂದು ಮೊದಲ ಪೋಸ್ಟ್ನಲ್ಲಿ ರಾಜೋಶಿ ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ ಮಾಡಿರುವ ಅವರು, ‘ಅತಿಯಾದ ಆಲೋಚನೆ ಮತ್ತು ಅನುಮಾನವು ಇದೀಗ ನಿಮ್ಮ ಮನಸ್ಸಿನಿಂದ ಹೊರಬರಲಿ. ಸ್ಪಷ್ಟತೆ ಗೊಂದಲವನ್ನು ಬದಲಾಯಿಸಬಹುದು. ನಿಮ್ಮ ಜೀವನದಲ್ಲಿ ಶಾಂತಿ ತುಂಬಲಿ. ನಾನು ಸಾಕಷ್ಟು ಬಲಶಾಲಿ’ ಎಂದು ಅವರು ಬರೆದುಕೊಂಡಿದ್ದಾರೆ.