ವಿದ್ಯಾ ವಿನಯ ಸಂಪನ್ನ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳು

Vidhushekhara Bharathi
Published on

| ಮಂಡಗದ್ದೆ ಪ್ರಕಾಶ್ ಬಾಬು ಕೆ.ಆರ್.

ಶೃಂಗೇರಿ ಶಾರದಾಪೀಠದಲ್ಲಿ 37ನೇ ಜಗದ್ಗುರುಗಳಾಗಿ ವಿರಾಜಮಾನರಾಗಿರುವ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಅದ್ವಿತೀಯ ಪಾಂಡಿತ್ಯವುಳ್ಳವರು. ಮಹಾಮೇಧಾವಿಗಳು, ಮಿತಭಾಷಿಗಳು, ವೇದಶಾಸ್ತ್ರಪಾರಂಗತರು, ಪೀಠದ ಸಂಪ್ರದಾಯಗಳನ್ನು ಸ್ವಲ್ವವೂ ತಪ್ಪದೇ ಧಾರ್ವಿುಕ ವಿಧಿಗಳನ್ನು ಲೋಪವಿಲ್ಲದೆ ನಡೆಸುವವರು. ಸದ್ಗುಣಗಳ ಆಗರ ಕೂಡ ಅವರು.

ಪೂರ್ವಾಶ್ರಮ: ಮಹಾಸ್ವಾಮಿಗಳ ಪೂರ್ವಾಶ್ರಮದ ಹೆಸರು ಕುಪ್ಪಾವೆಂಕಟೇಶ್ವರಪ್ರಸಾದ ಶರ್ಮ. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಅನಂತವರಂ ಗ್ರಾಮದವರಾದ ಕುಪ್ಪಾಸುಬ್ರಹ್ಮಣ್ಯ ಅವಧಾನಿ ಹಾಗೂ ಸೀತಾನಾಗಲಕ್ಷ್ಮಿ ದಂಪತಿಯ ದ್ವಿತೀಯ ಪುತ್ರರಾದ ಇವರು ಶ್ರೀಮುಖ ಸಂವತ್ಸರದ ಶ್ರಾವಣ ಶುಕ್ಲಪಕ್ಷದ ಪಂಚಮಿ ಶನಿವಾರದಂದು (ನಾಗರಪಂಚಮಿ) ಅಂದರೆ 24-7-1993ರಲ್ಲಿ ತಿರುಪತಿಯಲ್ಲಿ ಜನಿಸಿದರು. ಇವರ ಗೋತ್ರ ಕೌಂಡಿನ್ಯ. ಆಪಸ್ತಂಬ ಸೂತ್ರ. ಇವರ ವಂಶ ಅನೇಕ ಯಜ್ಞಗಳನ್ನು ಮಾಡಿದ್ದ ಶ್ರೋತ್ರಿಯ ವಂಶ. ಶ್ರೀಗಳವರ ತಾತನವರು ಶ್ರೀಕುಪ್ಪಾ ರಾಮಗೋಪಾಲ ವಾಜಪೇಯಯಾಜಿಗಳು. ಜಗದ್ಗುರುಗಳು ತಮ್ಮ ಐದನೇ ವಯಸ್ಸಿನಲ್ಲಿ ಉಪನಯನದ ನಂತರ ಬಾಲ್ಯಪಾಠವನ್ನು ತಮ್ಮ ತಂದೆಯ ಬಳಿ ಕಲಿತು, ತಮ್ಮ ತಾತನ ಬಳಿ ಕೃಷ್ಣಯಜುರ್ವೆದವನ್ನು ಅಧ್ಯಯನ ಮಾಡಿದರು. ಆಂಧ್ರಪ್ರದೇಶದ ‘ಹಂಸಲದೀವ’ ಎಂಬಲ್ಲಿ ಪ್ರತಿವರ್ಷ ಮಾಘಮಾಸದಲ್ಲಿ ಭಾಗವತ ಸಪ್ತಾಹ ನಡೆಯುವುದು. ಈ ಸಪ್ತಾಹದಲ್ಲಿ ಜಗದ್ಗುರುಗಳು ತಮ್ಮ ಚಿಕ್ಕವಯಸ್ಸಿನಿಂದಲೇ ಪಾಲ್ಗೊಳ್ಳುತ್ತಿದ್ದರು. ಬಾಲ್ಯದಿಂದಲೇ ದೇವರಲ್ಲಿ, ಗುರುಹಿರಿಯರಲ್ಲಿ ಅಪಾರವಾದ ನಂಬಿಕೆವುಳ್ಳವರು. ಭಾರತೀತೀರ್ಥ ಸ್ವಾಮಿಗಳ ದರ್ಶನ:

ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಮೊದಲನೆಯ ಬಾರಿಗೆ ತಮ್ಮ ತಂದೆಯೊಡನೆ 2006ರಲ್ಲಿ ಶೃಂಗೇರಿಗೆ ಬಂದು ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಸ್ವಾಮಿಗಳ ದರ್ಶನ ಪಡೆದರು. ಗುರುಗಳ ದರ್ಶನ ಇವರ ಮೇಲೆ ಅಗಾಧ ಪ್ರಭಾವ ಬೀರಿತು. ಜಗದ್ಗುರುಗಳ ಸನ್ನಿಧಿಯಲ್ಲಿ ಶಾಸ್ತ್ರಾಧ್ಯಯನವನ್ನು ಮಾಡುವ ಅಭಿಲಾಷೆಯನ್ನು ಇವರು ವ್ಯಕ್ತಪಡಿಸಿದಾಗ ಅದಕ್ಕೆ ಭಾರತೀತೀರ್ಥರ ಸಮ್ಮತಿಯೂ ಲಭಿಸಿತು. ನಂತರ ಜಗದ್ಗುರುಗಳ ಜತೆಯಲ್ಲಿಯೇ ಇದ್ದು ಗುರುಗಳ ಆದೇಶವನ್ನು ಪಾಲಿಸುತ್ತಾ ಅಧ್ಯಯನ ನಿರತರಾದರು. ಶೃಂಗೇರಿಯ ವಿದ್ವಾನ್ ತಂಗಿರಾಲ ಶಿವಕುಮಾರ ಶರ್ಮರ ಬಳಿ ಸಂಸ್ಕೃತ ಕಾವ್ಯಗಳನ್ನು ಅಧ್ಯಯನ ಮಾಡಿದರು. ನಂತರ ಕೆಲವೇ ದಿನಗಳಲ್ಲಿ ಸಂಸ್ಕೃತದಲ್ಲಿ ವಿಶಿಷ್ಟವಾದ ಪಾಂಡಿತ್ಯ ಗಳಿಸಿದರು.

ಇವರ ವಿನಯ, ಪ್ರತಿಭೆ, ವಿಧೇಯತೆ, ಅಧ್ಯಯನಶೀಲತೆಯನ್ನು ಕಂಡು ಜಗದ್ಗುರು ಭಾರತೀತೀರ್ಥ ಸ್ವಾಮಿಗಳೇ ಶಾಸ್ತ್ರಪಾಠವನ್ನು ಮಾಡಿರುವರು. ಮೀಮಾಂಸಾಶಾಸ್ತ್ರವನ್ನು ತರ್ಕಶಾಸ್ತ್ರವನ್ನು ಸಂಪೂರ್ಣವಾಗಿ ಜಗದ್ಗುರುಗಳಲ್ಲಿಯೇ ಕಲಿತರು.

ಇವರ ಅಸಾಮಾನ್ಯ ಗುರುಭಕ್ತಿ, ಅದ್ವಿತೀಯ ಪಾಂಡಿತ್ಯ, ವೈರಾಗ್ಯ ಸ್ವಭಾವವನ್ನು ಕಂಡ ಜಗದ್ಗುರುಗಳು (23-1-2015) ಜಯನಾಮ ಸಂವತ್ಸರದ ಮಾಘ ಶುದ್ಧ ತೃತೀಯ ದಿನದಂದು ಕುಪ್ಪಾವೆಂಕಟೇಶ ಪ್ರಸಾದ ಶರ್ಮರವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡು ಸಂನ್ಯಾಸ ದೀಕ್ಷೆಯನ್ನು, ಶ್ರೀ ಶ್ರೀ ವಿಧುಶೇಖರ ಭಾರತೀ ಎಂಬ ಹೆಸರಿನ ಯೋಗಪಟ್ಟವನ್ನು ನೀಡಿ ಅನುಗ್ರಹಿಸಿದರು. ಇತ್ತೀಚೆಗೆ ಮಹಾಸನ್ನಿಧಾನಂಗಳವರಾದ ಶ್ರೀ ಶ್ರೀ ಭಾರತೀ ತೀರ್ಥರು ಹೆಚ್ಚಿನ ಸಾಧನೆಗಾಗಿ ಏಕಾಂತವಾಗಿರಲು ಬಯಸಿದರು. ಆಗ ಅವರ ಶಿಷ್ಯರಾದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಗೆ ಮಠದ ಎಲ್ಲ ಜವಾಬ್ದಾರಿ ವಹಿಸಿದರು. ಅದನ್ನು ಅವರು ಶ್ರದ್ಧಾಭಕ್ತಿಯಿಂದ ಮಾಡಿಕೊಂಡು ಬರುತ್ತಿದ್ದು, ಗುರುಗಳಿಂದ ಮೆಚ್ಚುಗೆ ಪಡೆದಿರುವರು.

ವರ್ಧಂತಿ ನಾಳೆ: ವಿಧುಶೇಖರ ಭಾರತೀ ಮಹಾಸ್ವಾಮಿಗಳ 31ನೇ ವರ್ಧಂತಿಯು ಹಿಂದೂ ಪಂಚಾಂಗದ ಪ್ರಕಾರ ಆಗಸ್ಟ್ 21ರಂದು ಸೋಮವಾರ ನಡೆಯಲಿದೆ. ಆಗಸ್ಟ್ 20ರಂದು ಶ್ರೀಗಳವರು ಕಾಲಭೈರವ ದೇವರಿಗೆ ಪೂಜೆ ಸಲ್ಲಿಸುವರು. ವರ್ಧಂತಿ ದಿನ ಅವಿಷ್ಠಾನಗಳ ದರ್ಶನ ಮಾಡಿ ನಂತರ ತಮ್ಮ ಗುರುಗಳಿಗೆ ನಮನವನ್ನು ಸಲ್ಲಿಸುವರು. ಶ್ರೀಗಳವರು ಅಂದು ಶ್ರಾವಣ ಸೋಮವಾರ ಆಗಿರುವುದರಿಂದ ಬೆಳಗ್ಗೆ ರತ್ನಗಣಪತಿ, ಚಂದ್ರಮೌಳೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವರು.

(ಲೇಖಕರು ಆಧ್ಯಾತ್ಮಿಕ ಚಿಂತಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net