ಮೂಲವ್ಯಾಧಿಗೆ ಕಾರಣಗಳೇನು, ಸುಲಭ ಪರಿಹಾರಗಳೇನು...?; ಇಂದು ವಿಶ್ವ ಮೂಲವ್ಯಾಧಿ ದಿನ

Piles Day
Published on
| ಡಾ. ಸಿದ್ದನಗೌಡ ಎ. ಪಾಟೀಲ

ಪಾಶ್ಚಿಮಾತ್ಯ ಜೀವನಶೈಲಿಯ ಅನುಕರಣೆ ಅನೇಕ ರೋಗಗಳಿಗೆ ಕಾರಣವಾಗಿದೆ. ಇಂಥ ರೋಗಗಳಲ್ಲಿ ಗುದಗತ ರೋಗವಾದ ಮೂಲವ್ಯಾಧಿಯೂ ಒಂದು. ಪುರುಷ- ಮಹಿಳೆ ಇಬ್ಬರಲ್ಲೂ ಕಂಡುಬರುವ ರೋಗವಿದು.

ಲ್ಯಾಟಿನ್​ನ ಪೈಲಾ (ಎಂದರೆ ಚೆಂಡಿನ ಆಕಾರ) ಎಂಬ ಪದದಿಂದ ಪೈಲ್ಸ್ ಎಂಬ ಪದ ಹುಟ್ಟಿದೆ. ಗುದನಾಳದ ಮೊಳಕೆಗಳಿಂದ ರಕ್ತಸೋರುವಿಕೆಗೆ ಇದನ್ನು ಅನ್ವಯಿಸುತ್ತಾರೆ. ಆಡುಭಾಷೆಯಲ್ಲಿ ಮೂಲ್ಯವ್ಯಾಧಿ. ಗುದನಾಳಗಳ ಪದರಗಳಲ್ಲಿ ಊದಿಕೊಂಡ, ರಕ್ತನಾಳಗಳಿಂದ ಕೂಡಿದ ಗೊಂಚಲು ಮತ್ತು ಮೊಳಕೆಯಂತಹ ಗಂಟುಗಳು ಮಲವಿಸರ್ಜನೆ ಸಮಯದಲ್ಲಿ ಮಲವು ಹೊರ ಹೋಗದಂತೆ ಮಾಡುತ್ತವೆ. ವಿಶ್ವದ ಶೇ. 40ರಷ್ಟು ಜನರಿಗೆ ಪೈಲ್ಸ್ ತೊಂದರೆ ಇದೆ ಎನ್ನುತ್ತವೆ ಸಮೀಕ್ಷೆಗಳು.

ಕಾರಣಗಳೇನು?

  • ಮಲ ವಿಸರ್ಜನೆ ಸಮಯದಲ್ಲಿ ಅತಿಯಾಗಿ ತಿಣುಕುವುದು
  • ಪದೇ ಪದೆ ಮಲಬದ್ಧತೆ, ಪಚನಕ್ರಿಯೆಗೆ ತೊಂದರೆ ಉಂಟು ಮಾಡುವಂತಹ ಜಂಕ್ ಫುಡ್ ಸೇವನೆ
  • ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು. ಹಸಿವಿಲ್ಲದೆ ಆಗಾಗ ಊಟ ಮಾಡುವುದು
  • ಲಿವರ್ ಸಂಬಂಧಿ ರೋಗ
  • ಶುಚಿತ್ವದ ಕೊರತೆ
  • ಅಜೀರ್ಣ, ಅಸಿಡಿಟಿ (ಗ್ಯಾಸ್ ಟ್ರಬಲ್), ಹೆರಿಗೆ ನಂತರ ಸೇವಿಸುವ ವಿಶೇಷ ಆಹಾರ, ಆನುವಂಶೀಯತೆ
  • ಮಲದ್ವಾರದ ಸುತ್ತಲಿನ ಸ್ನಾಯುಗಳಲ್ಲಿ ಅಸ್ವಾಭಾವಿಕ ರಚನೆ
  • ಬಹಳ ಸಮಯದವರೆಗೆ ಒಂದೇ ಕಡೆ ಕುಳಿತುಕೊಳ್ಳುವುದು ಅಥವಾ ನಿಲ್ಲುವುದು.

ರೋಗ ಲಕ್ಷಣಗಳೇನು?

