

| ಜಗದೀಶ ಬುರ್ಲಬಡ್ಡಿ ಬೆಂಗಳೂರು
ಕಳೆದ ವರ್ಷ ಮೇ ತಿಂಗಳಲ್ಲಿ ಜಾಗತಿಕ ವಾಯು ಶಕ್ತಿ ಶ್ರೇಯಾಂಕಗಳು ಎಂಬ ವರದಿಯನ್ನು ವರ್ಲ್ಡ್ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್ಕ್ರಾಫ್ಟ್ (ಡಬ್ಲ್ಯುಡಿಎಂಎಂಎ) ಸಂಸ್ಥೆ ಪ್ರಕಟಿಸಿತು. ಇದರನುಸಾರ ಚೀನಾದ ಪೀಪಲ್ಸ್ ಲಿಬರೇಶನ್ ಆರ್ವಿು ವಾಯುಪಡೆಗಿಂತಲೂ ಮೇಲಿನ ಸ್ಥಾನವನ್ನು ಭಾರತೀಯ ವಾಯುಪಡೆ ಪಡೆದುಕೊಂಡಿತು. ಭಾರತೀಯ ವಾಯುಪಡೆಯು ಜಾಗತಿಕವಾಗಿ 6ನೇ ರ್ಯಾಂಕ್ ಪಡೆದುಕೊಂಡಿದ್ದರೆ, ಚೀನಾ ವಾಯುಪಡೆಗೆ ದೊರೆತಿದ್ದು 7ನೇ ಸ್ಥಾನ. 2023ನೇ ಸಾಲಿನಲ್ಲೂ ಇದೇ ರ‍್ಯಾಂಕಿಂಗ್ ಮುಂದುವರಿದಿದೆ. ಇನ್ನೊಂದು ನೆರೆಯ ತಂಟೆಕೋರ ರಾಷ್ಟ್ರವಾದ ಪಾಕಿಸ್ತಾನವು ರ್ಯಾಂಕಿಂಗ್ನಲ್ಲಿ 18ನೇ ಸ್ಥಾನದಲ್ಲಿದೆ.
ಅಚ್ಚರಿಯ ಸಂಗತಿ ಎಂದರೆ, ವಿಮಾನಗಳ ಸಂಖ್ಯಾಬಲ ಹಾಗೂ ಇತರ ಯುದ್ಧೋಪಕರಣಗಳ ಪ್ರಮಾಣದಲ್ಲಿ ಭಾರತಕ್ಕಿಂತಲೂ ಚೀನಾದ ವಾಯುಪಡೆ ಸಾಕಷ್ಟು ಮುಂದಿದೆ. ಭಾರತೀಯ ವಾಯುಪಡೆಯ ಬಳಿ ಇರುವ ವಿಮಾನಗಳ ಸಂಖ್ಯೆ 1,645. ಚೀನಾ ಬಳಿ ಇರುವ ವಿಮಾನಗಳ ಸಂಖ್ಯೆ 2084. ಹಾಗಿದ್ದರೆ, ಚೀನಾದ ವಾಯುಪಡೆಯು ಭಾರತದ ವಾಯುಪಡೆಗಿಂತಲೂ ಕಡಿಮೆ ರ‍್ಯಾಂಕಿಂಗ್ ಪಡೆದಿದ್ದೇಕೆ ಎಂಬುದಕ್ಕೆ ಉತ್ತರ ಸ್ಪಷ್ಟವಾಗಿದೆ.
ರ‍್ಯಾಂಕಿಂಗ್ ನೀಡಲು ಡಬ್ಲ್ಯುಡಿಎಂಎಂಎ ಅನುಸರಿಸಿರುವುದು ಟ್ರೂ ವ್ಯಾಲ್ಯು ರೇಟಿಂಗ್ (ಟಿವಿಆರ್- ನೈಜ ಮೌಲ್ಯ ಶ್ರೇಯಾಂಕ) ಎಂಬ ಸಾಕಷ್ಟು ವಸ್ತುನಿಷ್ಠ ವಿಧಾನವನ್ನು. ಇದು ವಾಯುಪಡೆಯೊಂದರ ಒಟ್ಟಾರೆ ಶಕ್ತಿಯ ಅಂಕಿ-ಅಂಶಗಳನ್ನು ಬಿಂಬಿಸುತ್ತದೆ. ಆಧುನೀಕರಣದ ಮಟ್ಟ, ಸರಕುಸಾಮಗ್ರಿ ಬೆಂಬಲ ಕಾರ್ಯವಿಧಾನಗಳು, ಆಕ್ರಮಣಕಾರಿ/ರಕ್ಷಣಾತ್ಮಕ ಸಾಮರ್ಥ್ಯಗಳು, ವಿಶೇಷ ಮಿಷನ್ ಸಾಮರ್ಥ್ಯ, ಬಾಂಬರ್ ದಾಸ್ತಾನುಗಳು, ತರಬೇತಿ ವೈಖರಿ, ವೈಮಾನಿಕ ಕೈಗಾರಿಕಾ ಸಾಮರ್ಥ್ಯ ಮತ್ತು ಪಡೆಯ ದಕ್ಷತೆ ಮುಂತಾದ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು ರ‍್ಯಾಂಕಿಂಗ್ ನೀಡಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತೀಯ ವಾಯುಪಡೆಯು ಚೀನಾ ವಾಯುಪಡೆಗಿಂತಲೂ ಹೆಚ್ಚು ಸಶಕ್ತ ಮತ್ತು ಸಮರ್ಥವಾಗಿದೆ.
