

ಸರ್ಕಾರಿ ಸ್ವಾಮ್ಯದ, ರಕ್ಷಣಾ ಉತ್ಪನ್ನಗಳ ಉತ್ಪಾದಕ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತಯಾರಿಸಿದ ಲಘು ಯುದ್ಧ ಹೆಲಿಕಾಪ್ಟರ್ನ (ಎಲ್ಸಿಎಚ್) ಮೊದಲ ಬ್ಯಾಚ್ ಈಚೆಗಷ್ಟೇ ವಾಯುಪಡೆಗೆ ಸೇರ್ಪಡೆಯಾಗಿದೆ. ಈ ದೇಶೀಯ ಸಾಧನೆ ಹೆಮ್ಮೆಯ ಸಂಗತಿಯೇ ಆದರೂ ರಫ್ತು ಮಾರುಕಟ್ಟೆಯಲ್ಲಿ ಎಚ್ಎಎಲ್ ಹೇಳಿಕೊಳ್ಳುವಂತಹ ಸ್ಥಾನವನ್ನೇನೂ ಗಳಿಸಿಲ್ಲ. ಮುಂದಿನ ದಿನಗಳಲ್ಲಿ ರಫ್ತು ವಲಯದಲ್ಲಿ ಸಾಧನೆ ಮಾಡುವ ನಿರೀಕ್ಷೆಗಳನ್ನು ಹೊಂದಿದೆ.
2013ರಿಂದ 2,040ಕ್ಕೂ ಹೆಚ್ಚು ಬೌದ್ಧಿಕ ಆಸ್ತಿ ಹಕ್ಕುಗಳ ಅರ್ಜಿಗಳನ್ನು ಸಲ್ಲಿಸಿರುವುದಾಗಿಯೂ, 640ಕ್ಕೂ ಹೆಚ್ಚು ಪೇಟೆಂಟ್ಗಳು, ಕೈಗಾರಿಕಾ ವಿನ್ಯಾಸ, ಹಕ್ಕುಸ್ವಾಮ್ಯ ಮತ್ತು ಟ್ರೇಡ್ವಾರ್ಕ್ಗಳನ್ನು ಸಂಪಾದಿಸಿರುವುದಾಗಿಯೂ ಎಚ್ಎಎಲ್ ತಿಳಿಸಿದೆ.
ಎಚ್ಎಎಲ್ ಪಡೆದುಕೊಂಡಿರುವ ಪೇಟೆಂಟ್ಗಳು ಅದು ಅಭಿವೃದ್ಧಿಪಡಿಸಿರುವ ಬೌದ್ಧಿಕ ಆಸ್ತಿ ಹಕ್ಕುಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ಇದರಲ್ಲಿ ತಾಂತ್ರಿಕತೆ, ಉತ್ಪನ್ನಗಳು, ಸಾಫ್ಟ್ವೇರ್ಗಳು, ದೇಶೀಯವಾಗಿ ನಿರ್ವಿುಸಿರುವ ವಿಮಾನಗಳು ಹಾಗೂ ಹೆಲಿಕಾಪ್ಟರ್ಗಳು ಎಚ್ಎಎಲ್ ಆದಾಯದ ಮುಖ್ಯ ಮೂಲಗಳಾಗಿವೆ.
ಭಾರತ ಸರ್ಕಾರದ ‘ಆತ್ಮನಿರ್ಭರ ಭಾರತ’ ಕಾರ್ಯಕ್ರಮದ ಅಡಿಯಲ್ಲಿ, ದೇಶೀಯ ನಿರ್ವಣದ ಯೋಜನೆಗಳಾದ ಲಘು ಯುದ್ಧ ವಿಮಾನ(ಎಲ್ಸಿಎ), ಲಘು ಯುದ್ಧ ಹೆಲಿಕಾಪ್ಟರ್ (ಎಲ್ಸಿಎಚ್), ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಹಾಗೂ ಎಚ್ಟಿಟಿ-40 ಗಳ ನಿರ್ವಣದ ಮೂಲಕ ಎಚ್ಎಎಲ್ ಖಾಸಗಿ ಸಂಸ್ಥೆಗಳ ಜೊತೆ ಕಾರ್ಯ ನಿರ್ವಹಿಸಿ, ಉಪಕರಣಗಳ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ.