  • ಮಲದ್ವಾರದಿಂದ ರಕ್ತವು ಹನಿ-ಹನಿಯಾಗಿ ಬೀಳುವುದು ಅಥವಾ ಚಿಮ್ಮುವುದು
  • ಗುದನಾಳ ದೊಳಗೆ ಅಥವಾ ಸುತ್ತಲೂ ಊತ, ಗುದದ್ವಾರದಿಂದ ಗಂಟು (ಮೊಳಕೆ) ಹೊರಗೆ ಬರುವುದು. ಮಲ ವಿಸರ್ಜನೆ ಸಮಯದಲ್ಲಿ ತುರಿಕೆ
  • ಮಲ ವಿಸರ್ಜನೆ ವೇಳೆ ಮತ್ತು ನಂತರ ನೋವು
  • ಕಷ್ಟದಿಂದ ಮಲ ವಿಸರ್ಜನೆ

ಆಧುನಿಕ ಚಿಕಿತ್ಸೆಗಳೇನು?

  • ಸ್ಲ್ಕಿರೋಥೆರಪಿ- ಒಂದು ರಾಸಾಯನಿಕ ದ್ರವವನ್ನು ಪೈಲ್ಸ್ ಕರಗಿಸುವ ಸಲುವಾಗಿ ಹಿಗ್ಗಿದ ರಕ್ತನಾಳದ ಸುತ್ತಲೂ ಇಂಜೆಕ್ಟ್ ಮಾಡಲಾಗುತ್ತದೆ
  • ಕ್ರಯೋಥೆರಪಿ- ಮೊಳಕೆಯನ್ನು ಕುಗ್ಗಿಸಲು ಅತಿಶೈತ್ಯವನ್ನು ಪ್ರಯೋಗಿಸಲಾಗುತ್ತದೆ. ಇದರಿಂದ ಊತ, ಅತಿಯಾದ ಸ್ರಾವ, ಕೀವು ತುಂಬುವುದು ಆಗಬಹುದು
  • ರಬ್ಬರ್ ಬ್ಯಾಂಡ್ ಲೈಗೇಶನ್ ಸಹ ಮಾಡಲಾಗುತ್ತದೆ
  • ಶಸ್ತ್ರಚಿಕಿತ್ಸೆ
  • ಬೆಚ್ಚನೆಯ ನೀರಿನಲ್ಲಿ ಡೆಟಾಲ್ ಹಾಕಿ ಕುಳಿತುಕೊಳ್ಳುವುದು

ಆಯುರ್ವೆದ ಚಿಕಿತ್ಸೆ

ಶಸ್ತ್ರಚಿಕಿತ್ಸೆಯ ಭಯದಿಂದಲೇ ಅನೇಕರು ಉದಾಸೀನ ಮಾಡುತ್ತಾರೆ. ಆಯುರ್ವೆದದಲ್ಲಿ ರೋಗದ ಅವಸ್ಥಾನುಸಾರ ಔಷಧ ಚಿಕಿತ್ಸೆ, ತ್ರಿಪಲಾ ಗುಗ್ಗುಲು, ಸೂರಣವಟಕ, ಅರ್ಷಕುಟಾರ ರಸ, ಅಭಯಾರಿಸ್ಟ ಇತ್ಯಾದಿ ಮಾಡಲಾಗುತ್ತದೆ. ಕ್ಷಾರಕರ್ಮ ಚಿಕಿತ್ಸೆ, ಕ್ಷಾರಸೂತ್ರ, ಆಗ್ನಿ ಕರ್ಮದಂತಹ ಯಶಸ್ವಿ ಚಿಕಿತ್ಸೆಗಳಿವೆ. ಇದರ ಜತೆಗೆ ಜೀರ್ಣಕ್ರಿಯೆ ಸುಧಾರಣೆ ಮಾಡಿಕೊಳ್ಳುವುದು ಮುಖ್ಯ.

