ಅಂಗವಿಕಲರಿಗಿದೆ ಹಲವು ಸೌಲಭ್ಯ; ಇಂದು ವಿಶ್ವ ಅಂಗವಿಕಲರ ದಿನ

Angavikala
Published on

| ಪಂಕಜ ಕೆ.ಎಂ. ಬೆಂಗಳೂರು

ಅಂಗವಿಕಲರು ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಯುಡಿಐಡಿ ಯೋಜನೆ ಜಾರಿಗೊಳಿಸಿದ್ದು, ಇದರಡಿ ರಾಜ್ಯದಲ್ಲಿ ಈಗಾಗಲೆ 3,05,434 ಅಂಗವಿಕಲರಿಗೆ ವಿಶಿಷ್ಠ ಗುರುತಿನ ಚೀಟಿ ವಿತರಿಸಲಾಗಿದೆ. ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 13,24,205 ಮಂದಿ ಅಂಗವಿಕಲರಿದ್ದು, ಈ ಪೈಕಿ ಯುಡಿಐಡಿ ಯೋಜನೆಯಲ್ಲಿ ಗುರುತಿನ ಚೀಟಿ ಪಡೆಯಲು 6 ಲಕ್ಷ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 3,05,434 ಮಂದಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಮುಂದಿನ ಒಂದು ವರ್ಷದೊಳಗೆ ಎಲ್ಲ 13.24 ಲಕ್ಷ ಮಂದಿಗೂ ವಿತರಿಸಲು ರಾಜ್ಯ ಸರ್ಕಾರ ಗುರಿ ಹೊಂದಿದೆ.

ಯುಡಿಐಡಿ ಕಾರ್ಡ್ ವಿಶೇಷತೆ ಏನು?: ಆರ್​ಪಿಡಬ್ಯ್ಲು ಕಾಯ್ದೆ 2016ರಡಿ ನಿರ್ದಿಷ್ಟಪಡಿಸಿದ 21 ಬಗೆಯ ಅಂಗವಿಕಲತೆವುಳ್ಳವರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸ ಲಾಗುವ ಸಮಗ್ರ ಮಾಹಿತಿಯುಳ್ಳ ವೈದ್ಯಕೀಯ ಪ್ರಮಾಣಪತ್ರದ ಗಣಕೀಕೃತ ಸ್ಮಾರ್ಟ್ ಕಾರ್ಡ್ ನೀಡುವುದೇ ಯುಡಿಐಡಿ ಯೋಜನೆ. ಈ ಕಾರ್ಡ್ ಅನ್ನು ಯಾರೊಬ್ಬರೂ ನಕಲು ಮಾಡಲು ಸಾಧ್ಯವಾಗುವುದಿಲ್ಲ. ಅಂತೆಯೇ, ಅಂಗವಿಕಲತೆ ಇಲ್ಲದವರು ಸುಳ್ಳು ಹೇಳಿ ಕಾರ್ಡ್ ಪಡೆಯಲು ಸಾಧ್ಯವಿಲ್ಲ. ಈ ಕಾರ್ಡ್ ಅಂಗವಿಕಲ ವ್ಯಕ್ತಿಯ ಏಕೈಕ ಗುರುತಿನ ಚೀಟಿ ಆಗಿರುತ್ತದೆ. ಇದನ್ನು ದೇಶಾದ್ಯಂತ ಬಳಕೆ ಮಾಡಬಹುದು. ಈ ಕಾರ್ಡ್ ಹೊಂದಿರುವ ಫಲಾನುಭವಿಗಳು ಸರ್ಕಾರದ ಎಲ್ಲ ಸೌಲಭ್ಯ ಸುಲಭವಾಗಿ ಪಡೆದು ಕೊಳ್ಳಬಹುದಾಗಿದೆ. ಇದರಿಂದ ಅಂಗವಿಕಲರ ಅಂಕಿ-ಅಂಶಗಳ ನಿರ್ವಹಣೆಯೂ ಸುಲಭವಾಗಲಿದೆ. ಸ್ಮಾರ್ಟ್​ಕಾರ್ಡ್ ಅನ್ನು ಇ-ರೀಡರ್ ಸಹಾಯದಿಂದ ಡಿಕೋಡ್ ಮಾಡುವುದರಿಂದ ಒಮ್ಮೆಗೆ ಫಲಾನುಭವಿಯ ಎಲ್ಲ ಮಾಹಿತಿ ಪಡೆಯಬಹುದಾಗಿದೆ.