ಎಚ್ಎಎಲ್ ಫ್ಲೈಟ್ ಕಂಟ್ರೋಲ್ ತಂತ್ರಜ್ಞಾನದಲ್ಲಿ ಪರಿಣತಿ ಸಾಧಿಸಿದೆ. ಇದನ್ನು ಮುಂದಿನ ದೇಶೀಯ ನಿರ್ವಣದ ಯುದ್ಧ ವಿಮಾನಗಳಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಭಾರತದ ಬಳಿ ಇನ್ನೂ ‘ಬಿಯಾಂಡ್ ವಿಷುವಲ್ ರೇಂಜ್’ ಯುದ್ಧ ಕ್ಷಿಪಣಿ ವ್ಯವಸ್ಥೆ ಲಭ್ಯವಿಲ್ಲ. ಆದ್ದರಿಂದ ಎಲ್ಸಿಎಗಳಲ್ಲಿ ಫ್ರೆಂಚ್ ಕ್ಷಿಪಣಿಗಳನ್ನು ಅಳವಡಿಸುವುದು ಸೂಕ್ತ ಎಂದು ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಎಚ್ಎಎಲ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಆರ್ ಆಂಡ್ ಡಿ) ನೀಡಿರುವ ಮಾಹಿತಿಗಳ ಪ್ರಕಾರ, ಸಂಸ್ಥೆ ಪಡೆದಿರುವ ಪೇಟೆಂಟ್ಗಳಲ್ಲಿ ಸ್ವಯಂಚಾಲಿತ ತಾಪಮಾನ ಕಂಟ್ರೋಲರ್ ಹಾಗೂ ವಾಟರ್ ಡ್ರೇಯ್ನ ವಾಲ್ವ್, ಇಂಜಿನ್ ಕಂಟ್ರೋಲ್ ಆಂಪ್ಲಿಫೈಯರ್ ಪರೀಕ್ಷೆ ನಡೆಸಲು ಹಾಗೂ ಟ್ಯೂನಿಂಗ್ ನಡೆಸಲು ಬೇಕಾದ ಇಂಜಿನ್ ರೆಸ್ಪಾನ್ಸ್ ಮಾದರಿ ಹಾಗೂ ಕಾಕ್ಪಿಟ್ ಸಿಮ್ಯುಲೇಶನ್, ಏವಿಯಾನಿಕ್ ವ್ಯವಸ್ಥೆಗಳಿಗೆ ಬೇಕಾದ ಆನ್ಲೈನ್ ಸೆನ್ಸರ್ ಡೇಟಾ ನಿರ್ವಹಣೆಗಳೂ ಸೇರಿವೆ. ಎಚ್ಎಎಲ್ ಪೇಟೆಂಟ್ ಪಡೆದಿರುವ ಏರ್ ಟರ್ಬೆನ್ ವೀಲ್ ಅನ್ನು ಹಾಕ್ ಯುದ್ಧ ವಿಮಾನದಲ್ಲಿ ಅಳವಡಿಸಲಾಗುವುದರಿಂದ, ವಿದೇಶಿ ವಿನಿಮಯ ಗಳಿಸಲೂ ಸಹಕಾರಿಯಾಗುತ್ತದೆ.