ಭಾರತೀಯ ವಾಯುಪಡೆಯ ಒಟ್ಟು 1645 ವಿಮಾನಗಳಲ್ಲಿ 632 ಮಾತ್ರ ಯುದ್ಧ ವಿಮಾನಗಳಾಗಿವೆ. ವಾಸ್ತವದಲ್ಲಿ ಭಾರತವು ಜಾಗತಿಕವಾಗಿ ಮೂರನೇ ಶಕ್ತಿಶಾಲಿ ವಾಯುಪಡೆಯಾಗಿದೆ. ಮೊದಲ ಐದು ಸ್ಥಾನಗಳ ಪೈಕಿ ಅಮೆರಿಕದ ವಿವಿಧ ವಾಯುಪಡೆಗಳೇ ಮೂರು ಸ್ಥಾನಗಳನ್ನು ಅಲಂಕರಿಸಿವೆ. ಹೀಗಾಗಿ, ಭಾರತದ ವಾಯುಪಡೆಗಿಂತ ಉನ್ನತ ರ‍್ಯಾಂಕಿಂಗ್ ಇರುವ ರಾಷ್ಟ್ರಗಳೆಂದರೆ ಅಮೆರಿಕ ಮತ್ತು ರಷ್ಯಾ ಮಾತ್ರ.
ಸ್ವದೇಶಿ ತೇಜಸ್ ವಿಮಾನ: ಮೇಕ್ ಇನ್ ಇಂಡಿಯಾ ಕ್ರಮವಾಗಿ ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತಯಾರಿ ಸಿರುವ ಲಘು ಯುದ್ಧ ವಿಮಾನ (ಎಲ್ಸಿಎ) ತೇಜಸ್ ಎಂಕೆ1 ಯುದ್ಧ ವಿಮಾನಗಳನ್ನು ಬಲವಂತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗುತ್ತಿದೆ ಎಂಬ ಟೀಕೆಗಳಿವೆ. ಈಗ ವಾಯಪಡೆ ಯಲ್ಲಿ 2 ಸ್ಕಾ್ವಡ್ರನ್ಗಳಲ್ಲಿ 40 ತೇಜಸ್ ಎಂಕೆ1 ಯುದ್ಧವಿಮಾನಗಳಿವೆ. ಆದರೆ, ಈ ವಿಮಾನಗಳು ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸುವುದಿಲ್ಲ ಎಂಬ ಆರೋಪಗಳಿವೆ. 73 ತೇಜಸ್ ಎಂಕೆ 1 ಎ ವಿಮಾನ ಪೂರೈಸಲು 2021ರ ಜೂನ್ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಯುದ್ಧ ವಿಮಾನಗಳ ಬಲಾಬಲ: ಭಾರತೀಯ ವಾಯುಪಡೆಗೆ ಇನ್ನಷ್ಟು ಕೊಂಬಾಟ್ ಸ್ಕಾ್ವಡ್ರನ್ (ಯುದ್ಧ ವಿಮಾನಗಳ ಘಟಕ) ಅಗತ್ಯವಿದೆ. ರಫೇಲ್ ಯುದ್ಧವಿಮಾನಗಳಿರುವ ಎರಡು ಸ್ಕಾ್ವಡ್ರನ್, ಸು-30 ಎಂಕೆಐ ಯುದ್ಧ ವಿಮಾನಗಳಿರುವ 12 ಸ್ಕಾ್ವಡ್ರನ್, ಮಿಗ್-21 ಯುದ್ಧ ವಿಮಾನಗಳಿರುವ ಮೂರು ಸ್ಕಾ್ವಡ್ರನ್, ಮಿಗ್-29 ಯುದ್ಧ ವಿಮಾನಗಳಿರುವ ಮೂರು ಸ್ಕಾ್ವಡ್ರನ್ ಮತ್ತು ಮಿರಾಜ್ 2000 ಯುದ್ಧ ವಿಮಾನಗಳಿರುವ ಮೂರು ಸ್ಕಾ್ವಡ್ರನ್, ಜಾಗ್ವಾರ್ ಯುದ್ಧ ವಿಮಾನಗಳಿರುವ ಆರು ಸ್ಕಾ್ವಡ್ರನ್ಗಳು ಭಾರತೀಯ ವಾಯುಪಡೆಯಲ್ಲಿವೆ. ಅಲ್ಲದೆ, ಸ್ವದೇಶಿ ನಿರ್ವಿುತ ಲಘು ಯುದ್ಧ ವಿಮಾನ ತೇಜಸ್ನ ಸೀಮಿತ ಕಾರ್ಯಾಚರಣೆ ಸಾಮರ್ಥ್ಯದ ಎರಡು ಸ್ಕಾ್ವಡ್ರನ್ಗಳಿವೆ. ಈ ಪೈಕಿ ಮಿಗ್-21 ಯುದ್ಧ ವಿಮಾನಗಳ ಮೂರು ಸ್ಕಾ್ವಡ್ರನ್ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ನಿವೃತ್ತಿಗೊಳಿಸಲಾಗುತ್ತಿದೆ. ಇದಾದ ನಂತರ, 2025 ಮತ್ತು 2032ರ ನಡುವೆ ಹಂತಹಂತವಾಗಿ ಜಾಗ್ವಾರ್ ಯುದ್ಧವಿಮಾನಗಳನ್ನು ನಿವೃತ್ತಿಗೊಳಿಸಬೇಕಾಗುತ್ತದೆ. ಜಾಗ್ವಾರ್, ಮಿಗ್ 29 ಮತ್ತು ಮಿರಾಜ್ 2000 ಯುದ್ಧ ವಿಮಾನಗಳನ್ನು ಈಗಾಗಲೇ ನಿಗದಿತ ಅವಧಿ ಮೀರಿ ಬಳಸಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ.