ಕಾರ್ಡ್ ಪಡೆಯುವುದು ಹೇಗೆ?: ವೈದ್ಯಕೀಯ ತಪಾಸಣೆಗಾಗಿ ಅರ್ಜಿಯ ಪ್ರತಿಯೊಂದಿಗೆ ಸ್ಕಾ್ಯನ್ ಮಾಡಿದ ದಾಖಲೆಗಳನ್ನು ತಾಲೂಕು ಅಥವಾ ಆಸ್ಪತ್ರೆಗಳಲ್ಲಿ ತೋರಿಸಬೇಕು. ಅವರು ಆನ್​ಲೈನ್​ನಲ್ಲಿ ಫಲಾನುಭವಿಯ ಎಲ್ಲ ವಿವರ ದಾಖಲಿಸಿಕೊಡುತ್ತಾರೆ. ನಂತರ ಆರೋಗ್ಯ ಇಲಾಖೆಯಿಂದ ಕರೆ ಬರುತ್ತದೆ. ಆಗ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅವರೂ ಆನ್​ಲೈನ್ ಮೂಲಕ ವ್ಯಕ್ತಿಯ ಅಂಗವಿಕಲತೆಯ ಪ್ರಮಾಣಗಳನ್ನು ದಾಖಲಿಸುತ್ತಾರೆ. ನಂತರ ಯುಡಿಐಡಿ ಕಾರ್ಡ್ ಫಲಾನುಭವಿಯ ಮನೆಗೆ ಪೋಸ್ಟ್ ಮೂಲಕ ಬರಲಿದೆ. ಅರ್ಹ ಫಲಾನುಭವಿಗಳು ತಾಲೂಕು ಅಥವಾ ಜಿಲ್ಲಾ ಕಚೇರಿಯಲ್ಲಿ ಮಾಹಿತಿ ಪಡೆದು ಆನ್​ಲೈನ್ ಮೂಲಕ ಹೆಸರು ನೋಂದಾಯಿಸುವ ಮೂಲಕ ಯುಡಿಐಡಿ ಕಾರ್ಡ್ ಪಡೆಯಬಹುದಾಗಿದೆ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ ವಿ. ಮುನಿರಾಜು ತಿಳಿಸಿದ್ದಾರೆ.

ರಾಜ್ಯದಲ್ಲಿ 13.24 ಲಕ್ಷ ಅಂಗವಿಕಲರು: ರಾಜ್ಯದಲ್ಲಿ ಅಂಧರು 2,64,170, ಶ್ರವಣ ದೋಷ -2,35,691, ವಾಕ್ ದೋಷ -90, 741, ದೈಹಿಕ ಅಂಗವಿಕಲತೆ- 2,71,982, ಬುದ್ಧಿ ಮಾಂದ್ಯರು - 93, 974, ಮಾನಸಿಕ ಅಸ್ವಸ್ಥರು -20,913, ಬಹುವಿಧ ಅಂಗವಿಕಲರು- 1,000,13, ಇತರೆ ಅಂಗವೈಕಲತೆ ಉಳ್ಳವರು 2,46,721 ಮಂದಿ ಸೇರಿ 13,24,205 ಅಂಗವಿಕಲರಿದ್ದಾರೆ. ಈ ಪೈಕಿ 18 ವರ್ಷ ಮೇಲ್ಪಟ್ಟ ಸುಮಾರು 8 ಲಕ್ಷ ಮಂದಿ ಪಿಂಚಣಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

ಇರುವ ಸವಲತ್ತುಗಳು

  • ಕಿವುಡು ಮಕ್ಕಳಿಗಾಗಿ ಮೈಸೂರು, ಕಲಬುರಗಿ, ಬೆಳಗಾವಿ ಮತ್ತು ಬಳ್ಳಾರಿಯಲ್ಲಿ 1- 10ನೇ ತರಗತಿವರೆಗೆ ವಿಶೇಷ ಶಾಲೆ.
  • ದೃಷ್ಟಿ ದೋಷವುಳ್ಳ ಮಕ್ಕಳಿಗೆ ಕಲಬುರಗಿ, ಮೈಸೂರು, ದಾವಣಗರೆ ಮತ್ತು ಹುಬ್ಬಳ್ಳಿ 1- 10ನೇ ತರಗತಿವರೆಗೆ ವಿಶೇಷ ಶಾಲೆ.
  • ಎನ್​ಜಿಒ ಮುಖಾಂತರ 34 ವಿಶೇಷ ಶಾಲೆಗಳ ಕಾರ್ಯಾಚರಣೆ.
  • 141 ಅಂಗವಿಕಲ ಶಿಶು ಕೇಂದ್ರಗಳು ಸರ್ಕಾರದ ಅನುದಾನದಲ್ಲಿ ಎನ್​ಜಿಒ ಮುಖೇನ ಕಾರ್ಯನಿರ್ವಹಣೆ.
  • ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್​ಟಾಪ್​ಗಳನ್ನು ವಿತರಣೆ.
  • ಪಬ್ಲಿಕ್ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಪ್ರೋತ್ಸಾಹಧನ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ, ಔದ್ಯೋಗಿಕ ಶಿಕ್ಷಣ, ವೈದ್ಯಕೀಯ ಸೇರಿ ಉನ್ನತ ಶಿಕ್ಷಣ ಪಡೆಯುವ ಅಂಗವಿಕಲರಿಗೆ ಪರೀಕ್ಷಾ ಶುಲ್ಕ , ಬೋಧನಾ ಶುಲ್ಕ ಹಾಗೂ ಕ್ರೀಡಾ ಶುಲ್ಕವನ್ನು ಮರುಪಾವತಿ.
  • ಐಎಎಸ್, ಕೆಎಎಸ್ ಬರೆಯುವವರಿಗೆ ಮಾಸಿಕ ಭತ್ಯೆ. ? ಉದ್ಯೋಗಸ್ಥ ಅಂಗವಿಕಲ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ 23 ಜಿಲ್ಲೆಗಳಲ್ಲಿ ವಸತಿ ವ್ಯವಸ್ಥೆ. ? ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ 50 ಸಾವಿರ ರೂ., ಪ್ರತಿಭೆ ಯೋಜನೆಯಡಿ ಕಲಾವಿದರಿಗೆ 10 ಸಾವಿರ ರೂ., ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ 2 ಸಾವಿರ ರೂ. ಸಹಾಯಧನ. ? ಆಧಾರ್ ಯೋಜನೆಯಡಿ ಒಂದು ಲಕ್ಷ ರೂ. ವರೆಗೆ ಸಬ್ಸಿಡಿ ದರದಲ್ಲಿ ಸಾಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net