ಎಚ್ಎಎಲ್ ಪ್ರಸ್ತುತ ಪಡೆದಿರುವ ಆರ್ಡರ್ಗಳ ಮೌಲ್ಯ ಹತ್ತು ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅದರೊಡನೆ, ರಿಪೇರಿ ಹಾಗೂ ನಿರ್ವಹಣೆಗಳ ಮೂಲಕ, 2023ರ ಹಣಕಾಸು ವರ್ಷದಲ್ಲಿ ಭಾರತ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳಿಂದ 1.6 ಬಿಲಿಯನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ. ಮಲೇಷ್ಯಾದಲ್ಲಿ ಕಚೇರಿಯನ್ನು ಆರಂಭಿಸುವುದಾಗಿ ಎಚ್ಎಎಲ್ ಇತ್ತೀಚೆಗೆ ಘೊಷಿಸಿದೆ. ಈ ಕಚೇರಿಯು ರಾಯಲ್ ಮಲೇಷ್ಯನ್ ಏರ್ಫೋರ್ಸ್ಗೆ 18 ಲೀಡ್ ಇನ್ ಫೈಟರ್ ಟ್ರೇನರ್ಸ್ ಹಾಗೂ ಸಾಗಾಟದ ವ್ಯವಸ್ಥೆಗಳನ್ನು ಒದಗಿಸುವ ಕುರಿತು ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಸು-30 ಎಂಕೆಎಂ ಹಾಗೂ ಹಾಕ್ ಯುದ್ಧ ವಿಮಾನಗಳ ಮೇಲ್ದರ್ಜೆಗೇರಿಸುವಿಕೆಯೂ ಸೇರಿವೆ.
ಈ ವರ್ಷದ ಆರಂಭದಲ್ಲಿ, ಭಾರತವು ಫಿಲಿಪ್ಪೀನ್ಸ್ ಜೊತೆ ಮೊದಲ ಪ್ರಮುಖ ರಫ್ತು ಒಪ್ಪಂದಕ್ಕೆ ಸಹಿ ಹಾಕಿದೆ. 375 ಮಿಲಿಯನ್ ಡಾಲರ್ ಮೊತ್ತದ ಈ ಒಪ್ಪಂದದಲ್ಲಿ ಭಾರತ ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್ ಆಧಾರಿತ ಆಂಟಿಶಿಪ್ ಕ್ಷಿಪಣಿ ವ್ಯವಸ್ಥೆಗಳನ್ನು ಪೂರೈಸಲಿದೆ.
ಆದರೆ, ಎಚ್ಎಎಲ್ನ ಯುದ್ಧ ವಿಮಾನಗಳ ಹಾಗೂ ಹೆಲಿಕಾಪ್ಟರ್ಗಳ ರಫ್ತು ಶೈಶವಾವಸ್ಥೆಯಲ್ಲೇ ಇದ್ದು ರಫ್ತು ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಈಚೆಗೆ ಈಜಿಪ್ಟ್ಗೆ ಭೇಟಿ ನೀಡಿದ್ದರು. ಈಜಿಪ್ಟ್ ಪ್ರಸ್ತುತ ಭಾರತದಿಂದ 70 ಲಘು ಯುದ್ಧ ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ. ಭಾರತವು ಅಲ್ಲಿ ಎಲ್ಸಿಎ ಉತ್ಪಾದನಾ ಘಟಕ ಆರಂಭಿಸುವ ಭರವಸೆ ನೀಡಿದೆ. ಇನ್ನೊಂದೆಡೆ, ಧ್ರುವ ಹಾಗೂ ಎಲ್ಸಿಎಚ್ಗಳನ್ನು ಭಾರತವು ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡುತ್ತಿದೆ. ಎಚ್ಎಎಲ್ನ ರಫ್ತು ಉದ್ದೇಶಗಳಿಗೆ ಇರುವ ಪ್ರಮುಖ ತೊಡಕೆಂದರೆ-ಭಾರತವು ಯುದ್ಧ ವಿಮಾನಗಳ ಇಂಜಿನ್ಗಳನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ ಭಾರತ ಯುದ್ಧ ವಿಮಾನಗಳ ಮಾರಾಟ ಮತ್ತು ನಿರ್ವಹಣೆಗಾಗಿ ಓಇಎಂ (ಮೂಲ ಸಾಧನ ತಯಾರಕರು) ಅನುಮತಿಯ ಮೇಲೆ ಅವಲಂಬಿತವಾಗಿದೆ.