ಸ್ಕ್ವಾಡ್ರನ್ಗಳ ಕೊರತೆ: ಭಾರತೀಯ ವಾಯುಪಡೆಗೆ ಸರ್ಕಾರವು 42 ಸ್ಕಾ್ವಡ್ರನ್ಗಳನ್ನು ಮಂಜೂರಾತಿ ಮಾಡಿದ್ದರೂ ಈಗ ಇರುವುದು 31 ಮಾತ್ರ. ಅಲ್ಲದೆ, ಸ್ಕಾ್ವಡ್ರನ್ಗಳ ಸಂಖ್ಯೆಯನ್ನು ದಶಕಗಳಿಂದ ಪರಿಷ್ಕರಣೆ ಮಾಡಲಾಗಿಲ್ಲ. ರಕ್ಷಣೆಯ ದೃಷ್ಟಿಯಿಂದ ಈ ಸಂಖ್ಯಾಬಲ ತೀರ ಕಡಿಮೆ. ಅಲ್ಲದೆ, ಇವುಗಳಲ್ಲಿ ಸಾಕಷ್ಟು ನಿವೃತ್ತಿಯ ಅಂಚಿಗೆ ಬಂದಿರುವುದು ಆತಂಕಕಾರಿ ಸಂಗತಿ. ‘ಈ 31 ಸ್ಕಾ್ವಡ್ರನ್ಗಳ ಮೂಲಕ ದೇಶಾದ್ಯಂತ ಕಾವಲು ಕಾಯುವುದು ಮತ್ತು ಯುದ್ಧ ವಾಯು ಗಸ್ತು ಮಾಡು ವುದು ಅಸಾಧ್ಯ’ ಎಂದು ವಾಯುಪಡೆ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಹೇಳಿದ್ದಾರೆ.
ಬ್ರಿಟಿಷರ ಆಡಳಿತದಲ್ಲಿ ಅಸ್ತಿತ್ವಕ್ಕೆ: ಭಾರತೀಯ ವಾಯುಪಡೆಯನ್ನು ಬ್ರಿಟಿಷ್ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ 1932ರ ಅಕ್ಟೋಬರ್ 8ರಂದು ಸ್ಥಾಪಿಸಲಾಯಿತು. 1933ರ ಏಪ್ರಿಲ್ನಲ್ಲಿ ಮೊದಲ ಕಾರ್ಯಾಚರಣೆಯ ಸ್ಕಾ್ವಡ್ರನ್ ಅಸ್ತಿತ್ವಕ್ಕೆ ಬಂದಿತು. ಎರಡನೆಯ ಮಹಾಯುದ್ಧದಲ್ಲಿ ಭಾಗವಹಿಸಿದ ನಂತರದಲ್ಲಿ, ಭಾರತದಲ್ಲಿನ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್ಫೋರ್ಸ್ ಎಂದು ಕರೆಯಲಾಯಿತು. ಈ ಮೊದಲು ಭಾರತದಲ್ಲಿ ವಾಯುಪಡೆಯನ್ನು 1932ರಲ್ಲಿ ಬ್ರಿಟನ್ನ ರಾಯಲ್ ಏರ್ ಫೋರ್ಸ್ ಪೋಷಕ ಪಡೆಯಾಗಿ ಬೆಳೆಸಲಾಯಿತು. ಭಾರತೀಯ ವಾಯುಪಡೆಯು ಭಾರತೀಯ ಸಶಸ್ತ್ರ ಪಡೆಗಳ ಪ್ರಮುಖ ಅಂಗವಾಗಿದ್ದು, ದೇಶವು ಹೋರಾಡಿದ ಯುದ್ಧಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.