

ನವದೆಹಲಿ: ಹಮಾಸ್ ಉಗ್ರರ ದಾಳಿಯಿಂದ ರಣಾಂಗಣವಾಗಿರುವ ಇಸ್ರೇಲ್ನಲ್ಲಿ ಪರಿಸ್ಥಿತಿ ಭೀಕರವಾಗಿದ್ದು, ಭಾರತ ಸೇರಿದಂತೆ ಹಲವು ದೇಶಗಳು ಇಸ್ರೇಲ್ಗೆ ಬೆಂಬಲ ಸೂಚಿಸಿ ಧೈರ್ಯ ನೀಡಿವೆ. ಇದೀಗ ಅಮೆರಿಕದಿಂದ ಮತ್ತೊಮ್ಮೆ ಇಸ್ರೇಲ್ಗೆ ಅಭಯ ವ್ಯಕ್ತವಾಗಿದೆ.
ಯುಎಸ್ ಸೆಕ್ರೆಟರಿ ಆಫ್ ಸ್ಟೇಟ್ ಆ್ಯಂಟನಿ ಬ್ಲಿಂಕನ್ ಈ ಅಭಯವನ್ನು ವ್ಯಕ್ತಪಡಿಸಿದ್ದಾರೆ. ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಬೆಂಬಲವನ್ನು ಘೋಷಿಸಿದ್ದಲ್ಲದೆ, 1,300ಕ್ಕೂ ಹೆಚ್ಚು ಇಸ್ರೇಲಿಗರ ಸಾವಿನ ನಡುವೆಯೂ ಇಸ್ರೇಲಿನ ಜನತೆಯ ಶೌರ್ಯವನ್ನು ಶ್ಲಾಘಿಸಿದರು.
ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಸಾಕಷ್ಟು ಬಲಶಾಲಿ ಆಗಿರಬಹುದು. ಆದರೆ ಅಮೆರಿಕ ಇರುವವರೆಗೆ ನೀವು ಎಂದಿಗೂ ಏಕಾಂಗಿಯಲ್ಲ. ಎಲ್ಲಿಯವರೆಗೆ ನಾವಿರುತ್ತೇವೋ ಅಲ್ಲಿಯವರೆಗೂ ನೀವು ಏಕಾಂಗಿಯಾಗಿ ಎದುರಿಸಬೇಕಾಗಿಲ್ಲ, ನಾವೂ ನಿಮ್ಮೊಂದಿಗೆ ಇರುತ್ತೇವೆ ಎಂದು ಹೇಳಿದರು.