  • ನಾಗಕೇಸರ, ಯಷ್ಠಿಮಧುಚೂರ್ಣ ಹಾಲಿನಲ್ಲಿ ಸೇವಿಸುವುದ ರಿಂದ ರಕ್ತಸ್ರಾವ ನಿಲ್ಲುತ್ತದೆ
  • ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಳಲೇಕಾಯಿ ಚೂರ್ಣವನ್ನು ಮಜ್ಜಿಗೆ ಅಥವಾ ಜೇನುತುಪ್ಪದಲ್ಲಿ ಸೇರಿಸಿ ಸೇವಿಸುವುದು
  • ಹಿಂಗನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗುತ್ತದೆ
  • ಪ್ರತಿದಿನ ರಾತ್ರಿ ಮಲಗುವಾಗ ತ್ರಿಫಲಾಚೂರ್ಣವನ್ನು ಬೆಚ್ಚಗಿನ ನೀರಿನಲ್ಲಿ ಸೇವಿಸುವುದು
  • ತ್ರಿಫಲಾ ಕಷಾಯ ಅಥವಾ ಪಂಚ ವಲ್ಕಲಕಷಾಯವನ್ನು ಉಗುರ ಬೆಚ್ಚಗಿನ ನೀರುಳ್ಳ ಚಿಕ್ಕಪಾತ್ರೆಯಲ್ಲಿ ಹಾಕಿ 15 ನಿಮಿಷ ಕುಳಿತುಕೊಳ್ಳುವುದು.

ಆಹಾರ ಪದ್ಧತಿ

  • ನಾರಿನಂಶ ಹೆಚ್ಚಿರುವ ಹಸಿರು ತರಕಾರಿ, ಸೊಪ್ಪು, ಗಜ್ಜರಿ, ಮೂಲಂಗಿ, ಸೌತೆಕಾಯಿ ಸೇವಿಸಿ
  • ಹೆಚ್ಚು ನೀರು, ಎಳನೀರು, ಶರಬತ್ತು, ಮಜ್ಜಿಗೆ ಹಣ್ಣುಗಳನ್ನು ಸೇವಿಸಿ.
  • ಪ್ರತಿದಿನ ಕನಿಷ್ಠ 3-4 ಲೀಟರ್ ಕಾಯಿಸಿ ಆರಿಸಿದ ನೀರು ಕುಡಿಯಿರಿ.
  • ತಾಜಾ ಮಜ್ಜಿಗೆಯಲ್ಲಿ ಸ್ವಲ್ಪ ಹಸಿಶುಂಠಿ, ಹಿಂಗು, ಸೈಂದವ ಲವಣ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸೇವಿಸಿ. ತಯಾರಿಸಿ ಶೇಖರಿಸಿದ ಆಹಾರ ಪದಾರ್ಥ. ಕಡಲೆಹಿಟ್ಟಿನಿಂದ ತಯಾರಿಸಿ, ಎಣ್ಣೆಯಲ್ಲಿ ಕರಿದ ಮತ್ತು ಬೇಕರಿ ಪದಾರ್ಥಗಳು. ಹಸಿಮೆಣಸಿನಕಾಯಿ, ಆಲೂಗಡ್ಡೆ, ಬದನೆಕಾಯಿ ಸೇವಿಸಬೇಡಿ. ಅತಿಯಾದ ಚಹಾ, ಕಾಫಿ, ಕೋಲ್ಡ್ ಡ್ರಿಂಕ್ಸ್, ಮಾಂಸ, ಮೊಟ್ಟೆ ಒಳ್ಳೆಯದಲ್ಲ. ಮದ್ಯ, ಧೂಮ್ರಪಾನ, ತಂಬಾಕು ಸೇವನೆ ಬೇಡ.

ಗಮನದಲ್ಲಿರಬೇಕಾದ ಅಂಶಗಳು

  • ಗುದರೋಗಗಳಲ್ಲಿ ತಾಮ್ರದ ಉಂಗುರ ಹಾಕಿಕೊಳ್ಳುವುದು, ಬರೆ ಹಾಕಿಸುವುದು, ಬಳ್ಳಿ ಹಾಕಿಸುವುದು ಪರಿಹಾರವಲ್ಲ.
  • ಗುದ ಪ್ರದೇಶದಲ್ಲಿ ಕಂಡುಬರುವ ವ್ಯಾಧಿಗಳೆಲ್ಲ ಮೂಲವ್ಯಾಧಿ ಅಲ್ಲ. ತೊಂದರೆ ಕಂಡುಬಂದಲ್ಲಿ ಹಿಂಜರಿಯದೇ ಪರೀಕ್ಷೆ ಮಾಡಿಸಿಕೊಳ್ಳಿ.

(ಲೇಖಕರು ಪ್ರಾಧ್ಯಾಪಕರು, ಶಲ್ಯ ತಂತ್ರ ವಿಭಾಗ, ಆಯುರ್ವೆದ ಮಹಾವಿದ್ಯಾಲಯ, ಹುಬ್ಬಳ್ಳಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net